Monday 23 August 2021

ಶಾಲಾ, ಕಾಲೇಜು ಪ್ರಾರಂಭದ ಹಿನ್ನಲೆಯಲ್ಲಿ ಖುಷಿ ಹಂಚಿಕೊಂಡ ವಿದ್ಯಾರ್ಥಿಗಳು.


ಬೆಂಗಳೂರು: 'ಆನ್​​ಲೈನ್​​ಗಿಂತ ಆಫ್​​ಲೈನ್ ಕ್ಲಾಸ್​​ಗಳೇ ಬೆಸ್ಟ್ ಸರ್. ತುಂಬಾ ಖುಷಿಯಾಗಿದೆ, ನಿಮಗೆ ಧನ್ಯವಾದಗಳು' ಎಂದು ವಿದ್ಯಾರ್ಥಿಗಳು, ಇಂದು 9, 10 ನೇ ಇಯತ್ತೆ ತರಗತಿಗಳು ಮತ್ತು ಪಿಯು ತರಗತಿಗಳು ಪುನರಾರಂಭವಾದ ಸಂಭ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಜೊತೆಗೆ ಹಂಚಿಕೊಂಡರು.

ಖುದ್ದು ಪರಿಶೀಲನೆಗಾಗಿ ಸಚಿವರು ಮತ್ತು ಅಧಿಕಾರಿಗಳೊಂದಿ ಸಿಎಂ ಬೊಮ್ಮಾಯಿ‌ ಅವರು, ಇಂದು ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು‌. ಪ್ರಿನ್ಸಿಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂವಾದ ನಡೆಸಿದಾಗ ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿದರು.

'ಆನ್​​ಲೈನ್ ತರಗತಿಯಲ್ಲಿ ಶಿಕ್ಷಕರೊಂದಿಗೆ ಪ್ರಶ್ನೋತ್ತರಗಳಿಗೆ ಅವಕಾಶವಿಲ್ಲ. ಏನಾದರೂ ಡೌಟ್ ಬಂದರೆ ಕೇಳುವಂತಿಲ್ಲ. ನೆಟ್​ವರ್ಕ್ ಸಮಸ್ಯೆಯಿಂದ ಕೆಲವೊಮ್ಮೆ ಸರಿಯಾಗಿ ಕೇಳಿಸುತ್ತಿದ್ದಿಲ್ಲ. ಸಂಪರ್ಕ ಕಡಿತವಾದಾಗ ಒಂಟಿಯಾಗಿ ಗೋಡೆ ನೋಡುತ್ತಾ ಕುಳಿತುಕೊಳ್ಳಬೇಕಾಗುತ್ತಿತ್ತು' ಎಂದೊಬ್ಬ ವಿದ್ಯಾರ್ಥಿನಿ ಹೇಳಿದಳು.

ನೇರ ತರಗತಿ ಪುನಾರಂಭಿಸಿರುವುದು ಹಿಗ್ಗು ಹಿಡಿಯಲಾರದಷ್ಟಾಗಿದೆ. ಶಿಕ್ಷಕರ ಜೊತೆ ನೇರ ಸಂವಾದ ನಡೆಸಬಹುದು. ಬಹಳ ದಿನಗಳ ನಂತರ ಸಹಪಾಠಿಗಳ ಜೊತೆಗೂ ಬೆರೆತು, ಪರಸ್ಪರ ಚರ್ಚಿಸಲು ಅವಕಾಶ ಸಿಕ್ಕಿದೆ. ನಿಮಗೆ(ಸಿಎಂ) ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ವಿದ್ಯಾರ್ಥಿಗಳು ಹರ್ಷದ ಹೊಳೆಯಲ್ಲಿ ಮಿಂದೆದ್ದರೆ, ಪ್ರಿನ್ಸಿಪಾಲರು ಹಾಗೂ ಶಿಕ್ಷಕರು ಸಹಿತ ಹರ್ಷೋಲ್ಲಾಸ ವ್ಯಕ್ತಪಡಿಸಿದರು.

ಸಿಎಂ ಬೊಮ್ಮಾಯಿ ಮಾತನಾಡಿ, 'ಕೆಲವು ದಿನಗಳ ಹಿಂದೆಯಷ್ಟೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದೆವು. ಇವತ್ತು ನಿಜವಾಗಲೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕರೊನಾದಿಂದ ಸ್ವಾತಂತ್ರ್ಯ ದೊರೆತಿದೆ. ಅಷ್ಟೊಂದು ಸಂಭ್ರಮ-ಸಡಗರದಲ್ಲಿ ಇರುವುದು ಕಂಡು ಸರ್ಕಾರದ ಪ್ರಯತ್ನ ಸಾರ್ಥಕಗೊಳಿಸಿದ ಭಾವ ಮೂಡಿದೆ' ಎಂದರು. ಪಾಲಕರು ನಿರ್ಭೀತಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು‌. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಶಾಲೆ-ಕಾಲೇಜುಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳು ಎಲ್ಲಿ? ಯಾವಾಗ? ಏಕೆ? ಹೇಗೆ? ಎಂದು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ತಾರ್ಕಿಕವಾಗಿ ಚಿಂತನೆ ಮಾಡಬೇಕು. ಕಷ್ಟಪಟ್ಟು ಓದಿ ಯಶಸ್ಸು ಗಳಿಸಿ. ಜೊತೆಗೆ ಆರೋಗ್ಯದ ಕಡೆ ಗಮನ ಹರಿಸಿ ಎಂದ ಸಿಎಂ ಬೊಮ್ಮಾಯಿ, 'ಜೀವನವಿಡೀ ವಿದ್ಯಾರ್ಥಿಯೇ ಆಗಿರಬೇಕು. ಇಲ್ಲಿ ಟೈಂ ಟೇಬಲ್​ ಇರುತ್ತೆ, ಶಿಕ್ಷಕರು ಇರುತ್ತಾರೆ. ಆದ್ರೆ ಕಾಲೇಜು ಮುಗಿದ ಮೇಲೆ ಅಲ್ಲಿ ಶಿಕ್ಷಕರು ಇರೋದಿಲ್ಲ. ಆಗ ಪ್ರತಿನಿತ್ಯ ಪರೀಕ್ಷೆ ಇರುತ್ತೆ, ಅದಕ್ಕೆ ನೀವು ತಯಾರಾಗಬೇಕು' ಎಂದು ಸಿಎಂ ಕಿವಿಮಾತು ಹೇಳಿದರು.

No comments:

Post a Comment