Friday 20 August 2021

ಚಿತ್ರದುರ್ಗ: ಸಾಧನೆ ಎಂದೆಂದಿಗೂ ಅಮರ

 

ಚಿತ್ರದುರ್ಗ: 'ಏಕವ್ಯಕ್ತಿ ಸಾಧನೆಯ ಜತೆಗೆ ಜೊತೆಯಲ್ಲಿ ಇರುವವರನ್ನು ಸಾಧಕರನ್ನಾಗಿ ಮಾಡುವ ಆದರ್ಶವೇ ಗಣಮೇಳ. ಬಸವಣ್ಣ ಅವರ ಕಾಲಘಟ್ಟದಲ್ಲಿ ಇದನ್ನು ಅಮರಗಣ ಎನ್ನಲಾಗುತ್ತಿತ್ತು. ಆದ್ದರಿಂದ ಸಾಧನೆ ಎಂದೆಂದಿಗೂ ಅಜರಾಮರ' ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಆಕಾಶವಾಣಿ ಹಿಂಭಾಗದ ರಾಜಾನಾಯ್ಕ ಮನೆಯಲ್ಲಿ ಮುರುಘಾಮಠದಿಂದ ನಡೆದ 'ನಿತ್ಯ ಕಲ್ಯಾಣ' ಕಾರ್ಯಕ್ರಮದ ನೇತೃತ್ವವಹಿಸಿ ಗಣಮೇಳದ ಕುರಿತು ಅವರು ಮಾತನಾಡಿದರು.

'ಮಹಾ ಶರಣ-ಶರಣೆಯರು ಕಾಯಕ, ದಾಸೋಹ ಮತ್ತು ಸಮಾನತೆ ತತ್ವಗಳ ಆಧಾರದ ಮೇಲೆ ಕಲ್ಯಾಣ ರಾಜ್ಯ ಕಟ್ಟಿದರು. ಅದೇ ಪರಿಕಲ್ಪನೆಯಲ್ಲಿ ನಾವೆಲ್ಲರೂ ಜಾತಿ-ಧರ್ಮ ಎನ್ನದೆ ಸಮಸಮಾಜ ನಿರ್ಮಿಸಲು ಕೈಜೋಡಿಸಬೇಕಿದೆ' ಎಂದು ಸಲಹೆ ನೀಡಿದರು.

ಕಲ್ಯಾಣ ಎಂದರೆ ಉದ್ಧಾರ. ವ್ಯಕ್ತಿ, ಕುಟುಂಬ, ಸಮಾಜ ಮತ್ತು ದೇಶದ ಪ್ರಗತಿ ಸಾಧಿಸಲು ಎಲ್ಲರ ಸಹಕಾರ ಅಗತ್ಯವಿದೆ. ಅಲಕ್ಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಹೊಸ ಧರ್ಮದ ಸ್ಥಾಪನೆಗೆ ಕಾರಣವಾಗಬೇಕು. ಪ್ರತಿಯೊಬ್ಬರಲ್ಲೂ ಭರವಸೆಯ ಬದುಕು ತುಂಬಬೇಕು. ಲೋಕಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದರು.

ಚನ್ನಗಿರಿಯ ಹಾಲಸ್ವಾಮಿ ವಿರಕ್ತಮಠದ ಬಸವಜಯಚಂದ್ರ ಸ್ವಾಮೀಜಿ, ನಾವೆಲ್ಲರೂ ಉತ್ತಮ ಚಿಂತನೆ ಮಾಡುವ ಮೂಲಕ ಗಣಮೇಳದ ಚಿಂತನೆ ಸಾಕಾರಗೊಳಿಸಬೇಕು. ಇದರಿಂದ ನಮಗೆ ಸತ್ಯದ ಕಲ್ಯಾಣವಾಗುತ್ತದೆ. ಜತೆಗೆ ಪರಿವರ್ತನೆ ಹಾದಿಯಲ್ಲಿ ಸಾಗಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾನಾಯ್ಕ, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಮಲಿಂಗಶೆಟ್ಟಿ, ನಗರಸಭೆ ಸದಸ್ಯ ದೀಪು ಇದ್ದರು.

No comments:

Post a Comment