ವೀಕೆಂಡ್ ಸ್ಪೆಷಲ್: ಈ ವಾರದ ಸಂಡೇ ಸ್ಪೆಷಲ್ ನಲ್ಲಿ ಸತ್ಯಂ ಶಂಕರಮಂಚಿ ಅವರ ತೆಲುಗು ಕಥಾಸಂಕಲನ “ಅಮರಾವತಿ ಕಥೆಗಳು” ಕನ್ನಡಕ್ಕೆ ಡಾ|| ವಿರೂಪಾಕ್ಷಿ ಎನ್ ಬೋಸಯ್ಯ ಅನುವಾದಿಸಿದ್ದಾರೆ. ಅಮರಾವತಿ ಕಥೆಗಳು ಶಂಕರಮಂಚಿ ಅವರ ಕಥಾಸಂಕಲನ. ಇದರಲ್ಲಿರುವ 100 ಕಥೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಥಾವಸ್ತು ವೈವಧ್ಯವಾಗಿದೆ. ಅಮರಾವತಿ ಪರಿಸರದ ಜನರ ಜೀವನ-ವಿಧಾನ ನೋವು-ನಲಿವುಗಳನ್ನು ಲೇಖಕರು ಸರಳವಾದ ಗ್ರಾಮೀಣ ಭಾಷಾ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ಕಥಾಸಂಕಲನಕ್ಕೆ ಆಂಧ್ರಪ್ರದೇಶ ಸರ್ಕಾರವು 1979ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
(ಕಥೆ-5 )
'ಪ್ರವಾಹ. '
ಸ್ವಲ್ಪ ದೂರದಲ್ಲಿ ಆಕಾಶವನ್ನು ಮುಟ್ಟುವಂತಿರುವ ಗಾಳಿಗೋಪುರ. ಅದರ ಹಿಂದೆ ಸೂರ್ಯಕಿರಣಗಳಿಂದ ಕಂಗೊಳಿಸುತ್ತಿರುವ ಬಂಗಾರಲೇಪಿತ ಅಮರೇಶ್ವರ ಆಲಯದ ಶಿಖರ. ಎತ್ತರವಾದ ಶಿಖರದ ಸುತ್ತಲೂ ಎಷ್ಟೋ ಆಲಯಗಳು; ಎಷ್ಟೆಷ್ಟೋ ಶಿಖರಗಳು. ಪೂರ್ವಕ್ಕೆ ವೈಕುಂಟಪುರದ ಬೆಟ್ಟ, ದಕ್ಷಿಣಕ್ಕೆ ಪಾಳುಬಿದ್ದ ಬೌದ್ಧಸ್ತೂಪಗಳು, ಪಶ್ಚಿಮದಲ್ಲಿ ಇಂದು ದಿಬ್ಬವಾಗಿ ಕಾಣುವ ಶಾತವಾಹನರ ರಾಜಧಾನಿ ಧಾನ್ಯಕಟಕ(ಧರಣಿಕೋಟೆ), ಉತ್ತರದಲ್ಲಿ ಆ ಬೌದ್ಧಸ್ತೂಪಗಳನ್ನು, ಆ ದಿಬ್ಬಗಳನ್ನು, ಅವುಗಳ ಮಧ್ಯದಲ್ಲಿರುವ ಜನರನ್ನು, ಹೆಣ್ಣುಮಕ್ಕಳ ಸೊಂಟಕ್ಕೆ ಧರಿಸುವ ಡಾಬಿ(ಒಡ್ಯಾಣ)ನಂತೆ ಆ ಊರನ್ನು ಸುತ್ತುತ್ತ ಹರಿಯುವ ಕೃಷ್ಣಾನದಿ. ಅದುವೇ ಅಮರಾವತಿ.
