Sunday 20 June 2021

'ಕಾಗೆ ಸಂದೇಶ'

ವೀಕೆಂಡ್ ಸ್ಪೆಷಲ್: ಈ ವಾರದ ಸಂಡೇ ಸ್ಪೆಷಲ್ ನಲ್ಲಿ ಸತ್ಯಂ ಶಂಕರಮಂಚಿ ಅವರ ತೆಲುಗು ಕಥಾಸಂಕಲನ  ಅಮರಾವತಿ ಕಥೆಗಳು” ಕನ್ನಡಕ್ಕೆ ಡಾ|| ವಿರೂಪಾಕ್ಷಿ ಎನ್ ಬೋಸಯ್ಯ ಅನುವಾದಿಸಿದ್ದಾರೆ.  ಅಮರಾವತಿ ಕಥೆಗಳು ಶಂಕರಮಂಚಿ ಅವರ ಕಥಾಸಂಕಲನ. ಇದರಲ್ಲಿರುವ 100 ಕಥೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಥಾವಸ್ತು ವೈವಧ್ಯವಾಗಿದೆ. ಅಮರಾವತಿ ಪರಿಸರದ ಜನರ ಜೀವನ-ವಿಧಾನ ನೋವು-ನಲಿವುಗಳನ್ನು ಲೇಖಕರು ಸರಳವಾದ ಗ್ರಾಮೀಣ ಭಾಷಾ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ಕಥಾಸಂಕಲನಕ್ಕೆ  ಆಂಧ್ರಪ್ರದೇಶ ಸರ್ಕಾರವು 1979ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

(ಕಥೆ-3) 

'ಕಾಗೆ ಸಂದೇಶ'

ಆ ಬೇವಿನ ಮರದ ಕೆಳಗೆ, ತಲೆ ಎತ್ತದೆ ಮುಸುರೆ ತೊಳೆಯುತಿದ್ದಾಳಲ್ಲ. ಆ ಹುಡುಗಿಯ ಹೆಸರು ಜುವ್ವಿ. ಜುವ್ವಿ ಅಂದರೆ ಅರಳಿಮರ ಎಂದು ಅರ್ಥ. ಅದು ತನ್ನ ನೆರಳಿಗೆ ಬಂದವರಿಗೆ ಆಶ್ರಯ ನೀಡುತ್ತದೆ. ಮನುಷ್ಯಳಾಗಿ ಏಕೆ ಬದುಕುತ್ತಿಯೆ, ಮರದಂತೆ ಸ್ಥಿರವಾಗಿರು! ಸುಖವಾಗಿರುತ್ತಿಯಾ ಎಂದು ಆ ತಾಯಿ ಮಗಳಿಗೆ ಜುವ್ವಿ ಎಂದು ಹೆಸರಿಟ್ಟಳೇನೋ ತಿಳಿಯದು. ಆದರೆ ಜುವ್ವಿ ಮನುಷ್ಯಳಾಗಿ ಬದುಕಬೇಕೆಂದು, ನಗಬೇಕೆಂದು, ಅಳಬೇಕೆಂದು ಕನಸು ಕಾಣುತ್ತಿದ್ದಾಳೆ.

