Sunday, 6 June 2021

ಪ್ರಶ್ನಿಸದೇ ಒಪ್ಪಬೇಡಿ!? ಎಂದ ವಿಚಾರವಾದಿ, ನರಸಿಂಹಯ್ಯನವರ ಜನ್ಮ ದಿನದ ವಿಶೇಷ.

ನವೀನ್ ಪಿ ಆಚಾರ್, ಸಹ ಶಿಕ್ಷಕರು ಮೆದೇಹಳ್ಳಿ.ಇವರಿಂದ,ನರಸಿಂಹಯ್ಯನವರ ಜನ್ಮ ದಿನದ, ಕುರಿತಾಗಿ ವಿಶೇಷ ಲೇಖನ.

 


ಈ ವಾಕ್ಯವನ್ನು ಎಲ್ಲೋ ಕೇಳಿದ್ದೇವೆ, ಅಂತ ಅನ್ನಿಸಿದರೆ ಅದರ ಕರ್ತೃ ಡಾ.ಎಚ್.ನರಸಿಂಹಯ್ಯ, ಇವರು ಯಾವಾಗಲೂ ವೈಜ್ಞಾನಿಕವಾಗಿ ಚಿಂತಿಸುವ ಮೂಲಕ ನಾಡಿಗೆ ಬೆಳಕಾಗಿದ್ದರು. ಅಮೇರಿಕಾದಲ್ಲಿ ಡಾಕ್ಟರೇಟ್‌ ಪಡೆದ ನಂತರವೂ ಹಲವು ವರ್ಷಗಳ ಕಾಲ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಅವರು, ಎಚ್.ಎನ್‌ ಮೇಷ್ಟ್ರು! ಎಂದೇ ಪ್ರಖ್ಯಾತಿ ಪಡೆದವರು. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಜೈಲುವಾಸವನ್ನೂ ಅನುಭವಿಸಿದವರು. ಮಹಾತ್ಮ ಗಾಂಧಿಜಿಯವರು ಬೆಂಗಳೂರಿಗೆ ಬಂದಾಗ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ನಾಡಿನ ತುಂಬೆಲ್ಲ ಮೂಢನಂಬಿಕೆಯನ್ನು ವಿರೋಧಿಸುತ್ತಾ ವೈಜ್ಞಾನಿಕ ಚಳುವಳಿಗೆ ನಾಂದಿ ಹಾಡಿದ ಮಹಾಪುರುಷನಿಗೆ ಇಂದು ಜನ್ಮ ದಿನದ ಸಂಭ್ರಮ.

"ನಿಂಬೆಹಣ್ಣು ಬೇಡ ಕುಂಬಳಕಾಯಿ ಕೊಡಿ" ಹೀಗೆಂದು ಸಾಯಿ ಬಾಬಾರನ್ನು ಪ್ರಶ್ನಿಸಿದ್ದು ಎಚ್. ನರಸಿಂಹಯ್ಯ ಅವರು. ಇದರ ಹಿನ್ನೆಲೆ ಇಷ್ಟೇ. ಸಾಯಿ ಬಾಬಾ ತನ್ನ ಭಕ್ತರಿಗೆ ಆಶೀರ್ವದಿಸಲು ಚೂಂ ಮಂತ್ರ ಮಾಡಿ ನಿಂಬೆ ಹಣ್ಣು, ಉಂಗುರು, ಚೈನ್, ಎಚ್.ಎಂ.ಟಿ ವಾಚ್, ಬೂದಿ... ಹೀಗೆ ಏನೆಲ್ಲಾ ಕೊಡುತ್ತಿದ್ದರು ಎಂಬುದು ಬಾಬಾ ಇದ್ದ ಕಾಲದ ಪ್ರತೀತಿ, ನಂಬಿಕೆ ಮತ್ತು ಅದನ್ನು ಕಂಡವರಿಗೆ ಸತ್ಯ?! ಹೇಳೀ ಕೇಳೀ ವೈಜ್ಞಾನಿಕ ಮನೋಭಾವದ ಎಚ್.ಎನ್. ಆಯ್ತಪ್ಪಾ ನಿಮ್ಮ ಬಾಬಾ ಮಂತ್ರದಿಂದ ಆ ವಸ್ತುಗಳನ್ನೆಲ್ಲಾ ಸೃಷ್ಟಿಸೋದಾದ್ರೆ ನಾನು ಕೇಳಿದ್ದನ್ನೂ ಕೊಡಲಿ. ನಿಂಬೆ ಹಣ್ಣಿನ ಬದಲು ಕುಂಬಳಕಾಯಿ ಕೋಡೋಕೆ ಹೇಳಿ. ಎಚ್.ಎಂ.ಟಿ ವಾಚ್ ಬದಲು ಫೇವರ್ ಲ್ಯೂಬಾ ಗಡಿಯಾರ ಕೊಡೋಕೆ ಹೇಳಿ ಎಂದು ಬಾಬಾ ಅಹಂಗೆ ಪ್ರಶ್ನೆಯ ಮೂಲಕ ಧಮಕಿ ಹಾಕಿದ್ದರು.

