Wednesday 9 June 2021

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್: ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್, ಸಹ ಕಾರ್ಯದರ್ಶಿ, ಚಿತ್ರದುರ್ಗ ವಿಜ್ಞಾನ ಕೇಂದ್ರ. 


ಗ್ರಹಣ ಎಂದಾಕ್ಷಣ ಕೆಲವರು ಭಯಭೀತರಾಗಿ ನಿಲ್ಲುತ್ತಾರೆ, ಅಲ್ಲದೇ ಗ್ರಹಣದ ಬಗೆಗಿನ ಮೂಢನಂಬಿಕೆಗಳಿಗೆ ಕಟ್ಟುಬಿದ್ದ ಕೆಲವರನ್ನು ಆಷಾಢಭೂತಿಗಳಾದ ಟೆಲಿಸ್ವಾಮಿಗಳೇ ಹೆದರಿಸುತ್ತಾರೆ. ವಿಜ್ಞಾನದ ಉಪಕರಣವಾದ ದೂರದರ್ಶನ, ರೇಡಿಯೋ ಮುಂತಾದವುಗಳಿಂದ ಅವೈಜ್ಞಾನಿಕತೆಯನ್ನು ಬಿತ್ತುವುದು ಎಷ್ಟು ಸರಿ? ನೀವೇ ಯೋಚಿಸಿ.



ಸಾದಾ ವ್ಯಕ್ತಿಗಳು ಸಾಧಾರಣವಾಗಿ ವೀಕ್ಷಿಸಬೇಕಾದ ಆಕಾಶದ ಅಪರೂಪದ ದೃಶ್ಯವನ್ನು ನೋಡದೇ ಮನೆಯಲ್ಲಿಯೇ ಅವಿತುಕುಳಿತ ಸಾಕಷ್ಟು ಮಂದಿಗಳ ಮಂದಮತಿಗೆ ಏನೆನ್ನಬೇಕೋ ತಿಳಿಯದು. ಇದೊಂದು ಆಕಾಶದಲ್ಲಿ ನಡೆಯುವ ನಕ್ಷತ್ರ ಮತ್ತು ಗ್ರಹ
, ಉಪಗ್ರಹಗಳ ಭ್ರಮಣೆ ಮತ್ತು ಪರಿಭ್ರಮಣೆಯಿಂದ ಉಂಟಾಗುವ ಸಂಗತಿಯಾಗಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಇಂತದ್ದೊಂದು ಗ್ರಹಣ ನಡಯುತ್ತಲೇ ಇರುತ್ತದೆ ಆದರೆ ನಮಗೆ ಕೆಲವು ಗ್ರಹಣಗಳು ಮಾತ್ರ ಗೋಚರಿಸುತ್ತವೆ ಅಷ್ಟೇ. 



ಹೌದು ಇಷ್ಟೆಲ್ಲಾ ನಂಬಿಕೆ ಅಪನಂಬಿಕೆಗಳ ಮಧ್ಯೆ ಖಗೋಲ ವೀಕ್ಷಕರುವಿಜ್ಞಾನಾಸಕ್ತರು ಅತೀವ ಕುತೂಹಲದಿಂದ ಈ ಭಾಗಶಃ ಉಂಗುರ ಸೂರ್ಯಗ್ರಹಣವನ್ನು ವೀಕ್ಷಿಸಲು ಕಾದು ಕುಳಿತಿದ್ದಾರೆ. ಇಂತಹ ಅದ್ಭುತ ಉಂಗುರ ಸೂರ್ಯಗ್ರಹಣವು ದಿನಾಂಕ. 10 ಜೂನ್ 2021 ರಂದು ಭಾರತದಲ್ಲೂ ವೀಕ್ಷಣೆಗೆ ಸಿಗಲಿದೆ. ಇದು ಅಂದು ಮಧ್ಯಾಹ್ನ 11.42ಕ್ಕೆ ಆರಂಭವಾಗಿ 12.51ಕ್ಕೆ ಮುಕ್ತಾಯಗೊಳ್ಳಲಿದೆ.( ಭಾಗಶಃ ಸೂರ್ಯಗ್ರಹಣವಾಗಿ ಮಾತ್ರ) ಗ್ರಹಣವನ್ನು ಭಾರತದ ಅರುಣಾಚಲ ಪ್ರದೇಶ ಮತ್ತು ಲಡಾಖ್ ನ ಕೆಲವು ಭಾಗಗಳಲ್ಲಿ ಮಾತ್ರ ಕಾಣಬಹುದು.