ಜುವ್ವಿ ಹಿತ್ತಲಿಗೆ ಬರುವುದೇ ತಡ ಕಾಗೆಗಳೆಲ್ಲ ಬಂದು ಮರದ ಮೇಲೆ ಕೂರುತ್ತವೆ. ಮರದ ಮೇಲಿದ್ದ ಅಳಿಲುಗಳು ಕೆಳಗೆ ಓಡಿಬರುತ್ತವೆ. ಮರದ ತುದಿ ಕೊಂಬೆಗಳಲ್ಲಿದ್ದ ಗಿಳಿಗಳು ಕೆಳಗಿನ ಕೊಂಬೆಗಳಿಗೆ ರೊಯ್ಯನೆ ಹಾರಿ ಬರುತ್ತಿವೆ. ಜುವ್ವಿ ಮನೆಯೊಳಗಿನಿಂದ ಒಂದೊಂದೇ ಮುಸುರೆಗಳನ್ನು ತೊಳೆಯಲು ಹೊರಗೆ ಹಾಕಿಕೊಳ್ಳುತ್ತಿದ್ದರೆಕಾಗೆಗಳು ಕಾವ್ ಕಾವ್ ಎಂದು ಎಗರುತ್ತ ಹತ್ತಿರಕ್ಕೆ ಬರುತ್ತಿವೆ. ಜುವ್ವಿ ಸುಮ್ನಿರ್ರೆ! ಅಷ್ಟೇಕೆ ಅವಸರ ಎಂದು ಮೂಗು ಮುರಿಯುತ್ತಿದ್ದಾಳೆ. 


ಕಾಗೆಗಳು ಮೂಗುಗಳನ್ನು ರೆಕ್ಕೆಗಳಿಗೆ ತಿಕ್ಕಿಕೊಳ್ಳುತ್ತಾ, ರೆಕ್ಕೆ ಬಡಿಯುತ್ತಾ, ಇನ್ನೂ ಹತ್ತಿರಕ್ಕೆ ಬರುತ್ತಿವೆ. ಪಾತ್ರೆಯಲ್ಲಿ ಉಳಿದಿದ್ದ ಒಂದು ಹಿಡಿ ಅನ್ನವನ್ನು ಕಲ್ಲೊಂದರ ಮೇಲಿಟ್ಟರೆ, ಕಾಗೆಗಳೆಲ್ಲ ಕಚ್ಚಾಡುತ್ತಾ ತಿನ್ನುತ್ತಿವೆ. ಒಂದು ಸ್ವಲ್ಪ ಅನ್ನಕ್ಕೆ ಕಚ್ಚಡಾಬೇಡ್ರೇ! ಎಂದು ಬೈಯುತ್ತಿದ್ದಾಳೆ ಜುವ್ವಿ. ಒಂದು ತರಕಾರಿಯ ತುಂಡನ್ನು ಮರದ ಬಡ್ಡೆಯಿಂದ ಇಣುಕಿ ನೋಡುತ್ತಿದ್ದ ಅಳಿಲಿಗೆ ಎಸೆದಳು. ಕೊಂಬೆಯ ಮೇಲಿದ್ದ ಗಿಳಿಯನ್ನು ನೋಡಿ ನೀನು ರಾಜನಂತೆ, ರಾಣಿಯರ ಜೊತೆ ಅರಮನೆಯಲ್ಲಿ ಇರಬೇಕು. ಅದು ಬಿಟ್ಟು ಎಂಜಲು ಅನ್ನಕ್ಕೆ ಬರುತ್ತೀಯಾ! ತಗೋ! ಎಂದು ಮನೆಯಿಂದ ಬರುತ್ತಾ ಆರಿಸಿಕೊಂಡು ಬಂದಿದ್ದ ಹುಣಸೆಹಣ್ಣುಗಳನ್ನು ಎಸೆದಳು. ಒಂದು ಹಣ್ಣನ್ನು ಗಿಳಿ ಬಾಯಲ್ಲಿ ಕಚ್ಚಿಕೊಂಡರೆ, ಕೆಳಗೆ ಬಿದ್ದ ಹಣ್ಣನ್ನು ತಿನ್ನಲು ಅಳಿಲು ಓಡುತ್ತಿದೆ. ಏನೋ ತಿನ್ನುವುದೆಲ್ಲ ಆಯ್ತೆಂದು ಪಕ್ಷಿಗಳು ಅಲ್ಲಿಂದ ಹೊರಟು ಹೋಗಲ್ಲ. ಜುವ್ವಿ ಮುಸುರೆ ತೊಳೆಯುತಿದ್ದರೆ ಸುತ್ತಲೂ ಸಭೆ ಸೇರಿದಂತೆ ಕೂರುತ್ತವೆ. ಒಂದು ಕಾಗೆ ಕಲ್ಲಮೇಲೆ, ಇನ್ನೊಂದು ಮಣ್ಣುಗುಡ್ಡೆ ಮೇಲೆ, ಮತ್ತೊಂದು ಬೋರಲಾಗಿ ಬಿದ್ದ ಪಾತ್ರೆ ಮೇಲೆ ಹೀಗೆ ಸುತ್ತಲೂ, ಜುವ್ವಿ ಹೇಳುವ ಮಾತುಗಳನ್ನು ಆಲಿಸುತ್ತವೆ. ಮುಸುರೆ ತಿಕ್ಕುತ್ತ ಜುವ್ವಿ ತನ್ನ ಗೋಳನ್ನು ಅವುಗಳ ಜೊತೆ ಹಂಚಿಕೊಳ್ಳುತ್ತಿದ್ದಾಳೆ.