ಒಂದೊಮ್ಮೆ ಕುದುರೆಗಳು, ರಥಗಳು ತಿರುಗುತ್ತಿದ್ದ, ಸೈನಿಕರ ಕವಾಯತುಗಳು ನಡೆಯುತ್ತಿದ್ದಂಥ ರಾಜಬೀದಿಯಲ್ಲಿ ಇಂದು ನಾಯಿಗಳು, ಕತ್ತೆಗಳು, ಮೇವು ದಂಡವೆಂದು ಬೀದಿಗೆ ಬಿಟ್ಟ ಸಾಂಬಯ್ಯನ ಮುದಿ ಎತ್ತು ಎಲ್ಲವೂ ನೀರಸವಾಗಿ ತಿರುಗುತ್ತಿವೆ. ಮುತ್ತುರತ್ನಗಳ ರಾಶಿಯನ್ನು ಮೂಟೆ ಕಟ್ಟಿ ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ಆ ಬೀದಿಯಲ್ಲಿ ಇಂದು ತಳ್ಳುಗಾಡಿಯಲ್ಲಿ ತೌಡಿ(ಹೊಟ್ಟು)ನ ಮೂಟೆಗಳನ್ನು ತಳ್ಳಲಾರದೇ ತಳ್ಳುತಿದ್ದಾರೆ. ವಿಶಾಲವಾಗಿ ಹರಡಿಕೊಂಡಿರುವ ಅಷ್ಟು ದೊಡ್ಡ ರಾಜಬೀದಿಯನ್ನು ಗುಡಿಸಿ ಶುಭ್ರ ಮಾಡುವವರು ಯಾರು? ಹೆಣ್ಣುಮಕ್ಕಳು ತಮ್ಮ ತಮ್ಮ ಮನೆ ಮುಂದಿನ ನೆಲಗುಡಿಸಿ, ಸಗಣಿ ನೀರು ಹಾಕಿ ಮನೆಯ ಕಸವನ್ನೆಲ್ಲ ತಂದು ನಡುಬೀದಿಗೆ ಸುರಿದು ತಿಪ್ಪೆಯಾಗಿಸುತ್ತಿದ್ದಾರೆ.
ಆ ಕಸದ ತಿಪ್ಪೆಗಳ ಮೇಲೆ ಬೀದಿನಾಯಿಗಳು ಮುದುರಿಕೊಂಡು ಮಲಗಿದರೆ, ಕೋಳಿ-ಕೋಳಿಮರಿಗಳು ಆ ತಿಪ್ಪೆಗಳನ್ನು ಕೊಕ್ಕಿನಿಂದ, ಕಾಲಿನಿಂದ ಕೆದರುತ್ತಾ ಕಸವನ್ನು ಬೀದಿಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿಸುತ್ತಿವೆ. ಒಂದು ದಿನ ನಗಾರಿ ಬಾರಿಸುವ ಉತ್ತರ ದಿಕ್ಕಿನ ಗಾಳಿಗೋಪುರದದಲ್ಲಿಯೇ ಹುಚ್ಚ ಸೂರಿಯು ಹರಿದ ತುಂಡುಬಟ್ಟೆಗಳನ್ನು ಚಿಲುಮೆಗೆ ಸುತ್ತಿಕೊಂಡು ಭಂಗಿ ಸೇದುತಿದ್ದಾನೆ. ಹಿಂದೆ ವಿಶಾಲವಾಗಿ ಹರಡಿಕೊಂಡಿರುವ ಆಲದ ಮರಗಳ ಕೆಳಗೆ ಕಿವಿಗೆ ಇಂಪೆನಿಸುವ ವೇದಗಳ ಗಾನ ಕೇಳಿಸುತ್ತಿತ್ತು. ಆದರೆ ಅಲ್ಲಿಂದು ಇಸ್ಪೀಟ್ ಆಟ ಜೋರಾಗಿ ನಡೆಯುತ್ತಿದೆ.
