Sunday 22 August 2021

ರಾಜ್ಯ ಬಿಜೆಪಿಯಿಂದ ತಾಲಿಬಾನ್ ಸಂಸ್ಕೃತಿ; ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ.

ಚಿತ್ರದುರ್ಗ: 'ರಾಜ್ಯದಲ್ಲಿ ಬಿಜೆಪಿ ನಾಯಕರಿಂದ ತಾಲಿಬಾನ್‌ ಸಂಸ್ಕೃತಿ ಹುಟ್ಟಿಕೊಂಡಿದೆ. ಇದಕ್ಕೆ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಆ ಪಕ್ಷದ ಕಾರ್ಯಕರ್ತರು ಹಾರಿಸಿದ ಗಾಳಿಯಲ್ಲಿ ಗುಂಡು ಸಾಕ್ಷಿಯಾಗಿದೆ' ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

'ಬಿಜೆಪಿ ಮುಖಂಡರು, ಕಾರ್ಯಕರ್ತರು ಅಧಿಕಾರದ ಅಹಂನಿಂದ ಮೆರೆಯುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ನಾಡಬಂದೂಕು ಪ್ರದರ್ಶಿಸಿದ್ದಾರೆ. ಜತೆಗೆ ಮದ್ದು ತುಂಬಿ ಗಾಳಿಯಲ್ಲಿ ಹಾರಿಸಿದ್ದಾರೆ. ಇದನ್ನು ತಡೆಯುವ ವಿಚಾರದಲ್ಲಿ ಗೃಹ ಸಚಿವರು, ಅಲ್ಲಿನ ಪೊಲೀಸರು ವಿಫಲರಾಗಿದ್ದಾರೆ' ಎಂದು ದೂರಿದರು.

'ಈ ಪ್ರಕರಣವನ್ನು ಕೇಂದ್ರದ ಸಚಿವರು ಸಂಸ್ಕೃತಿ ಎನ್ನುತ್ತಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅತಿ ಸಂತೋಷವಾದಾಗ ನಮ್ಮ ಕಡೆಯ ಜನ ಈ ರೀತಿ ಮಾಡುತ್ತಾರೆ. ಇದರಿಂದ ಯಾವ ತೊಂದರೆಯಾಗಿಲ್ಲ ಎಂಬುದಾಗಿ ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಮಾರಿ ಜಾತ್ರೆಯಲ್ಲಿ ಕೋಣವನ್ನು ಕಡಿಯುವ, ಈ ಹಿಂದೆಲ್ಲಾ ಬಹುಪತ್ನಿತ್ವದ ಸಂಸ್ಕೃತಿ, ಪರಂಪರೆ ದೇಶದೊಳಗೆ ಇತ್ತು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸುವುದೇ' ಎಂದು ಪ್ರಶ್ನಿಸಿದರು.

'ಕನ್ನಡನಾಡು ಶಾಂತಿಯ ಬೀಡು. ಇಲ್ಲಿ ಅಶಾಂತಿ ಸೃಷ್ಟಿಸಬೇಡಿ. ಬಿಹಾರ, ಉತ್ತರ ಪ್ರದೇಶ ರಾಜ್ಯಗಳಂತೆ ಮಾಡಬೇಡಿ. ಗೃಹ ಖಾತೆ ಹೇಗೆ ನಿಭಾಯಿಸಬೇಕು ಎಂಬುದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿ ತಿಳಿದುಕೊಳ್ಳಿ. ಈ ಕುರಿತು ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಿ' ಎಂದು ಒತ್ತಾಯಿಸಿದರು.

'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ದಮನ ಮಾಡುತ್ತಿದೆ. ವಿರುದ್ಧವಾಗಿ ಮಾತನಾಡುವ ವಿರೋಧ ಪಕ್ಷಗಳ ನಾಯಕರ ವಿರುದ್ಧ ಐಟಿ, ಸಿಬಿಐ ದಾಳಿ ನಡೆಸಿ ಹತ್ತಿಕ್ಕುತ್ತಿದೆ. ರಫೇಲ್ ಹಾಗೂ ಫೋನ್‌ ಕದ್ದಾಲಿಕೆ ಪ್ರಕರಣ ಕುರಿತು ತನಿಖೆ ನಡೆಸದೇ ಭಂಡತನ ‍ಪ್ರದರ್ಶಿಸುತ್ತಿದೆ' ಎಂದು ‌ದೂರಿದರು.

.

No comments:

Post a Comment