ನನ್ನ ಮಾವ ಚಿಂತಲು, ಯಾವ ಊರ ತೀರದಲ್ಲಿ ಇರುವನೋ ನೋಡಿ ಬರಬಾರದೇನ್ರೇ! ಅವನ ಅಮರಾವತಿ ತೀರದಿಂದ ಹೊರಟು ಒಂದು ತಿಂಗಳಾಯಿತು. ನನ್ನ ಕುತ್ತಿಗೆಗೆ ತಾಳಿ ಕಟ್ಟಿದ್ರೆ ನಾನೇ ಕೈಯಾರ ಅಡುಗೆ ಮಾಡಿ ಊಟಕ್ಕೆ ಬಡಿಸುತ್ತಿರಲಿಲ್ಲವೇ? ಅವನು ಹಡಗಿನಲ್ಲಿ ಅಡುಗೆ ಭಟ್ಟನಾಗಿ ಅವರಿವರಿಗೆ ಅಡುಗೆ ಮಾಡಿ  ಹಾಕೋ ಕರ್ಮವೇನು? ಹೌದು ಬಿಡು ಅವನದೇನು ತಪ್ಪು. ನನ್ನಪ್ಪನದೇ ತಪ್ಪು. ಸಂಪಾದನೆ ಇಲ್ಲದವನಿಗೆ ಹುಡುಗಿನ ಕೊಡ್ತೀನಾ? ಅಂದನು. ಅದಕ್ಕೆ ಮುನಿಸಿಕೊಂಡು ಹಡಗಿನಲ್ಲಿ ಅಡುಗೆ ಭಟ್ಟನಾಗಿ ಕೆಲಸಕ್ಕೆ ಸೇರಿಕೊಂಡನು.

 ನನ್ನಮ್ಮ ಸತ್ತಾಗಿನಿಂದಲೂ ಅಪ್ಪನನ್ನು ಬಿಡಲಾರದಂತೆ ನಾನಿದ್ದೇನೆ. ನಾನು ದುಡಿದು ಹಾಕುತ್ತೇನೆ, ಹಂಗಾಗಿ ನನ್ನ ಮದುವೆ ಮಾಡಿಕೊಡುತ್ತಿಲ್ಲ ಅಪ್ಪ. ಹೋಗ್ಲಿ ಬಿಡು! ನಾನು ದುಡಿದಿದ್ದು ನನ್ನಪ್ಪ ತಿನ್ನಲಿ ಆದರೆ ಅವನ್ನ ಇವನ್ನ ದುಡ್ಡು ಕೇಳಿ ಕುಡಿಯುತ್ತಾನಲ್ಲ! ಏನು ಮಾಡೋದು ಹೇಳು? ಕುಡಿದರೂ ಹೊಡೆದರೂ ಅಪ್ಪ ಅಪ್ಪನೇ ಅಲ್ವಾ. ನಾನು ನಮ್ ಮಾವನ ಜೊತೆಗೆ ಹೊರಟುಹೋದರೆ ಅವನಿಗೆ ದಿಕ್ಕು ಯಾರು?