ನನ್ನ ಮಗನೇ! ನನ್ನ ಎಲೆಗೆ ಅಡ್ಡ ಬಂದಿಯಲ್ಲೋ? ಎಂಬಂತಹ ಮಾತುಗಳು ಕೇಳಿಸುತ್ತಿವೆ. ಸಾವಿರಾರು ದೇಶಿ-ವಿದೇಶಿ ವಿದ್ಯಾರ್ಥಿಗಳಿಗೆ ಜ್ಞಾನೋಪದೇಶ ನೀಡಿದ ಬೌದ್ಧ ವಿಶ್ವವಿದ್ಯಾಲಯ ಇದ್ದ ಜಾಗದಲ್ಲಿ ಇಂದು ದಿಬ್ಬಗಳು; ಬರೀ ದಿಬ್ಬಗಳೆ ಕಾಣಿಸುತ್ತಿವೆ. ದೊಡ್ಡದಾದ ಆ ದಿಬ್ಬಗಳ ಮೇಲೆ ಹಂದಿಗಳು ತಿರುಗುತ್ತಿವೆ. ಅವುಗಳನ್ನು ವಡ್ಡರ ಹುಡುಗರು ಹೊಡೆದು ಓಡಿಸುತ್ತಿರುವುದು ಕಾಣಿಸುತ್ತಿದೆ. ಅಂದು ಕೃಷ್ಣಾನದಿಗೆ ನೀರಿಗೆ ಬರುತ್ತಿದ್ದ ಪ್ರಾಯದಹುಡುಗಿಯ ಕಾಲ್ಗೆಜ್ಜೆ ಜಾರಿಬಿದ್ದರೂ, ಈಗ ಅವಸರವೇನೆಂದು ನೀರು ಮನೆಗೆ ಒಯ್ದು, ನಿಧಾನವಾಗಿ ಬಂದು ಕಾಲ್ಗೆಜ್ಜೆಯನ್ನು ತೆಗೆದುಕೊಂಡು ಹಾಡುತ್ತಾ ಮರಳುತ್ತಿದ್ದಳು. ಆದರೆ ಇಂದು ನೀರಿಗೆ ಬರುವ ತುಂಬಾ ಹುಡುಗಿಯರಿಗೆ ಕಾಲ್ಗೆಜ್ಜೆಗಳೇ ಇಲ್ಲ. ಆದರೂ ಅವರು ಗುಸುಗುಸು ಮಾತನಾಡುತ್ತಾ ನೀರಿಗೆ ಬರುತ್ತಲೇ ಇದ್ದಾರೆ. ಅವರ ಮುಖದಲ್ಲಿ ಬರಿದಾಗದ ಮಂದಹಾಸವಿದ್ದರೂ, ಹೃದಯದಲ್ಲಿ ಬೆಟ್ಟದಷ್ಟು ದಿಗಿಲಿದೆ.
ಅಂದಿಗೂ - ಇಂದಿಗೂ ಸಾಕ್ಷಿಯಾದ ಈ ಕೃಷ್ಣವೇಣಿಯು ಗತವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಏನೂ ತಿಳಿಯದವಳಂತೆ ತುಂಬಿ ಹರಿಯುತ್ತಿದ್ದಾಳೆ. ಅಮರೇಶ್ವರ ಗುಡಿಯ ಗೋಡೆಗಳ ಹತ್ತಿರ ಹರಿಯುತ್ತಲೇ, ಪರಮೇಶ್ವರನಿಗೆ ಪಾದಾಭಿಷೇಕ ಮಾಡಿ ಮುಂದೆ ಸಾಗುತ್ತಿದ್ದಾಳೆ. ಸ್ವಲ್ಪ ದೂರದಲ್ಲಿ ಮಲಗಿದ್ದಂತಿದ್ದ ಸೂರ್ಯ ಅಲ್ಲಿಂದ ಎದ್ದು, ಬೆಳಕು ನೀಡುತ್ತಾ ಅಮರಾವತಿಯತ್ತ ಬರುತ್ತಿದ್ದಾನೆ. ಕಣ್ಣುಜ್ಜಿಕೊಂಡು ದೃಷ್ಟಿಯಿಟ್ಟು ನೋಡಿದರೆ ಎರಡು ಗುಡ್ಡಗಳ ಮಧ್ಯದಿಂದ ಹರಿದುಬರುವ ಕೃಷ್ಣೆಯ ಸೊಬಗು ಪ್ರಿಯರಾದ ನೆಂಟರು ಊರಿಂದ ಬರುವಂತೆ ಕಾಣಿಸುತ್ತಿದೆ. ಜುಳುಜುಳು, ಬುಳುಬುಳು ಎಂದು ಸದ್ದು ಮಾಡುತ್ತಾ ಹರಿವ ಕೃಷ್ಣೆ, ಸ್ನಾನ ಮಾಡಿದ ಸ್ತ್ರೀ ಕೂದಲನ್ನು ಗಾಳಿಗೆ ಬಿಟ್ಟಂತೆ ಬಿಡಿಬಿಡಿಯಾಗಿಯೂ ಹರಿಯುತ್ತಾಳೆ; ಜಡೆ ಹೆಣೆದಂತೆ ಒಂದೆಡೆಯೇ ಭೋರ್ಗರೆಯುತ್ತಲೂ ಹರಿಯುತ್ತಾಳೆ.
