Monday 23 August 2021

ಆಕಸ್ಮಿಕವಾಗಿ ಹಾರಿ ಬಂದ ಗುಂಡು ಪೊಲೀಸ್ ಕಾನ್‌ಸ್ಟೆಬಲ್ ಜೀವ ತೆಗೀತು!

 

ದಾವಣಗೆರೆ, ಆಗಸ್ಟ್ 23: ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಹಾರಿದ ಗುಂಡು ಕುತ್ತಿಗೆಗೆ ತಗುಲಿ ಪೊಲೀಸ್ ಕಾನ್‌ಸ್ಟೆಬಲ್ ಬಲಿ ಪಡೆದ ಹೃದಯವಿದ್ರಾವಕ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಳೆದ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಚೇತನ್ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಈ ಘಟನೆ ಸಂಭವಿಸಿದೆ.

ಪೊಲೀಸ್ ಕಾನ್‌ಸ್ಟೆಬಲ್ ಚೇತನ್ ಬೆಳಿಗ್ಗೆ 11 ಗಂಟೆಗೆ ಠಾಣೆಗೆ ಆಗಮಿಸಿದ್ದ ವೇಳೆ ಪಿಸ್ತೂಲ್‌ನಿಂದ ಹಾರಿದ ಗುಂಡು ಕುತ್ತಿಗೆಗೆ ತಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಹತ್ತಿರದಲ್ಲಿಯೇ ಇರುವ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಕೂಡಲೇ ಕರೆದುಕೊಂಡು ಬಂದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ.

ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿದರು. ಇನ್ನು ಘಟನಾ ಸ್ಥಳಕ್ಕೆ ಐಜಿಪಿ ಎಸ್. ರವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಲಾಖೆ ತನಿಖೆ ನಡೆಸುವಂತೆ ಐಜಿಪಿ ಸೂಚಿಸಿದ್ದಾರೆ.

ಘಟನೆ ನಡೆದದ್ದು ಹೇಗೆ?

ಅವರು ಡ್ರಿಲ್ ಹೇಳಿಕೊಡುವ ಟೀಚರ್. ಹೊರಗಡೆ ಲೋಕಾಭಿರಾಮರಾಗಿ ಮಾತನಾಡಿಕೊಂಡು ನಿಂತಿದ್ದರು. ಇದ್ದಕ್ಕಿದ್ದಂತೆ ಹಾರಿ ಬಂದ ಗುಂಡು, ನೋಡ ನೋಡುತ್ತಿದ್ದಂತೆ ಕತ್ತು ಸೀಳಿ, ರಕ್ತ ಚಿಮ್ಮಿತು. ದೊಪ್ಪನೆಂದು ಕೆಳಗೆ ಕುಸಿದು ಬಿದ್ದರು‌. ಆಯುಧ ಸ್ವಚ್ಛಗೊಳಿಸುವಾಗ ಆದ ಆಚಾತುರ್ಯ ಪೊಲೀಸ್ ಕಾನ್‌ಸ್ಟೆಬಲ್ ಜೀವವನ್ನೇ ಬಲಿ ಪಡೆದಿದೆ. ಮೃತಪಟ್ಟ ಚೇತನ್ ತನ್ನದಲ್ಲದ ತಪ್ಪಿಗೆ ಜೀವವನ್ನೇ ಬಿಟ್ಟಿದ್ದಾರೆ.

ಜಿಲ್ಲಾ ಸಶಸ್ತ್ರ ಪಡೆಯ ಕಚೇರಿಯಲ್ಲಿ ಆಯುಧಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಗುತ್ತದೆ. ತೋಳಹುಣಸೆ ಬಳಿ "ಫೈರಿಂಗ್ ರೇಂಜ್'ನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭ್ಯಾಸ ಮುಗಿಸಿ ವಾಪಸ್ ಬಂದಿದ್ದರು. ಯಾವಾಗ ಟ್ರೈನಿಂಗ್ ಮುಗಿಸಿ ಬಂದರೂ ಸ್ವಚ್ಛಗೊಳಿಸುವ ಪ್ರಕ್ರಿಯೆ ಇರುತ್ತದೆ. ಹಾಗಾಗಿ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಈ ಗುಂಡು ಚೇತನ್ ಕುತ್ತಿಗೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಅವರನ್ನು ತಕ್ಷಣವೇ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಐಜಿಪಿ ಎಸ್. ರವಿ ಮಾಹಿತಿ ನೀಡಿದ್ದಾರೆ.