ಏನೇ! ಮಾವ ಕೆಲಸ ಮಾಡುವ ಹಡಗು ದೊಂಡಪಾಡು ತೀರದ ಹತ್ತಿರ ಇದೆ ಅಂತಾರೆ. ಮಾವ ಆರೋಗ್ಯವಾಗಿದ್ದಾನ ಎಂದು ನೋಡಿಕೊಂಡು ಬರಬಾರದೇನೆ? ಅವನು ಇನ್ನು ದೊಡ್ಡ ಹಡಗಿನಲ್ಲಿ ಕೆಲಸಕ್ಕೆ ಸೇರ್ತಾನಂತೆ. ಬೇಡವೆಂದು ಹೇಳೇ! ಈಗಲೇ ನೋಡಲು ಸಿಗುತ್ತಿಲ್ಲ. ದೊಡ್ಡ ಹಡಗಿನಲ್ಲಿ ಕೆಲಸಕ್ಕೆ ಸೇರಿದರೆ ನಮ್ಮ ಊರನ್ನು ಬಿಟ್ಟು ಗೋದಾವರಿಗೆ ಹೋಗುತ್ತಾನೆ ಮತ್ತೆ.

ದಿನಾಲು ಇವೇ ಮಾತುಗಳು.... ಜುವ್ವಿ ಮತ್ತೆ ಮತ್ತೆ ಹೇಳುವುದು ಕಾಗೆಗಳು ಜುವ್ವಿ ಹೇಳಿದ್ದೆಲ್ಲ ಅರ್ಥವಾಗಿ ಆಲೋಚಿಸುತ್ತಿವೆ! ಎಂಬಂತೆ ಮೂಗುಗಳಿಂದ ರೆಕ್ಕೆಗಳನ್ನು ಗೀರಿಕೊಳ್ಳುತ್ತಿವೆ. ಅಷ್ಟರಲ್ಲಿ ಮನೆಯ ಒಡತಿ ಜುವ್ವಿ! ಯಾರೊಂದಿಗೆ ಮಾತಾಡುತ್ತಿದ್ದೀಯಾ! ಅಂದರೆ ಏನು ಇಲ್ಲಮ್ಮ! ಈ ಕಾಗೆಗಳದ್ದು ಒಂದೇ ಕಾಟ! ಏಯ್ ಎಂದು ಕಾಗೆಗಳನ್ನು ಓಡಿಸಿ, ತೊಳೆದ ಮುಸುರೆ ಪಾತ್ರೆಗಳನ್ನೆಲ್ಲ ಮನೆಯೊಳಕ್ಕೆ ತರುತ್ತಾಳೆ. 