ಇನ್ನೂ ಮುಂಜಾವಿನ ಬೆಳಕು ಮೂಡಿರಲಿಲ್ಲ. ಹಟ್ಟಿಗಳಲ್ಲಿದ್ದ, ಊರಲ್ಲಿದ್ಧ ಜನರೆಲ್ಲ ಜೋರಾಗಿ ಗದ್ದಲ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಕೃಷ್ಣೆ ಉಕ್ಕಿದ್ದಾಳೆ. ರಾತ್ರೋರಾತ್ರಿ ಪ್ರಳಯದಂತಹ ಪ್ರವಾಹ ಬಂದಿದೆ. ಆ ಮಸುಕಾದ ಬೆಳಕಿನಲ್ಲಿ ಕೃಷ್ಣೆಯ ಗರ್ಜನೆ ಇನ್ನೂ ಜೋರಾಗಿಯೇ ಕೇಳುತ್ತಿದೆ. ಹಟ್ಟಿಗಳಿಗೆ ನಡುಮಟ್ಟದಷ್ಟು ನೀರು ನುಗ್ಗಿದೆ. ಹಾಗಾಗಿ ಜನರು ಪರಸ್ಪರ ನೂಕುತ್ತ-ತಳ್ಳುತ್ತಾ ತುಂಬಾ ಗಡಿಬಿಡಿಯಲ್ಲಿದ್ದಾರೆ. ನೆನೆದ ಮಣ್ಣಿನ ಗೋಡೆಗಳು ಬಿದ್ದು ಹೋಗುತ್ತಿವೆ. ಗುಡಿಪಕ್ಕದ ಎತ್ತರವಾದ ಪ್ರದೇಶದಲ್ಲಿ ಜನರಿಗೆ ವಾಸಿಸುವ ಮನೆಗಳಿದ್ದರೂ, ದಿನಬಳಕೆಯ ಸಾಮಾನುಗಳನ್ನು ಈ ಹಟ್ಟಿ ಮನೆಗಳಲ್ಲಿ ಇಡುತ್ತಿದ್ದರಿಂದ ಎಲ್ಲರ ದಿನಬಳಕೆಯ ಸಾಮಾನುಗಳೆಲ್ಲವೂ ರಾತ್ರೋರಾತ್ರಿ ಕೃಷ್ಣೆಯಲ್ಲಿ ಕೊಚ್ಚಿಹೋಗಿವೆ.
ಪಕ್ಕದಬೀದಿಯೂ ಮುಕ್ಕಾಲುಪಾಲು ಮುಳುಗಿಹೋಗಿದೆ. ಅನಾಥರು ಕಟ್ಟಿಕೊಂಡಿದ್ದ ತಾತ್ಕಾಲಿಕ ಗುಡಿಸಲುಗಳು ಎಗರಿ ಹೋಗಿವೆ! ದನದ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳು ಗೂಟದಗ್ಗದ ಸಹಿತ ಕೃಷ್ಣೆಯಲ್ಲಿ ಕಾಣೆಯಾಗಿವೆ! ಎತ್ತರ ಪ್ರದೇಶದತ್ತಲೂ ನೀರು ಏರುತ್ತಲಿದೆ! ಇನ್ನೂ ನದೀತೀರದಲ್ಲಿದ್ದ ದೋಣಿಗಳು ತೇಲಿ ಹೋಗಿವೆ. ಲಾಂಚಿಗಳು ಕಟ್ಟಿದ ಹಗ್ಗದಿಂದ ಬೇರ್ಪಟ್ಟು ಮಾಯವಾಗಿವೆ.