"ಚನ್ನಗಿರಿಯವರಾದ ಚೇತನ್ 2012ನೇ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಮದುವೆಯಾಗಿ ಕೇವಲ 5 ವರ್ಷವಾಗಿದ್ದು, ನಾಲ್ಕು ವರ್ಷದ ಮಗ ಇದ್ದಾನೆ. ಮುಂದಿನ ದಿನಗಳಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಚೇತನ್ ಕುಟುಂಬಕ್ಕೆ ಯಾವ ರೀತಿ‌ ನೆರವು ನೀಡಬೇಕೆಂಬ ಬಗ್ಗೆ ಚರ್ಚಿಸಿ ಎಲ್ಲಾ ರೀತಿಯ ಸಹಕಾರ ‌ನೀಡಲು ಟೊಂಕಕಟ್ಟಿ ನಿಂತಿದ್ದೇವೆ," ಎಂದು ಆಸ್ಪತ್ರೆಗೆ ಭೇಟಿ ನೀಡಿದ ಐಜಿಪಿ ಎಸ್‌. ರವಿ ತಿಳಿಸಿದ್ದಾರೆ.

"ಪಿಸ್ತೂಲ್ ಹಾಗೂ ರೈಫಲ್ ಕ್ಲೀನ್ ಮಾಡುತ್ತಿದ್ದವರು ಬೇರೆ. ಚೇತನ್ ನಿಂತಿದ್ದಲ್ಲಿಗೆ ಗುಂಡು ಹಾರಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ. ಆಕಸ್ಮಿಕವಾಗಿ ಈ ದುರಂತ ಸಂಭವಿಸಿದೆ," ಎಂದು ಐಜಿಪಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಚೇತನ್ ಅಕಾಲಿಕ ಮರಣಕ್ಕೆ ಅವರ ಕುಟುಂಬಸ್ಥರು, ಸ್ನೇಹಿತರು, ಪೊಲೀಸ್ ಸಿಬ್ಬಂದಿಯ ಆಕ್ರಂದನ ಮುಗಿಲು‌ ಮುಟ್ಟಿದೆ. ಒಟ್ಟಿನಲ್ಲಿ ಕೇವಲ 29 ವರ್ಷಕ್ಕೆ ತನ್ನ ಬದುಕಿನ ಪಯಣ ಮುಗಿಸಿದ ಚೇತನ್ ಎಲ್ಲರ ಪಾಲಿಗೆ ಅಚ್ಚುಮೆಚ್ಚಿನ ಮೇಷ್ಟ್ರು ಆಗಿದ್ದರು.

ಜಿಲ್ಲಾ ಸಶಸ್ತ್ರ ಪಡೆಗೆ ಹೊಸದಾಗಿ ಸೇರುವವರಿಗೆ ಶಿಸ್ತಿನ ಪಾಠ ಹೇಳಿಕೊಡುವ ಕೆಲಸ ಮಾಡುತ್ತಿದ್ದರು. ಡ್ರಿಲ್‌ನಿಂದ ಹಿಡಿದು ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿ ಹೇಗಿರಬೇಕು, ಯಾವೆಲ್ಲಾ ಅಭ್ಯಾಸ ಮಾಡಬೇಕು ಎಂಬ ಬಗ್ಗೆಯೂ ಸಲಹೆ ಸೂಚನೆಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕೊಡುತ್ತಿದ್ದರು.

ಟ್ರಾಫಿಕ್ ಎಸ್‌ಐ ಶ್ರೀಧರ್ ಸಹೋದರಿಯನ್ನು ಪ್ರೀತಿ ಮಾಡಿ ಮದುವೆಯಾಗಿದ್ದ ಚೇತನ್ ಒಳ್ಳೆಯ ವ್ಯಕ್ತಿ. "ಕೆಲಸದಲ್ಲಿ ಯಾವಾಗಲೂ ಮುಂದೆ. ಯಾವ ವಿಚಾರದಲ್ಲಿಯೂ ತಪ್ಪು ಮಾಡಿದ ವ್ಯಕ್ತಿಯಲ್ಲ. ಶ್ರದ್ಧೆಯಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದರು. ಯಾರೊಂದಿಗೂ ದ್ವೇಷ ಕಟ್ಟಿಕೊಂಡವರಲ್ಲ. ಆದರೂ ವಿಧಿಯಾಟ ಬೇಸರ ತರಿಸಿದೆ," ಎಂದು ಶ್ರೀಧರ್ ಹೇಳಿದ್ದಾರೆ.

 

No comments:

Post a Comment