ಮನೆಯೊಳಗೆ ಪಾತ್ರೆಗಳನ್ನು ತಂದಿಟ್ಟ ಜುವ್ವಿಗೆ ಮನೆ ಒಡತಿ ಉಪ್ಪಿಟ್ಟು ಕೊಟ್ಟು ತಿನ್ನು ಅಂದಳು. ಜುವ್ವಿಗೆ ತಿನ್ನಲು ಏನು ಕೊಟ್ಟರೂ ಸರಿ! ಅದನ್ನು ಕೈಯಲ್ಲಿಟ್ಟುಕೊಂಡು ಅಳುತ್ತಾಳೆ. ಜುವ್ವಿಯ ಅಮ್ಮ ಕೂಡ ಮುಸುರೆ ತೊಳೆಯುವವಳು. ಮನೆಯವರು ಏನಾದರೂ ತಿನ್ನಲು ಕೊಟ್ಟರೆ ಜುವ್ವಿಯ ಅಮ್ಮ ಗಂಡನಿಗೆ ತಿಳಿಯದಂತೆ ಐದುವರ್ಷದ ಮಗಳು ಜುವ್ವಿಗೆ ತಿನ್ನಲು ಕೊಡುತ್ತಿದ್ದಳು. ಜುವ್ವಿ ತಿನ್ನದೆ ಸುಮ್ಮನಿದ್ದಾಗ ಅವಳಮ್ಮ ತಿನ್ನೇ ಅಂತ ಗದರಿದರೆ ಅಪ್ಪನಿಗೆ? ಎಂದು ಅಳುತ್ತಿದ್ದಳು. ಇವತ್ತಿಗೂ ಅಷ್ಟೇ; ಊಟವನ್ನು ಕೈಯಲ್ಲಿಟ್ಟುಕೊಂಡು ಅಳುತ್ತಿದ್ದರೆ 'ಅಳುತ್ತೀಯಾ ಏಕೆ ಹುಚ್ಚುಡುಗಿ' ಎಂದು ಮನೆ ಒಡತಿ ಸಮಾಧಾನಿಸಿದಳು. ಆಗ ಕಣ್ಣೀರು ಒರೆಸಿಕೊಂಡ ಜುವ್ವಿ 'ಮನೆಗೆ ಹೋಗಿ ತಿನ್ನುತ್ತೀನಿ ಅಮ್ಮ' ಅಂದಳು. ಏ ಹುಚ್ಚಿ! ನಿನ್ನಪ್ಪನಿಗೆ ಬೇರೆ ಕೊಡುತ್ತೇನೆ. ನೀನು ಇಲ್ಲಿ ತಿನ್ನು ಎಂದಾಕೆ ಹೇಳಿದಾಗ ಜುವ್ವಿ ಮುಖ ಅರಳಿಸಿ ನಸುನಗುತ್ತಾ ತಿಂದು, ತನ್ನಪ್ಪನಿಗೆ ಕೊಟ್ಟ ಉಪ್ಪಿಟ್ಟು ತಗೊಂಡು ಮನೆಗೆ ಬಂದಳು.


ಶ್ರಾವಣ ಮಾಸ ಕೃಷ್ಣೆ ತುಂಬಿ ಹರಿಯುತ್ತಿರುವ ಸಮಯ. ಪೂಜಾರಿ ಬೀದಿಯ ಮನೆ ಗೋಡೆಗಳಿಗೆ ತಾಗಿಕೊಂಡು ಕೃಷ್ಣೆ ಹರಿಯುತ್ತಿದ್ದಳು. ಹಾಗಾಗಿ ಕೃಷ್ಣೆಯ ಮಧ್ಯದಲ್ಲಿ ಹಡಗುಗಳು ಹೋಗಲಾರವು. ಹಡಗುಗಳನ್ನು ಕಡಿಮೆ ನೀರಿರುವ ತೀರಗಳ ಹತ್ತಿರ ನಡೆಸುತ್ತಿದ್ದರು.

