Saturday 12 June 2021

‘ಸುಬ್ಬನ ಬೋಂಡಾ ಬುಟ್ಟಿಯಲ್ಲಿ, ರಹಸ್ಯ ಲಕ್ಷ್ಮೀದೇವಿ’

ವೀಕೆಂಡ್ ಸ್ಪೆಷಲ್: ಈ ವಾರದ ಸಂಡೇ ಸ್ಪೆಷಲ್ ನಲ್ಲಿ ಸತ್ಯಂ ಶಂಕರಮಂಚಿ ಅವರ ತೆಲುಗು ಕಥಾಸಂಕಲನ  ಅಮರಾವತಿ ಕಥೆಗಳು” ಕನ್ನಡಕ್ಕೆ ಡಾ|| ವಿರೂಪಾಕ್ಷಿ ಎನ್ ಬೋಸಯ್ಯ ಅನುವಾದಿಸಿದ್ದಾರೆ. 

(ಕಥೆ-2) 

‘ಸುಬ್ಬನ ಬೋಂಡಾ ಬುಟ್ಟಿಯಲ್ಲಿ, ರಹಸ್ಯ ಲಕ್ಷ್ಮೀದೇವಿ

ಅಮರಾವತಿ - ಧರಣಿಕೋಟೆ ಮಧ್ಯೆಯ ಕೃಷ್ಣಾ ನದಿ ತೀರದಲ್ಲಿ ಒಂದು ದೊಡ್ಡ ಹುಣಸೆ ಮರವಿದೆ. ರಾತ್ರಿವೇಳೆಯಲ್ಲಿ ಆ ಮರದ ತ್ತಿರ, ದೆವ್ವಗಳು ತಿರುಗಾಡುತ್ತವೆ. ಎಂಬ ಭಯದಿಂದ ಯಾರು ಅತ್ತ ಸುಳಿಯುತ್ತಿರಲಿಲ್ಲ. ಅಲ್ಲೊಂದು, ಇಲ್ಲೊಂದು ಹುಣಸೆ ಹಣ್ಣು ಬಿಡುವ, ಮರದ ವಯಸ್ಸು ತಿಳಿದವರು ಯಾರೂ ಇಲ್ಲ? ಹಾಗಾಗಿ ಆ ಮರಕ್ಕೆ ವಯಸ್ಸೆಷ್ಟೋ! ಯಾರಿಗೂ ತಿಳಿಯದು.

ಪ್ರತಿದಿನ ಮುಂಜಾನೆ ಕೃಷ್ಣಾ ನದಿಗೆ ಸಂಧ್ಯಾವಂದನೆಗೆ ಬರುವ ಅವಧಾನಿಗಳು, ಕೈಗಳು ನೋವಾಗೋವರೆಗೂ ಕಲ್ಲುಗಳನ್ನು ಬೀಸಿದರೆ, ಒಂದಿಡಿಯಷ್ಟು ಹುಣಸೆಹಣ್ಣು ಸಿಗುತ್ತಿತ್ತು. ಅದನ್ನು ಭದ್ರವಾಗಿ ತಡಿ ಬಟ್ಟೆಯ ತುದಿಗೆ ಕಟ್ಟಿಕೊಂಡು, ಮಡದಿ ಕೃಷ್ಣಮ್ಮಳಿಗೆ ನೀಡಿದರೆ ಆಕೆ, 'ಇವತ್ತು ಚಟ್ನಿ ಮಾಡಿಕೊಳ್ಳಲು ಕೊಟ್ಟಳಾ?(ಹುಣಸೆ ಮರ) ಅಂದರೆ! ಅವಧಾನಿಗಳು ಆ ಮಾತುಗಳನ್ನೇ ಮಡದಿಯೆಡೆಗೆ ತಿರುಗಿಸಿ 'ನಾಳೆ ಸಾರು ಮಾಡಿಕೊಳ್ಳಿ? ಅಂತ ಕೊಟ್ಟಳು' ಅನ್ನುತ್ತಿದ್ದರು. 

ಪ್ರತಿದಿನ ಹತ್ತು ಗಂಟೆಯ ನಂತರ ಹುಣಸೆಮರದ ನೆರಳಿನಲ್ಲಿ ಸಂಚಲನ ಆಟ ಶುರುವಾಗುತ್ತದೆ. ಇರುವೆಗಳು ಗೂಡಿನೊಳಗೆ ಒಂದರ ಹಿಂದೆ ಒಂದು ಹೋಗುವಂತೆ ಒಬ್ಬರ ಹಿಂದೆ ಒಬ್ಬರು ಆ ಮರದ ನೆರಳಿನತ್ತ ಬಂದು ಸೇರುತ್ತಾರೆ.ಹಾಗೆ ಬಂದವರೆಲ್ಲರೂ ಎರಡು ಮೂರು ಗುಂಪುಗಳಾಗಿ ನೆಲವನ್ನು ಹಸನು ಮಾಡಿಕೊಂಡು ಇಸ್ಪೀಟ್ ಆಟ ಆಡಲು ಆರಂಭಿಸುತ್ತಾರೆ.