ಮುಂಜಾವಿನ ಬೆಳಕು ಹರಿಯುತ್ತಿದ್ದಂತೆ ಕೃಷ್ಣೆಯ ಪ್ರಳಯರೂಪ ಸ್ಪಷ್ಟವಾಗಿ ಕಾಣುತ್ತಿದೆ. ಈ ಭೂಮಂಡಲವನ್ನೇ ನುಂಗಿಬಿಡುವೆನೆಂಬಂತೆ ಕೋಪದಲ್ಲಿ ಉಕ್ಕಿ ಬರುತ್ತಿದ್ದಾಳೆ. ಆ ಕಡೆ ಇರುವವರು ಕಾಣದಿರುವಷ್ಟು ದೊಡ್ಡದಾದ ಜಲಪ್ರಳಯ. ಭೋರ್ಗರೆಯುತ್ತಾ ಬರುವ ದೊಡ್ಡ ಅಲೆಗಳು. ಆ ಮಹಾಪ್ರವಾಹದ ಮಧ್ಯೆ ಕೊಚ್ಚಿ ಹೋಗುತ್ತಿರುವ ಮನೆಯ ಛಾವಣಿಗಳು; ಕ್ಷಣಾರ್ಧದಲ್ಲಿ ಛಾವಣಿಯೊಂದು ನೀರಲ್ಲಿ ಮುಳುಗಿ ಹೋಗುತ್ತಿದೆ. ಮುಖವೆತ್ತಿ ಅಂಬೋ! ಎಂದು ಕೊಚ್ಚಿ ಹೋಗುವ ದನಗಳ ಮುಖ, ಕೋಡುಗಳು ಕ್ಷಣ ಕಳೆಯುವುದರೊಳಗಾಗಿ ಮುಳುಗಿ ಹೋಗುತ್ತಿವೆ. ಮರದ ದಿಂಡುಗಳು ಕೊಚ್ಚಿಕೊಂಡು ಬರುತ್ತಿವೆ. ಒಂದು ದಿಂಡಿನ ಮೇಲೆ ಬೀದಿನಾಯಿಯೊಂದು 'ಕಾಪಾಡಿ ಎಂಬಂತೆ' ದೀನವಾಗಿ ಬೊಗಳುತ್ತಿದೆ. ನದಿ ಹರಿಯುವ ರಭಸಕ್ಕೆ ದಿಂಡು ಅತ್ತಿತ್ತ ತಿರುಗುತ್ತಿದ್ದರೆ, ಪ್ರಾಣಭಯದಿಂದ ನಾಯಿ ಕೂಡ ತಿರುಗುತ್ತ ದಿಂಡಿನ ಮೇಲೆ ನಿಲ್ಲಲು ಪರದಾಡುತ್ತಿದೆ.
ಅಷ್ಟರಲ್ಲಿ ಪ್ರವಾಹದ ಮಧ್ಯದಿಂದ ಮನುಷ್ಯನೊಬ್ಬನ 'ದೇವರೇ ಕಾಪಾಡಪ್ಪ' ಎಂಬ ಕರುಳು ಹಿಂಡುವಂಥ ಕೂಗು; ಕೇಳಿದ ಕ್ಷಣಮಾತ್ರದಲ್ಲಿ ಆ ಮನುಷ್ಯನ ಕೂಗು ದೂರವಾಗಿ ಕಾಣದೇ ಹೋದನು. ಯಾರಾದರೂ ಸಹಾಯ ಮಾಡಲು ಹೋದರೆ ಮರಳಿ ಬರುವ ಸಾಧ್ಯತೆ ಇಲ್ಲ. ಹಾಗಾಗಿ ದಂಡೆಯ ಮೇಲೆ ಎಲ್ಲರೂ ನಿಸ್ಸಹಾಯಕರಾಗಿ ನಿಂತು ನೋಡುತ್ತಿದ್ದಾರೆ. ಎಲ್ಲರ ಹೃದಯದಲ್ಲೂ ಮುಂದೆನು? ಎಂಬ ಭಯವೇ ತುಂಬಿಕೊಂಡಿದೆ. ಇದಾವುದರ ಪರಿವಿಲ್ಲದ ಚಿಕ್ಕಮಕ್ಕಳು ಮನೆ ಮುಂದೆಯೆ ನೀರು ಬಂದಿದ್ದರಿಂದ ಕಾಗದದ ದೋಣಿಯಾಟ ಆಡುತ್ತಿದ್ದಾರೆ. ಕಾಗದದ ದೋಣಿ ಮಾಡಿ ಕೊಡಿರೆಂದು ಹಿರಿಯರನ್ನು ಪೀಡಿಸುತ್ತಿದ್ದಾರೆ. ಶಾಲಾಮಕ್ಕಳು ಗೋಡೆಯ ಮೇಲೆ ಇದ್ದಿಲಲ್ಲಿ ಗೆರೆ ಎಳೆಯುತ್ತ ಕ್ಷಣಕ್ಷಣಕ್ಕೆ ಏರುತ್ತಿರುವ ನೀರಿನ ಮಟ್ಟವನ್ನು ಅಳೆಯುತ್ತಿದ್ದಾರೆ.