ಮುಂಜಾನೆ ಬೆಳಗಾಗುತ್ತಲೇ ಮಾವನ ಹಡಗು ಇಂದು ತೀರಕ್ಕೆ ಬರುವದೆಂದು ನೋಡಲಿಕ್ಕೆ ಬಂದಳು ಜುವ್ವಿ. ಜುವ್ವಿಯ ಜೊತೆಗೇನೆ ಕಾಗೆಗಳು, ಅಳಿಲುಗಳು, ಗಿಳಿಗಳು ಬಂದವು. ಜುವ್ವಿಯ ಕೈಗಳು ಯಾಂತ್ರಿಕವಾಗಿ ಮುಸುರೆ ತಿಕ್ಕುತಿದ್ದರೂ, ಮನಸೆಲ್ಲಾ ತೀರದಲ್ಲಿ ಬಂದುಹೋಗುವ ಹಡಗುಗಳ ಮೇಲೆಯೇ ಇದೆ. ಪ್ರತಿ ಹಡಗು ಬಂದಾಗಲೂ ಓಡಿಹೋಗಿ ನೋಡಿಕೊಂಡು ಬರುತ್ತಿದ್ದಾಳೆ. ಅವಳ ಚಿಂತಾಲ ಮಾವನ ಹಡಗು ಎಷ್ಟೊತ್ತಾದರೂ ಬರಲೇ ಇಲ್ಲ. ಕಾಗೆಗಳೆಲ್ಲ ಕಾವ್ ಕಾವ್ ಅನ್ನುತ್ತಾ ಕೃಷ್ಣೆಯ ತೀರಕ್ಕೆ ಹಾರಿದವು. ಅಂದ್ರೆ! ಹಡಗು ಬರುತ್ತದೆ ಎಂದು ಅರ್ಥ. ಜುವ್ವಿ ಕೈಯಲ್ಲಿ ತೊಳೆಯುತ್ತಿದ್ದ ಗಿಂಡಿಯನ್ನು ಕೈಯಲ್ಲಿಟ್ಟುಕೊಂಡು ಓಡಿದಳು. ಬಿಳಿಬಟ್ಟೆ ತೆರೆಯ ಹಡಗು ತೀರದ ಹತ್ತಿರ ಬರುತ್ತಿದೆ. 

ಜುವ್ವಿಯ ಹೃದಯ ಡಬಡಬ ಎಂದು ಹೊಡೆದುಕೊಳ್ಳುತ್ತಿದೆ. ಅಲ್ಲಿದ್ದಾನೆ! ಚಿಂತಾಲ ಮಾವ! ಹಡಗಿನ ತೆರೆಗೂಟದತ್ತಿರ ನಿಂತ್ಕೊಂಡು ಕೈಯಲ್ಲಿ ಹಿಡಿದುಕೊಂಡಿದ್ದ ಗಿಂಡಿಯಲ್ಲೇ ಕೈಬೀಸಿದನು. ಜುವ್ವಿಯೂ ಮುಸುರೆ ಗಿಂಡಿಯಿಂದಲೇ ಕೈಬೀಸಿದಳು. ಜುವ್ವಿಯ ಮೈಮನಸ್ಸು, ಕಣ್ಣುಗಳು ಪುಳಕಿತಗೊಂಡವು. ಮರುಕ್ಷಣವೇ ಕಣ್ಣುಗಳಿಂದ ಕೃಷ್ಣೆ ಹರಿಯತೊಡಗಿದಳು. ಹಡಗು ಜುವ್ವಿಯ ಹತ್ತಿರಕ್ಕೆ ಬಂತು. ಚಿಂತಾಲು ನಗುತ್ತಾ, ಜುವ್ವಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದನು. 

