Sunday 22 August 2021

'ಕೋವಿಡ್: ಮಕ್ಕಳ ಮೇಲೆ ನಿಗಾ ಇರಲಿ'; ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್

 

ಹಿರಿಯೂರು: 'ಕೋವಿಡ್ ಮೂರನೇ ಅಲೆ ಹರಡುವ ಬಗ್ಗೆ ವೈದ್ಯರು ಎಚ್ಚರಿಸಿದ್ದು, ಇದರಿಂದ ರಕ್ಷಿಸಿಕೊಳ್ಳಲು ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು' ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸೂಚಿಸಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಾಗೂ ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಸಂಘಟಿತ ವಲಯದ 9 ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

'ಕೊರೊನಾ ಒಂದು ಮತ್ತು ಎರಡನೇ ಅಲೆ ದೇಶದಲ್ಲಿ ಎಷ್ಟೆಲ್ಲ ಸಾವು-ನೋವುಗಳನ್ನು ಉಂಟು ಮಾಡಿದೆ. ಎಲ್ಲ ವರ್ಗದ ಜನರ ಬದುಕನ್ನು ಹಾಳು ಮಾಡಿದೆ ಎಂಬ ದೃಶ್ಯ ನಮ್ಮ ಕಣ್ಮುಂದೆ ಇದೆ. ಹೀಗಾಗಿ ಮೂರನೇ ಅಲೆಯ ಬಗ್ಗೆ ಎಲ್ಲರೂ ಸ್ವಯಂ ಎಚ್ಚರಿಕೆ ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಸೋಮವಾರದಿಂದ 9ರಿಂದ 12 ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು, ಪೋಷಕರು ನಿಗಾ ವಹಿಸಬೇಕು' ಎಂದು ಅವರು ಮನವಿ ಮಾಡಿದರು.

'ಲಾಕ್‌ಡೌನ್ ಘೋಷಣೆಯಾದ ನಂತರ ಹೂವು-ಹಣ್ಣು-ತರಕಾರಿ ಬೆಳೆಗಾರರು, ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿ ದುಡಿದು ತಿನ್ನುವವರ ಬದುಕು ಬೀದಿಗೆ ಬಿದ್ದಿತ್ತು. ಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ಪರಿಹಾರ ನೀಡಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಹೂವು ಬೆಳೆಗಾರರಿಗೂ ಪರಿಹಾರ ನೀಡಲಾಗಿದೆ. ತಾಲ್ಲೂಕಿನಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಒಳಗೊಂಡಂತೆ ಎಲ್ಲಾ ಇಲಾಖೆಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದರಿಂದ ನಮ್ಮ ತಾಲ್ಲೂಕಿನಲ್ಲಿ ಕೊರೊನಾ ಬೇಗ ನಿಯಂತ್ರಣಕ್ಕೆ ಬಂದಿತು' ಎಂದು ತಿಳಿಸಿದರು.

'ಮಾಜಿ ಸಿಎಂ ಯಡಿಯೂರಪ್ಪ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಭದ್ರಾ ಜಲಾಶಯದ ನೀರು ವಿವಿ ಸಾಗರಕ್ಕೆ ಹರಿದು ಬರುತ್ತಿದ್ದು, ಇಂದು ನೀರಿನಮಟ್ಟ 104 ಅಡಿ ತಲುಪಿದೆ. 90 ಕೋಟಿ ವೆಚ್ಚದಲ್ಲಿ ಧರ್ಮಪುರ ಹೋಬಳಿ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಅನುಮೋದನೆ ನೀಡಿದೆ. ತಾಲ್ಲೂಕಿನ ಪಟ್ರೇಹಳ್ಳಿ ಬಳಿ 25 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ 8-10 ದಿನದಲ್ಲಿ ಭೂಮಿ ನಡೆಯಲಿದೆ. ಹಿಂದಿನ ಮೂರು ವರ್ಷದ ಶಾಸಕತ್ವದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದ್ದೇನೆ' ಎಂದು ಪೂರ್ಣಿಮಾ ಹೇಳಿದರು.

ಆಹಾರದ ಕಿಟ್ ಪಡೆಯಲು ಬಂದಿದ್ದ ಒಂದು ಸಾವಿರ ಕಾರ್ಮಿಕರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ನೀಡಲಾಯಿತು. ರಾಖಿ ಹಬ್ಬದ ಪ್ರಯುಕ್ತ ವೇದಿಕೆಯಲ್ಲಿದ್ದವರಿಗೆ ಪೂರ್ಣಿಮಾ ಶ್ರೀನಿವಾಸ್ ರಾಖಿ ಕಟ್ಟಿ ಶುಭಕೋರಿದರು.

ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ನಗರಸಭಾಧ್ಯಕ್ಷೆ ಷಂಶುನ್ನೀಸಾ, ತಹಶೀಲ್ದಾರ್ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಈಶ್ವರಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಪೌರಾಯುಕ್ತ ಉಮೇಶ್, ಕಾರ್ಮಿಕ ಅಧಿಕಾರಿ ಅಲ್ಲಾಬಕ್ಷ್, ರಾಜೇಶ್ವರಿ, ಚಿತ್ರಜಿತ್ ಯಾದವ್, ಟಿ. ಚಂದ್ರಶೇಖರ್, ಮಂಜುಳಾ, ಎಂ.ಡಿ. ಸಣ್ಣಪ್ಪ, ಮಹೇಶ್ ಪಲ್ಲವ, ಅಂಬಿಕಾ ಹಾಜರಿದ್ದರು.

No comments:

Post a Comment