ಪಕ್ಕದ ಬೀದಿಯ ಸಂಗಯ್ಯನ ಮನೆಯಲ್ಲಿ ಅರ್ಧರಾತ್ರಿ ಪುಟ್ಟಮಗು ಹಾಸಿಗೆ ಒದ್ದೆಯಾಗಿದ್ದಕ್ಕೆ ಅಳುತಿತ್ತು. ಮಗುವಿನ ಅಳುವಿನಿಂದ ಎಚ್ಚರವಾದ ಮನೆಯವರು ಮನೆಯೊಳಗೆ ನೀರು ನುಗ್ಗಿರುವುದು ಕಂಡು ಹೊರಬಂದರಂತೆ! ಅವರು ಹೊರಬಂದ ಸ್ವಲ್ಪ ಹೊತ್ತಿಗೆ ಮನೆಯ ಗೊಡೆಗಳು ಕುಸಿದು ಬಿದ್ದವಂತೆ. ವೆಂಕಟಸ್ವಾಮಿ ತನ್ನ ಮೇಕೆಗಳ 'ಮಂದೆ'ಯೆಲ್ಲಾ ಕಣ್ಣೆದುರಿಗೆ ಕೊಚ್ಚಿ ಹೋದರೂ ಏನು ಮಾಡಲಾರದೇ ಅಸಹಾಯಕರಾಗಿ ನಿಂತು ನೋಡುತಿದ್ದರಂತೆ! ಪ್ರವಾಹದಲ್ಲಿ ಬಂದಿದ್ದ ಹಾವೊಂದು ಶಾಲೆಯ ಸುಬ್ಬಯ್ಯನ ಮನೆಹೊಕ್ಕು ಅವನನ್ನೇ ಕಚ್ಚಿತಂತೆ! ಲಂಕೆಯಲ್ಲಿ ಮೇಯಲು ಹೋಗಿದ್ದ ಕುರಿಗಳು, ಕುರಿ ಕಾಯುವ ಜೀತಗಾರರ ಏನಾದರೋ!
ಇಂಥ ಭಯಂಕರವಾದ ಕಥೆಗಳನ್ನು ಪರಸ್ಪರರು ಮಾತಾಡಿಕೊಳ್ಳುತ್ತಿದ್ದಾರೆ.
ಮುತ್ತೈದೆಯರು ಕೃಷ್ಣೆಯನ್ನು 'ತಾಯಿ ಶಾಂತಳಾಗು' ಎಂದು ಅರಿಶಿಣ ಕುಂಕುಮ ಅರ್ಪಿಸಿ, ಪೂಜೆ ಮಾಡಿ ತೆಂಗಿನಕಾಯಿ ಹೊಡೆಯುತ್ತಿದ್ದಾರೆ. ಒಡೆದ ಆ ತೆಂಗಿನಕಾಯಿಗಳನ್ನು ತಿನ್ನಲು ಮಕ್ಕಳು ಕಿತ್ತಾಡುತ್ತಿದ್ದಾರೆ. ಪ್ರವಾಹಕ್ಕೆ ಅರ್ಧ ಊರೇ ಮುಳುಗಿ ಹೋಗಿದೆ. ಉಳಿದಿರುವಷ್ಟು ಸಾಮಾನು-ಸರಂಜಾಮುಗಳನ್ನು ತೆಗೆದುಕೊಂಡ ಜನರೆಲ್ಲ ಊರ ಮಧ್ಯದಲ್ಲಿರುವ ಮಾಲಕ್ಷ್ಮಮ್ಮಳ ಮರದತ್ತಿರ ಸೇರಿದ್ದಾರೆ. ಚಿಕ್ಕಮಕ್ಕಳನ್ನು ಆಡಿಸಲು ತಾಯಂದಿರು ಆ ಮರಕ್ಕೆ ಸೀರೆಗಳಿಂದ ಉಯ್ಯಾಲೆಗಳನ್ನು ಕಟ್ಟಿದ್ದಾರೆ. ಹತ್ತು ಗಂಟೆಯ ವೇಳೆಗೆ ನಿಧಾನವಾಗಿ ಪ್ರವಾಹ ಇಳಿಮುಖವಾಗುತ್ತಿದೆ. ಊರ ಹಿರಿಯರಾದ ವೆಂಕಟಸ್ವಾಮಿ, ವೀರಸ್ವಾಮಿ, ಅವಧಾನಿಗಳೆಲ್ಲರೂ ಮಾಲಕ್ಷ್ಮಮ್ಮ ಮರದತ್ತಿರ ಬಂದವರು