ಜುವ್ವಿಗೆ ಏನೋ ಕೇಳಬೇಕೆನಿಸಿತು. ಮಾತು ಹೊರಡಲಿಲ್ಲ. ಚಿಂತಾಲುವಿಗೂ ಏನೋ ಹೇಳಬೇಕೆನಿಸಿತು. ಗಂಟಲು ಕಟ್ಟಿತು. ಅಷ್ಟರಲ್ಲಿ ಹಡಗು ಜುವ್ವಿಯನ್ನು ದಾಟಿ ಹೋಗುವುದರಲ್ಲಿತ್ತು. ಅಷ್ಟರಲ್ಲಿ ಚಿಂತಾಲು ಲಂಕೆಯಲ್ಲಿ ಕೊಯ್ದುಕೊಂಡು ತಂದಿದ್ದ ಪೇರಲಹಣ್ಣನ್ನು ತೀರಕ್ಕೆ ಎಸೆದನು. ಜುವ್ವಿ ಚಂಗನೆ ಹಾರಿ ಅದನ್ನು ಹಿಡಿದುಕೊಂಡಳು. ಬಿಳಿಬಟ್ಟೆ ತೆರೆಯ ಹಡಗು ದೂರವಾಯಿತು. ಚಿಂತಾಲು ಮಾವ ಹೊರಟುಹೋದನು. ಮನೆ ಒಡತಿ ಮನೆಯಿಂದ ಜುವ್ವಿ ಎಂದು ಕೂಗಿ ಕರೆದಾಗ 'ಜುವ್ವಿ ಈ ಲೋಕಕ್ಕೆ ಇಳಿದು ಬಂದಳು'. ಕುಣಿಯುತ್ತ ಹಿತ್ತಲಮನೆ ಕಡೆ ಬಂದವಳು, ಎಲ್ಲಿಲ್ಲದ ಖುಷಿಯಿಂದ ಒಂದು ಕೈಯಲ್ಲಿ ಮುಸುರೆ ತಿಕ್ಕುತ್ತಾ, ಇನ್ನೊಂದು ಕೈಯಲ್ಲಿ ಪೇರಲಹಣ್ಣು ತಿನ್ನುತ್ತಿದ್ದಾಳೆ. ಅವಳೊಂದಿಷ್ಟು ತಿಂದು, ಒಂದಿಷ್ಟು ಕಾಗೆಗಳಿಗೆ ಕೊಟ್ಟಳು. ಮತ್ತೊಂದಿಷ್ಟು ಅಳಿಲಿಗೆ ನೀಡಿದಳು. ಉಳಿದಿದ್ದನ್ನು ಗಿಳಿಗಳಿಗೆ ಎಸೆದಳು.

ಅನಂತರ ಮನೆ ಒಡತಿ ತಿನ್ನಲು ಮೊಸರನ್ನ ಕೊಟ್ಟಾಗ, ಅದನ್ನು ಕೈಯಲ್ಲಿ ಇಟ್ಕೊಂಡು ಅತ್ತಳು. ಆಗ ಮನೆಯಾಕೆ ನಿಮ್ಮಪ್ಪನಿಗೆ ಬೇರೆ ಕೊಡುತ್ತೇನೆ ಬಿಡೆ ಅಂದರೂ, ಕಣ್ಣೀರು ನಿಲ್ಲಲ್ಲಿಲ್ಲ. ಜುವ್ವಿ ಮತ್ತೆ ಅತ್ತಳು; ಮತ್ತೆ ಮತ್ತೆ ಅತ್ತಳು. ಅಪ್ಪನಿಗಾಗಿ ಅಲ್ಲ! ತನ್ನ ಚಿಂತಾಲು ಮಾವನಿಗೋಸ್ಕರ.

ಕಣ್ಣೀರು ಒರೆಸಿಕೊಳ್ಳುತ್ತಾ ಹೊರಬಂದಾಗ ತನ್ನ ಸುತ್ತಲೂ ನೆರೆದ ಕಾಗೆಗಳು, ಅಳಿಲುಗಳುಗಿಳಿಗಳೊಂದಿಗೆ ಹೀಗೆಂದಳು. 'ನಮ್ಮ ಮಾವನ ಹಡಗು ಇಂದು ಧರಣಿ ಕೋಟೆಯ ತೀರದಲ್ಲಿರುತ್ತದೆ. ನೀವು ಹೋಗಿ ನಾನು ಮಾವನಿಗಾಗಿ ಅಳಲಿಲ್ಲ ಎಂದು ಹೇಳಿರೇ! ನಗುತ್ತಿದ್ದೇನೆ ಎಂದು ಹೇಳಿರೇ! ಅನ್ನುತ್ತಾ ಮನಸಾರೆ ನಕ್ಕಳು. 

ಡಾ. ವಿರೂಪಾಕ್ಷಿ ಎನ್ ಬೋಸಯ್ಯ

ಬೊಸೇದೇವರಹಟ್ಟಿ, ಚಳ್ಳಕೆರೆ ತಾಲೂಕು.

No comments:

Post a Comment