Saturday 21 August 2021

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಲಘು ಭೂಕಂಪ

 

ಚಿಂಚೋಳಿ: ಚಿಂಚೋಳಿ, ಕಾಳಗಿ ಹಾಗೂ ಸೇಡಂ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಶುಕ್ರವಾರ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಸಂಜೆ 7.20, 7.28 ಹಾಗೂ 7.31 ಹೀಗೆ ಹತ್ತು ನಿಮಿಷಗಳ ಅವಧಿಯಲ್ಲಿ ಭೂಮಿ ಮೂರುಬಾರಿ ಕಂಪಿಸಿದ ಅನುಭವವಾಗಿದೆ.

ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸುತ್ತಮುತ್ತ ಶುಕ್ರವಾರ ಬೆಳಿಗ್ಗೆ 9.50ರ ಸುಮಾರಿಗೆ ಭೂಮಿಯಿಂದ ಭಾರೀ ಶಬ್ದ ಕೇಳಿಬಂದಿತ್ತು. ಆದರೆ, ಭೂಮಿ ಕಂಪಿಸಿರಲಿಲ್ಲ. ಆದರೆ, ಸಂಜೆ ವೇಳೆ ಗಡಿಕೇಶ್ವಾರವೂ ಸೇರಿದಂತೆ ಸುಲೇಪೇಟ, ನಿಡಗುಂದಾ, ಕೊರಡಂಪಳ್ಳಿ, ಕೆರೊಳ್ಳಿ, ಬೆಡಕಪಳ್ಳಿ, ರಾಯಕೋಡ, ಶಿರೋಳ್ಳಿ, ನರನಾಳ್ ರುದ್ನೂರು, ಭಂಟನಳ್ಳಿ, ಬೆನಕನಳ್ಳಿ ಗ್ರಾಮಗಳಲ್ಲಿ ಕೂಡ ಕೆಲ ಸೆಕೆಂಡ್‌ಗಳ ಕಾಲ ಭೂಮಿ ತೂಗಿದ ಅನುಭವವನ್ನು ಜನ ಪಡೆದರು. ದೊಡ್ಡ ಪ್ರಮಾಣದ ಶಬ್ದ ಕೂಡ ಕೇಳಿಸಿದ್ದರಿಂದ ಹೆದರಿದ ಜನ ಮನೆಗಳಿಂದ ಹೊರಬಂದು ಅರ್ಧ ತಾಸು ಕಳೆದರು.‌

ಭೂಮಿ ಕಂಪಿಸುವ ವೇಳೆ ಮನೆಯ ಮುಂದಿನ ಜಿಂಕ್ ಶೀಟ್ ಮೇಲಿನ ದೂಳು ಹಾರಿದರೆ, ವಿದ್ಯುತ್ ಕಂಬದ ತಂತಿ ಹಾಗೂ ಬಲ್ಬ್‌ಗಳು ಅಲುಗಾಡಿದವು. ಮನೆಯಲ್ಲಿನ ಪಾತ್ರೆಗಳು ಕೂಡ ಜಾರಿಬಿದ್ದವು. ಗೋಡೆಗೆ ಹಾಕಿದ್ದ ಕನ್ನಡಿ ಕೆಳಗೆ ಬಿದ್ದು ಒಡೆದಿದೆ ಎಂದು ಗಡಿಕೇಶ್ವಾರ ಗ್ರಾಮದ ರೈತ ಮಂಗಳಮೂರ್ತಿ, ವೀರೇಶ ಬೆಳಕೇರಿ, ಕೊರವಿ ತಾಂಡಾದ ಗೋವಿಂದ್ ಜಿಟಿ, ಕೆರೊಳ್ಳಿಯ ಬಸವರಾಜ ಸುಲೇಪೇಟ, ಮಾಳಪ್ಪ ಅಪ್ಪೋಜಿ ತಮ್ಮ ಅನುಭವ ಹೇಳಿಕೊಂಡರು.

ಕಾಳಗಿ ತಾಲ್ಲೂಕಿನ ಹಲಚೇರಾ, ಪಸ್ತಪುರ, ತೇಗಲತಿಪ್ಪಿ, ಕೊರವಿ, ಕುಡಳ್ಳಿ, ನಾವದಗಿ, ಹೊಸಳ್ಳಿ ಎಚ್, ಕೋಡ್ಲಿ, ಹೊಡೇಬೀರನಹಳ್ಳಿ ಹಾಗೂ ಸೇಡಂ ಸುತ್ತಮುತ್ತಲಿನ ಗ್ರಾಮಗಳಲ್ಲೂ‌ ಇದರ ಅನುಭವಗಳು ಉಂಟಾಗಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

ಪದೇಪದೇ ಸ್ಫೋಟಕ ಶಬ್ದ: 2016 ಹಾಗೂ 17ರಲ್ಲಿ ಗಡಿಕೇಶ್ವಾರದಲ್ಲಿ ಭೂಮಿಯಿಂದ ಸ್ಫೋಟಕ ಶಬ್ದ ಕೇಳಿಬರುತ್ತಿದೆ. ಮಧ್ಯದಲ್ಲಿ 2 ವರ್ಷ ನಿಂತಿತ್ತು. ಈ ವರ್ಷ ಪದೇಪದೇ ದೊಡ್ಡಪ್ರಮಾಣದ ಶಬ್ದ ಬರುತ್ತಿದೆ. ಆದರೆ, ಶನಿವಾರ ಸಂಜೆ ಗಡಿಕೇಶ್ವಾರ ಅಲ್ಲದೇ ಕೋಡ್ಲಿ, ಸುಲೇಪೇಟ, ನರನಾಳ್‌ದಿಂದ ಸೇಡಂವರೆಗೂ ಲಘು ಕಂಪನದ ಅನುಭವ ತಮಗಾಗಿದೆ ಎಂದು ಜನ ಹೇಳಿದರು.

ಶುಕ್ರವಾರ ಉಂಟಾದ ಭೂಕಂಪನ ತುಸು ಭಯ ಮೂಡಿಸಿದೆ. ಈ ಬಗ್ಗೆ ಜನಪ್ರನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ಕೂಡ ನೀಡಿದ್ದೇವೆ. ಜನರ ಭಯ ನಿವಾರಣೆಯಾಗಲು ಅಧಿಕಾರಿಗಳು ಇದರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಬೆನಕನಳ್ಳಿಯ ಮಲ್ಲು ರಾಯಪ್ಪಗೌಡ, ರುದ್ನೂರಿನ ಮಲ್ಲಿಕಾರ್ಜುನ ಕೊಡದೂರ, ಲಿಂಗಶೆಟ್ಟಿ ತಟ್ಟೆಪಳ್ಳಿ, ಬಸವರಾಜ ಸಜ್ಜನಶೆಟ್ಟಿ ಒತ್ತಾಯಿಸಿದ್ದಾರೆ.

.

No comments:

Post a Comment