Saturday 21 August 2021

ಜನಾಶೀರ್ವಾದ ಯಾತ್ರೆ ಮಾಡುವ ಬದಲು ಕ್ಷಮೆಯಾಚನೆ ಯಾತ್ರೆ ಮಾಡಬೇಕಿತ್ತು: ಚಂದ್ರಪ್ಪ ಟೀಕೆ.

 

ಚಿತ್ರದುರ್ಗ, ಆಗಸ್ಟ್ 21: "ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಬಂದಾಗಿನಿಂದಲೂ ದೇಶ ಹಾಗೂ ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ನಡುವೆಯೂ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ," ಎಂದು ಮಾಜಿ ಸಂಸದ ಚಂದ್ರಪ್ಪ ಹೇಳಿದರು.

"ಜನಾಶೀರ್ವಾದ ಯಾತ್ರೆ ಮಾಡುವ ಬದಲಿಗೆ ಜನರಲ್ಲಿ ಕ್ಷಮೆಯಾಚನೆ ಯಾತ್ರೆ ಮಾಡಬೇಕಿತ್ತು," ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಧ್ಯಮ ವಕ್ತಾರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಚಂದ್ರಪ್ಪ ಟೀಕಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೆ ಹೋಗುತ್ತಾರೋ ಅಲ್ಲಲ್ಲಿ ಸುಳ್ಳಿನ ಕಂತೆ ಹೇಳುತ್ತಾರೆ. ಬರೀ ಸುಳ್ಳು ಹೇಳಿ ಹೇಳಿ ಈಗ ಅವರ ಬತ್ತಳಿಕೆಯಲ್ಲಿ ಸುಳ್ಳು ಹೇಳುವುದು ಖಾಲಿಯಾಗಿವೆ," ಎಂದರು.

"ಇಂದು ಕೇಂದ್ರ ಸಚಿವರುಗಳು ಡಂಗೂರ ಹೊಡೆದುಕೊಂಡು, ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಇಂತಹ ಯಾತ್ರೆ ಮಾಡುವ ಅವಶ್ಯಕತೆಯಿತ್ತಾ ಎಂದು ಬಿಜೆಪಿಗೆ ಪ್ರಶ್ನೆ ಮಾಡಿದ ಅವರು, ನಿಜವಾದ ಜನಾಶೀರ್ವಾದ ಕೇಳಬೇಕಾದವರು ಕಾಂಗ್ರೆಸ್ ಪಕ್ಷದವರು, ಬಿಜೆಪಿಯವರಲ್ಲ," ಎಂದು ತಿಳಿಸಿದರು.

"ಬಿಜೆಪಿ ಆಡಳಿತದಲ್ಲಿ ಯಾವುದೇ ಜನಪರವಾದ ಬಿಲ್ ಪಾಸ್ ಆಗಿಲ್ಲ ಕೇವಲ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಬಿಲ್ ಪಾಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸದಾಶಿವ ಆಯೋಗ ಜಾರಿ ಮಾಡುತ್ತೇವೆ ಅಂತ‌ ಹೇಳಿ ಮೋಸ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.

"ಇದರ ಜೊತೆಗೆ ಶಿರಾ ಉಪ ಚುನಾವಣೆಯಲ್ಲಿ ಮತ ಪಡೆಯಲು ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿ ಮತ ಪಡೆದರು. ಆದರೆ ಇದುವರೆಗೂ ಕಾಡುಗೊಲ್ಲ ಅಭಿವೃದ್ಧಿ‌ ನಿಗಮಕ್ಕೆ ಯಾವುದೇ ಹಣ ನೀಡಿಲ್ಲ. ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯವನ್ನು ಅಭಿವೃದ್ಧಿ ನಿಗಮದ ಹೆಸರಲ್ಲಿ ಕಾಡುಗೊಲ್ಲ, ಊರುಗೊಲ್ಲ ಎಂದು ಇಬ್ಭಾಗ ಮಾಡಿ ಮೋಸ ಮಾಡಿದರು."

 

"ಗೊಲ್ಲ ಸಮುದಾಯದ ಏಕೈಕ ಶಾಸಕಿಯಾಗಿರುವ ಕೆ. ಪೂರ್ಣಿಮಾ ಶ್ರೀನಿವಾಸ್‌ರನ್ನು ಮಂತ್ರಿ ಮಾಡ್ತೀವಿ ಎಂದು ಹೇಳಿ ಆ ಸಮಾಜಕ್ಕೆ ಮೋಸ ಮಾಡಲಾಗಿದೆ," ಎಂದು ಬಿಜೆಪಿ ಸರ್ಕಾರದ ವಿರುದ್ಧ ಚಂದ್ರಪ್ಪ ಕಿಡಿಕಾರಿದರು.

"ಅಂಬೇಡ್ಕರ್ ದೇವತಾ ಮನುಷ್ಯ, ಅವರ ನಾಯಕತ್ವ, ಪ್ರೌಢಿಮೆಯನ್ನು ಹೊರ ತೆಗೆದಿದ್ದೆ ಕಾಂಗ್ರೆಸ್ ಪಕ್ಷದವರು. ಅಂಬೇಡ್ಕರ್‌ರನ್ನು ಕೇಂದ್ರ ಕಾನೂನು ಸಚಿವರನ್ನಾಗಿ ಮಾಡಿ, ಈ ದೇಶದ ಸಂವಿಧಾನ ಬರೆಯಲು ಅವಕಾಶ ಮಾಡಿದ್ದೆ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಸೋಲಿಸಿದ್ದು ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದರು, ದೊಡ್ಡ ದೊಡ್ಡ ನಾಯಕರು ಸೋತಿದ್ದಾರೆ. ವಾಜಪೇಯಿ, ಇಂದಿರಾ ಗಾಂಧಿ ಸೋತಿದ್ದಾರೆ, ನಾನು ಕೂಡ ಸೋತಿದ್ದೇನೆ. ಬಹಳಷ್ಟು ಜನ ಈ ದೇಶದ ಚುನಾವಣೆಯಲ್ಲಿ ಸೋತಿದ್ದಾರೆ, ಸೋಲು- ಗೆಲುವು ಸಹಜ," ಎಂದು ತಿಳಿಸಿದರು.

"ಭಾರತ ದೇಶಕ್ಕೆ ಸಂವಿಧಾನ ಬರೆಯಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್‌ಗೆ ಬಿಜೆಪಿ ಕೊಡುಗೆ ‌ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅಂಬೇಡ್ಕರ್ ಮರಣ ಹೊಂದಿದಾಗ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಾಗದಂತ ಕೀಳು ರಾಜಕಾರಣ ನಾವು ಮಾಡಿಲ್ಲ," ಎಂದು ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿದರು.

"ಇನ್ನು ಮೀಸಲಾತಿ ವಿಚಾರವಾಗಿ ಅಪಪ್ರಚಾರ ಮಾಡಿಲ್ಲ. ಬಿಜೆಪಿ ಪಕ್ಷದ‌ ಮಾಜಿ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದರು. ಕಟ್ಟಿದ್ದನ್ನು ಬೀಳಿಸುವ ಕೆಲಸ ಮಾಡುವವರು ಬಿಜೆಪಿಯವರು," ಎಂದು ಚಿತ್ರದುರ್ಗ ಮಾಜಿ ಸಂಸದ ಚಂದ್ರಪ್ಪ ಬಿಜೆಪಿ ಪಕ್ಷದ ವಿರುದ್ಧ ಟೀಕೆಯ ಸುರಿಮಳೆಗೈದರು.

No comments:

Post a Comment