ಅಲ್ಲದೇ ವಿಶ್ವದ ವಿವಿದೆಡೆ ಅಮೇರಿಕಾದ ಉತ್ತರ ಭಾಗ, ಉತ್ತರ ಕೆನಡಾ, ಯುರೋಪ್, ಗ್ರೀನ್ಲ್ಯಾಂಡ್ ಮುಂತಾದ ಕಡೆ ಉಂಗುರ ಸೂರ್ಯಗ್ರಹಣವೂ, ಭಾಗಶಃವಾಗಿ ಏಷ್ಯಾ ಮತ್ತು ರಷ್ಯಾಗಳಲ್ಲಿ ಕಾಣಲಿದೆ. ಈ ದೇಶಗಳಲ್ಲಿ ಮಧ್ಯಾಹ್ನ 1.42ಕ್ಕೆ ಆರಂಭವಾಗಿ, ಮಧ್ಯಕಾಲ (ಉಂಗುರ ಸೂರ್ಯಗ್ರಹಣ): 3.30ಕ್ಕೆ ಕಂಡು ಸಂಜೆ 6.41ಕ್ಕೆ ಮುಕ್ತಯಗೊಳ್ಳಲಿದೆ.

            ಈ ಭಾಗಶಃ ಸೂರ್ಯಗ್ರಹಣವು ಭಾರತದಲ್ಲಿ ಎಲ್ಲರ ವೀಕ್ಷಣೆಗೆ ಸಿಗದ ಕಾರಣ ನೀವು ನಾಸಾ ದ ಜಾಲತಾಣದಲ್ಲಿ ಹಾಗೂ www.timeanddate.com ನಲ್ಲಿ ನೇರವೀಕ್ಷಣೆ ಮಾಡಬಹುದಾಗಿದೆ. 


ಯಾವುದೇ ಕಾರಣಕ್ಕೂ ಗ್ರಹಣಕಾಲದಲ್ಲಿ ಸೂರ್ಯನನ್ನು ನೇರವಾಗಿ ನೋಡಬಾರದು. ಸುರಕ್ಷಿತ ಮಾನ್ಯತೆ ಪಡೆದ ಸೋಲಾರ್ ಕನ್ನಡಕಗಳನ್ನು ಬಳಸಿ, ಅಲ್ಲದೇ ಸೂಜಿರಂಧ್ರ ಬಿಂಬಗ್ರಾಹಿ ಅಥವಾ ಸೂರ್ಯನ ಬಿಂಬವನ್ನು ಗೋಡೆಯ ಮೇಲೆ ಪಡೆದು ವೀಕ್ಷಿಸಬಹುದು. ದೂರದರ್ಶಕಗಳು, ಬೈನಾಕ್ಯುಲರ್, ಕ್ಯಾಮೆರಾಗಳನ್ನು ಬಳಸಿ ಕೂಡ ಗ್ರಹಣ ವೀಕ್ಷಿಸಬಹುದು ಆದರೆ ಅವುಗಳ ಅಕ್ಷಿಮಸೂರಕ್ಕೆ ಸೋಲಾರ್ ಫಿಲ್ಟರ್ ಅಳವಡಿಸುವುದು ಕಡ್ಡಾಯ. ನೇರವಾಗಿ ದೂರದರ್ಶಕಗಳಿಂದ ಗ್ರಹಣ ನೋಡುವುದು ಕಣ್ಣುಗಳಿಗೆ ಅಪಾಯಕಾರಿ.


ಸುರಕ್ಷಿತ ವಿಧಾನಗಳಿಂದ ನಿಮ್ಮ ಮನೆಯಂಗಳದಲ್ಲಿಯೇ ಈ ವರ್ಷದ ಭಾಗಶಃ(ಉಂಗುರ) ಸೂರ್ಯಗ್ರಹಣವನ್ನು ವೀಕ್ಷಿಸಿ ಆನಂದಿಸಿ. ಆಕಾಶ ನೋಡಲು ನೂಕುನುಗ್ಗಲು ಏಕೆ? ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. 



ನವೀನ್.ಪಿ.ಆಚಾರ್,  ಸಹ ಕಾರ್ಯದರ್ಶಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)

ಚಿತ್ರದುರ್ಗ ತಾಲ್ಲೂಕು. 


No comments:

Post a Comment