     ಖ್ಯಾತ ಭೌತಶಾಸ್ತ್ರಜ್ಞ, ವೈಜ್ಞಾನಿಕ ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞರೂ ಆಗಿದ್ದ ಎಚ್ ನರಸಿಂಹಯ್ಯನವರದ್ದು ಇಂದು 101ನೇ ಜನ್ಮದಿನ. 1972 ರಿಂದ 1977ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ತಂದವರು. 1942ರಲ್ಲಿ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯತಾವಾದಿಗಳು. ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್‌ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ರಾಜ್ಯದ ಶಿಕ್ಷಣ ಕ್ಷೇತ್ರದ ದಿಗ್ಗಜರನ್ನು ಸ್ಮರಿಸಿಕೊಳ್ಳುವುದಾದರೆ ಮೊದಲು ನೆನಪಾಗುವುದೇ ಇವರ ಹೆಸರು.


 ಡಾ.ಹೆಚ್.ಎನ್ ಎಂದೇ ಜನಪ್ರಿಯರಾದ 'ಹೊಸೂರು, ನರಸಿಂಹಯ್ಯನವರು' ಜೂನ್ 6 , 1920  ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ 'ಹೊಸೂರು' ಗ್ರಾಮದಲ್ಲಿ ಒಂದು ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ 'ಹನುಮಂತಪ್ಪ', ತಾಯಿ 'ವೆಂಕಟಮ್ಮ', ತಂಗಿ 'ಗಂಗಮ್ಮ'. ಮನೆಯಲ್ಲಿ ಮಾತಾಡುವ ಭಾಷೆ ತೆಲುಗು. ಆದರೆ ಕನ್ನಡವೆಂದರೆ ಹೆಚ್ಚು ಪ್ರೀತಿ, ಹಾಗೂ ಪ್ರಾವೀಣ್ಯತೆ ಇತ್ತು.ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ,1935 ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು.

ಡಾ. ಹೆಚ್.ನರಸಿಂಹಯ್ಯ ಅವರು  ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.

ಅವರು ವೈಜ್ಞಾನಿಕ ಸಾಹಿತ್ಯ ಕೃತಿಗಳನ್ನೂ ರಚಿಸಿದ್ದಾರೆ. ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋಭಾವ”, ತೆರೆದ ಮನ ಹಾಗೂ ಹೋರಾಟದ ಹಾದಿ, ಆತ್ಮಕಥನವೂ ಸೇರಿದೆ.

ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ.ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.

ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.


ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು.

`ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.

ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದುದು ಅವರ ಸರಳತೆ ಇಡಿದ ಕೈಗನ್ನಡಿಯಾಗಿತ್ತು.

ಎಚ್.ಎನ್ ಆದರ್ಶಗಳು, ಸರಳತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಸಾಗೋಣ. 






                                        

                                                                      ನವೀನ್ ಪಿ ಆಚಾರ್, ಸಹ ಕಾರ್ಯದರ್ಶಿ,                                                                                 ಚಿತ್ರದುರ್ಗ ವಿಜ್ಞಾನ ಕೇಂದ್ರ. 

10 comments:

  1. ನವೀನ್ ಪಿ ಆಚಾರ್ ರವರು ಅತ್ಯುತ್ತಮವಾಗಿ ವಿವರಣೆಯನ್ನು ನೀಡಿದ್ದಾರೆ ..ಒಬ್ಬ ಮಹಾನ್ ವ್ಯಕ್ತಿಯ ಪರಿಚಯ ಈ ದಿನ ನಮಗೆ ಮಾಡಿಕೊಟ್ಟಿರುವುದಕ್ಕೆ ಅವರಿಗೆ ಅಭಿನಂದನೆಗಳು... ಅವರ ಬರವಣಿಗೆಯ ಶೈಲಿ ಎಲ್ಲರಿಗು ಮಾದರಿ

    ReplyDelete
  2. Very Nice... Naveen Sir
    Tq

    ReplyDelete
  3. Creative teacher..my mam..🤝👍

    ReplyDelete
  4. Vry nice. Congrats n continue sir

    ReplyDelete
  5. I got more information about HN sir by you keep it up

    ReplyDelete
  6. ಉತ್ತಮ ಪರಿಚಾಯಾತ್ಮಕ ಲೇಖನ. ವ್ಯಜ್ಞಾನಿಕ, ಶಿಕ್ಷಣ ಪ್ರೇಮಿ, ಮಾನವಿತೆ ಹೆಚ್ ಎನ್ ರವರ ಬಗ್ಗೆ ಉತ್ತಮವಾಗಿ ಮೂಡಿಬಂದಿದೆ. ನವೀನ್ ರವರಿಗೆ ಪ್ರಣಾಮಗಳು.

    ReplyDelete
  7. ನಿಮ್ಮ ಪ್ರತಿಭೆಗೆ ಅಭಿನಂದನೆಗಳು ಸರ್.ಹೀಗೆ ನಿಮ್ಮ ಪ್ರತಿಭೆ ಕಾರಂಜಿಯಾಗಿ ಚಿಮ್ಮಲಿ ಎಂದು ಆಶಿಸುವೆ

    ReplyDelete
  8. ಬರಹ ಉತ್ತಮವಾಗಿದೆ, ನಿಮ್ಮಿಂದ ಸಾಹಿತ್ಯ ಹೊರ ಬರಲಿ,

    ReplyDelete