ಕೊಂಬೆಗಳ ಮಧ್ಯದಿಂದ ಬಿಸಿಲು ಬಿದ್ದು ಮೈಚುರುಕ್ಕೆಂದರೂ ಲೆಕ್ಕಿಸದೆ 'ದೀಕ್ಷೆಯಂತೆ ಸಾಗುತಿದ್ದ, ಈ ಯಜ್ಞ ವೇದಿಕೆಯ ಹತ್ತಿರಕ್ಕೆ ನಿಧಾನವಾಗಿ ಬೋಂಡ ಮಾರುವ ಸುಬ್ಬನು ನಡೆದು ಬರುತ್ತಾನೆ. ಬಲಗೈಯಲಿ ಘಮಘಮಿಸುವ ಬಿಸಿ ಬಿಸಿ ಬೋಂಡಾ, ಬುಟ್ಟಿಯ ಮೇಲೆ ನೋಣಗಳು ಬರದಂತೆ ಎಡಗೈಯಿಂದ ಹಳೆಬಟ್ಟೆಯಿಂದ ಗಾಳಿ ಬೀಸುತ್ತಾ ಅಲ್ಲಿ ಪ್ರತ್ಯಕ್ಷವಾಗುತ್ತಾನೆ.

ಸುಬ್ಬ ಹೀಗೆ$$ ಗಾಳಿ ಬೀಸುವುದಕ್ಕೆ, ನೊಣಗಳಂಥ ಕ್ರಿಮಿಕೀಟಗಳು ಬೋಂಡಗಳ ಮೇಲೆ ಕೂರದಿರಲಿ ಅನ್ನೋದರ ಜೊತೆಗೆ. ಬೋಂಡಗಳ ಘಮಘಮಿಸುವ ವಾಸನೆ. ನಾಲ್ಕು ದಿಕ್ಕುಗಳತ್ತಲ್ಲೂ ಪಸರಿಸಲಿ ಎಂಬ ಪ್ರಯತ್ನವು ಕೂಡ ಇದೆ. ಗಾಳಿಯಲ್ಲಿ ತೇಲುತ್ತಾ ಬಂದ ಬೋಂಡಾಗಳ ಘಮಘಮ ವಾಸನೆಯೂ ಇಸ್ಪೀಟು ಆಡುತಿದ್ದ ಎಲ್ಲರ ಮೂಗುಗಳಿಗೂ ತಲುಪಿ, ಹೊಟ್ಟೆ ಹಸಿದಿದೆ ಎಂಬುದನ್ನು ನೆನಪಿಸುವ ಜೊತೆಗೆ ಬಾಯಲ್ಲಿಯೂ ನೀರೂರಿಸಿ.

ಲೋ$$ ಸುಬ್ಬ! ಮೊದಲು ಇಲ್ಲಿ ಕೊಡೋ! ನನಗೆ ಕೊಟ್ಟು ಹೋಗೋ! ಇಲ್ಲಿ ಬಾ ಅಂದ್ರೆ$$  ಹೀಗೆ, ಅಷ್ಟು ದಿಕ್ಕುಗಳಿಂದಲೂ ಬರುವ ಮಾತಿನ ಕೇಕೆಗಳನ್ನು ಕೇಳಿದ. ಸುಬ್ಬ -'ಯ್ಯಾ$$  ಬಂದೆ,' ದೋ, ನೋಡಿ ನಿಮಗೆ.’  'ಮೊದಲು ನಿಮಗೆ' 'ಇಲ್ಲಿ ನೋಡಿ ಹಾಕುತ್ತಿದ್ದೇನೆ' ಎಂದು. ಎಲ್ಲರಿಗೂ ಅಲ್ಲಲ್ಲಿಯೇ ಸಮಾಧಾನಗಳನ್ನು ಹೇಳುತ್ತಾ, ಲಗುಬಗೆಯಿಂದ ಓಡಾಡುತ್ತಾ ಕೊಡುತ್ತಿದ್ದ.

