Tuesday 17 August 2021

ರಾತ್ರಿ 9ಕ್ಕೆ ಅಂಗಡಿ ಮುಚ್ಚಿಸಿ; ಬೆಂಗಳೂರು ಪೊಲೀಸರಿಗೆ ಸಿಎಂ ಸೂಚನೆ.

 ಬೆಂಗಳೂರು, ಆಗಸ್ಟ್ 17; ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ. ರಾತ್ರಿ 9 ರಿಂದ ಮುಂಜಾನೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈಗ ಕರ್ಫ್ಯೂ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.



ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರದಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ರಾತ್ರಿ 9 ಗಂಟೆಗೆ ಅಂಗಡಿಗಳು ಬಾಗಿಲು ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕೋವಿಡ್ 3ನೇ ಅಲೆ ಹರಡುವಿಕೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು, ಸಚಿವ ಆರ್. ಅಶೋಕ ಸುಳಿವು ನೀಡಿದ್ದರು. ಈ ಹಿನ್ನಲೆಯಲ್ಲಿ ನಗರದಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

 

ರಾತ್ರಿ 9 ಗಂಟೆಯ ಬಳಿಕ ಅಂಗಡಿ, ಶಾಪ್‌ಗಳನ್ನು ತೆರೆದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಪೊಲೀಸರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ಜಾರಿಗೆ ತರಲು ನಗರದಲ್ಲಿ ಕಾರ್ಯಾಚರಣೆಯನ್ನು ನಡೆಸಲಿದ್ದಾರೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿದ್ದಾರೆ, "ಮಾನ್ಯ ಮುಖ್ಯಮಂತ್ರಿಗಳು ಬಹಳ ಸ್ಪಷ್ಟವಾಗಿ ನೈಟ್ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ" ಎಂದು ಹೇಳಿದ್ದಾರೆ.

ಶನಿವಾರ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತು ಸಭೆಯನ್ನು ನಡೆಸಿದ್ದರು. ಸರ್ಕಾರ ಈಗಾಗಲೇ ಕೇರಳ, ಮಹಾರಾಷ್ಟ್ರ ಸಂಪರ್ಕಿಸುವ 8 ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂವನ್ನು ಜಾರಿಗೆ ತಂದಿದೆ. ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ.

ಆರ್. ಅಶೋಕ ಹೇಳಿಕೆ ಬೆಂಗಳೂರು ನಗರದ ಕೋವಿಡ್ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ, "ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೆ ತರುವ ಪರಿಸ್ಥಿತಿ ನಗರದಲ್ಲಿ ಸದ್ಯಕ್ಕೆ ಇಲ್ಲ. ಪ್ರಕರಣಗಳು ಎಷ್ಟು ಜಾಸ್ತಿ ಆಗುತ್ತವೆಯೋ ಅದರ ಆಧಾರದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.

"ಬೆಂಗಳೂರು ನಗರದಲ್ಲಿ ಕಳೆದ 50 ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ 300 ರಿಂದ 400 ನಡುವೆ ಇದೆ. ಇದು ಸಹಜ ಮಟ್ಟ, ಈ ಸಂಖ್ಯೆ ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳುವತ್ತ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ" ಎಂದು ಸ್ಪಷ್ಟಪಡಿಸಿದ್ದರು.

ಒಂದು ವೇಳೆ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲು ಚಿಂತಿಸಬಹುದಾಗಿದೆ. ಬಿಬಿಎಂಪಿ ಸಹ ಕೋವಿಡ್ ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಆಗಸ್ಟ್ 17ರ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 1,298 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 21,481. ಬೆಂಗಳೂರು ನಗರದಲ್ಲಿ 340 ಹೊಸ ಪ್ರಕರಣ ಪತ್ತೆಯಾಗಿದೆ, ಸಕ್ರಿಯ ಪ್ರಕರಣಗಳು 7,913 ಆಗಿದೆ.

ಪ್ರಸ್ತುತ ಕರ್ನಾಟಕದಲ್ಲಿ ಬೆಂಗಳೂರು (340), ದಕ್ಷಿಣ ಕನ್ನಡ (288), ಉಡುಪಿ (122) ಜಿಲ್ಲೆಗಳಲ್ಲಿ ಮಾತ್ರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಂಕಿಯಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣದಲ್ಲಿದೆ.

ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದರೂ ಬೆಂಗಳೂರು ನಗರದಲ್ಲಿ ರಾತ್ರಿ 9 ಗಂಟೆಯ ಬಳಿಕ ವಾಹನಗಳ ಸಂಚಾರ ಕಡಿಮೆಯಾಗಿಲ್ಲ. ಅಂಗಡಿಗಳು ಸಹ ತೆರೆದಿರುತ್ತವೆ. ಆದ್ದರಿಂದ ಮುಖ್ಯಮಂತ್ರಿಗಳು ಕಠಿಣ ಕ್ರಮಕ್ಕೆ ಸೂಚನೆಯನ್ನು ನೀಡಿದ್ದಾರೆ.

No comments:

Post a Comment