ಈಗೇನು ಮಾಡುವುದು? ಈಗೇನು ಮಾಡುವುದು? ಎಂದೂ ತಲೆ ಮೇಲೆ ಕೈಹೊತ್ತು ಕುಳಿತರು. ಏನು ಮಾಡಬೇಕು ಅನ್ನೋದನ್ನ ಮುಂದೆ ಯೋಚಿಸೋಣ? ಮೊದಲು ಜನರಿಗೆಲ್ಲ ತಿಂಡಿ-ತೀರ್ಥ ನೋಡ್ರಿ! ಅಂದರು ಯಾರೋ. ಅಷ್ಟೇ ಹತ್ತು ಜನ ಯುವಕರು ಹಾರೆ-ಗುದ್ದಲಿ ಹಿಡ್ಕೊಂಡು ದೊಡ್ಡದಾದ ಅಡುಗೆ ಒಲೆಯನ್ನು ಸಿದ್ಧಮಾಡಿದರು. ಇನ್ನೊಂದು ಹತ್ತು ಜನ ಚೀಲಗಳನ್ನು ತೆಗೆದುಕೊಂಡು ಮನೆಮನೆಗೆ ಹೋಗಿ ಅಕ್ಕಿ ತೆಗೆದುಕೊಂಡು ಬಂದರು. ಕೆಲವರು ಧರಣಿಕೋಟೆಗೆ ಹೋಗಿ ಅಡುಗೆ ಸಾಮಾನುಗಳನ್ನು ತಂದರು. ಹೆಣ್ಣುಮಕ್ಕಳು ಮನೆಗಳಿಂದ ಸೊಪ್ಪು, ಉಪ್ಪು, ತುಪ್ಪ, ಎಣ್ಣೆ ತಂದರು. ದೊಡ್ಡ ಪಾತ್ರೆಯಲ್ಲಿ ಬಿಸಿಮಾಡಿದ ಎಸರಿಗೆ ಅಕ್ಕಿ ಹಾಕಿದರು. ಅಡುಗೆ ಮಾಡುತ್ತಿದ್ದ ವೆಂಕಟೇಶ, ಶೋಭನಾದ್ರಿಗಳು 'ಇನ್ನೂ ತರಕಾರಿ ಹಚ್ಚಿಕೊಡೊದು ಬಾಕಿ ಐತಿ' ಅಂದರು. ಆಗ ಅವಧಾನಿಗಳ ಹೆಂಡತಿ ಶೆಟ್ರ ಸೂರಮ್ಮ, ಕಾಪುಲ ವೆಂಕಮ್ಮ, ಗೊಲ್ಲರ ಸುಬ್ಬಮ್ಮ ಈಳಿಗೆ ಮಣಿಗಳನ್ನು ಮುಂದಿಟ್ಟುಕೊಂಡು ತರಕಾರಿ ಹಚ್ಚಿಕೊಟ್ಟರು. ಹನ್ನೆರಡು ಗಂಟೆಗೆಲ್ಲ ಅನ್ನ, ಸೌತೆಕಾಯಿ ಸಾರು, ಹುಳಿ ತಯಾರಾಯಿತು.
ಶೆಟ್ಟಿಯವರು ಊಟದ ಎಲೆಗಳನ್ನು ಆ ಬಯಲಿನ ಎರಡೂ ಬದಿಗೂ ಸಾಲಾಗಿ ಹಾಸಿದರು. ಶಾಸ್ತ್ರಿಗಳು ಸಂಧ್ಯಾವಂದನೆ ಮುಗಿಸಿಕೊಂಡು ಬಂದು, ಒಂದು ಎಲೆಯ ಮುಂದೆ ಕುಳಿತರು. ಅವರ ಒಂದು ಪಕ್ಕದಲ್ಲಿ ಕಾಪುಲ ಸುಬ್ಬನಾಯ್ಡು ಕುಳಿತಿದ್ದರೆ, ಮತ್ತೊಂದೆಡೆ ಗೊಲ್ಲರ ರಾಮ ಕೂತಿದ್ದಾನೆ. ಯಾರ ಪಕ್ಕದಲ್ಲಿ ಯಾರಿದ್ದಾರೆ? ಎಂದು ಯಾರೂ ಗಮನಿಸಲಿಲ್ಲ. ಒಕ್ಕೊರಲಿನಿಂದ ಭಗವಂತನ ನಾಮಸ್ಮರಣೆ ಸಾಗುತ್ತಿರುವಂತೆಯೇ, ಬಡಿಸುವವರು ಪಂಕ್ತಿಯಲ್ಲಿದ್ದ ಎಲ್ಲರಿಗೂ ಊಟ ಬಡಿಸಿದರು. ಇನ್ನೇನು ಊಟ ಮಾಡಬೇಕು ಎನ್ನುವಾಗ ಶಾಸ್ತ್ರಿಗಳಿಗೆ ತುಪ್ಪದ ವಾಸನೆ ಮೂಗಿಗೆ ಬಡಿದು, ತುಪ್ಪಕ್ಕಾಗಿ ಕೈ ಚಾಚಿದರು. ಆಗ ಇದ್ದಕ್ಕಿದ್ದಂತೆ ತುಪ್ಪ ಬಡಿಸುವ ಕೈ ಮತ್ತು ತುಪ್ಪದ ಬಟ್ಟಲು ಹಿಂದೆ ಸರಿಯಿತು. ತುಪ್ಪ ಹಾಕುತ್ತಿದ್ದ ಹೊಲೆಯರ ಸಂಗನು 'ಶಾಸ್ತ್ರಿಗಳಿಗೆ ನಾನು ತುಪ್ಪ ಹಾಕಿದರೆ 'ಪಾಪ' ಸುತ್ತಿ ಕೊಳ್ಳುವುದೇನೋ? ಎಂದು ಹಿಂಜರಿದು ಓಡಿದನು. ಆಗ ಶಾಸ್ತ್ರಿಗಳು 'ಓಯ್ ಸಂಗ! ಎಂದು ದೊಡ್ಡದಾಗಿ ಕೂಗಿ ಕರೆದಾಗ ಭಯ ಪಡುತ್ತಲೇ ಸಂಗ ಬಂದನು. ಹತ್ತಿರ ಬಂದ ಸಂಗನಿಗೆ 'ನೋಡು ಸಂಗ ನಿನಗೂ ಹಸಿವಾಗುತ್ತದೆ. ನನಗೂ ಹಸಿವಾಗುತ್ತದೆ. ನಿನ್ನ ಕೈಯಲ್ಲಿರುವ ತುಪ್ಪ ಬೇರೆಯವರು ಬಡಿಸಿದರೆ ಮಾತ್ರ ತುಪ್ಪ? ನೀನು ಬಡಿಸಿದರೆ ಅದು ತುಪ್ಪ ಆಗದೇ ಇರುತ್ತಾ? ಹಾಕೋ? ಎಂದು ಕೈ ಮುಂದಕ್ಕೆ ಚಾಚಿದರು. ಸಂಗ ಆನಂದವಾಗಿ ಬಡಿಸಿದನು. 'ಓಂ ನಮಃ ಪಾರ್ವತಿ ಪತೆಯೆ, ಹರ ಹರ ಮಹಾದೇವ ಹರ, ಶಾಂತಿ! ಶಾಂತಿ! ಶಾಂತಿ! ಎಂದು ಒಕ್ಕೊರಲಿನಿಂದ ಜನರು ಹೇಳುತಿದ್ದ ಶಿವ ಮಂತ್ರ ದೇವಾಲಯದ ಶಿಖರಗಳಿಗೆ ಮುಟ್ಟಿತು.
ಪ್ರವಾಹ ಬಂದು ಮನುಷ್ಯರ ಮನಸ್ಸುಗಳನ್ನು ತೊಳೆದಿದೆ ಎಂದುಕೊಳ್ಳೋಣವೇ? ಅಬ್ಬೋ! ಅದರಲ್ಲಿ ನನಗೆ ನಂಬಿಕೆ ಇಲ್ಲ. ಸ್ನಾನ ಮಾಡಿದ ಮನುಷ್ಯನ ದೇಹ ನಾಳೆಯೊಳಗಾಗಿ ಪುನಃ ಕೊಳೆಯಾಗುವಂತೆ, ಮನುಷ್ಯನ ಮನಸ್ಸಿನಲ್ಲೂ ಮತ್ತೆ 'ಮಲಿನ' ಸೇರಿಕೊಳ್ಳುತ್ತದೆ. ಇಂಥ ಎಷ್ಟೇ ಪ್ರವಾಹಗಳು ಬಂದರೂ, ಮನುಷ್ಯನ ಮನಸ್ಸಿನ ಮಲಿನತೆ ತೊಳೆಯಲಾದೀತೆ?
No comments:
Post a Comment