 'ಗುಡುಗುಸಿಡಿಲು ಮಳೆಯಲ್ಲಿಯೂ ಕುದುರೆಯನ್ನು ವೇಗವಾಗಿ ಓಡಿಸುತ್ತ ಸವಾರಿ ಮಾಡುವ ಸವಾರನ ಜಾಣ್ಮೆಯಂತೆ' ಕೆಲ ಸಮಯದಲ್ಲಿಯೇ ಎಲ್ಲರಿಗೂ ಬೋಂಡಾ ಚಟ್ನಿಯನ್ನು ಕೊಡುತ್ತಿದ್ದ. ಮತ್ತೊಮ್ಮೆ ಚಟ್ನಿ ಕೇಳಿದರೆ ಮಾತ್ರ ಬೇಸರಿಸಿಕೊಳ್ಳುತ್ತಿದ್ದ. ಇನ್ನೊಂದಿಷ್ಟು, ಚಟ್ನಿ. ಹಾಕು? ಎಂದು ಯಾರಾದರೂ ಕೇಳಿದರೆ. ಏನು ಸ್ವಾಮಿ? ಬೋಂಡಾ ತಿಂದರೆ ಬಲ ಬರುತ್ತದೆ. ಚಟ್ನಿ ತಿಂದರೆ ಏನು ಬರುತ್ತೆ? ಎಂದು ತಿರಸ್ಕಾರದಿಂದಲೇ ಸ್ವಲ್ಪ ಚಟ್ನಿ ಹಾಕುತಿದ್ದ. ಎಷ್ಟು ಬೇಗ ಬೋಂಡ-ಚಟ್ನಿಗಳನ್ನು ಸಪ್ಲೈ ಮಾಡುತ್ತಿದ್ದನೋ, ಅಷ್ಟೇ ವೇಗವಾಗಿ ಹಣವನ್ನು ವಸೂಲಿ ಮಾಡಿಕೊಳ್ಳುತ್ತಿದ್ದ. ಹಣ ಕೊಡದಿದ್ದರೆ ಇಸ್ಪೀಟೆಲೆಗಳನ್ನು ಕಲಿಸಲು, ಹಂಚಲು ಬಿಡುತ್ತಿರಲಿಲ್ಲ‌. ಆಟದಲ್ಲಿ ಮಗ್ನರಾಗಿ ಹಣ ಕೊಡೋದು ಮರೆಯುತ್ತೀರಿ ಸ್ವಾಮಿ? ಎಂದು ನಗುತ್ತಲೇ ಮೊಂಡಿರಚ್ಚೆ ಹಿಡಿಯುತ್ತಿದ್ದನು.

ಅಷ್ಟರಲ್ಲಿ ಆ ತೀರದಿಂದ ಈ ತೀರಕ್ಕೆ ಬಂದಿರುತ್ತಿದ್ದ ದೋಣಿಯ ಹತ್ತಿರಕ್ಕೆ ಬಾಣ ಹೋಗುವಷ್ಟು ವೇಗವಾಗಿ ಬಂದು ಸೇರಿರುತ್ತಿದ್ದ, ಸುಬ್ಬ. ಬೋಂಡ$$ ಬಿಸಿ, ಬಿಸಿ  ಬೋಂಡಾ$$ ಎನ್ನುತ್ತಾ ಬಂದವರ ಸುತ್ತಲೂ ತಿರುಗುತಿದ್ದ. ಬಂದವರು ದೋಣಿಯಿಂದ ಸಾಮಾನುಗಳನ್ನು ಇಳಿಸುವ ಮೊದಲೇ, ಬೋಂಡಾ ಕೊಂಡು ತಿನ್ನುವಂತೆ ಮಾಡುತ್ತಿದ್ದ. ಯಾರಾದರೂ ಕೊಳ್ಳದಿದ್ದರೆ ಅವರ ಮಕ್ಕಳ ಸುತ್ತಲೂ ಬೋಂಡಗಳನ್ನು ತೋರಿಸುತ್ತ ತಿರುಗುತಿದ್ದ. ಮಕ್ಕಳು ಬೋಂಡ ಬೇಕೆಂದು ಅಳುತ್ತಾ ಹಠ ಹಿಡಿದಾಗ ವಿಧಿಯಿಲ್ಲದೆ ಕೊಡಿಸುತ್ತಿದ್ದರು.

ಹೀಗೆ ಮೂರು ಸಾರಿ ಸುಬ್ಬ ತೀರಕ್ಕೂ, ಹುಣಸೆ ಮರಕ್ಕೂ ತಿರುಗುವಷ್ಟರಲ್ಲಿ ಬುಟ್ಟಿ ಅರ್ಧ ಖಾಲಿಯಾಗಿರುತ್ತಿತ್ತು. ವ್ಯಾಪಾರ ಸ್ವಲ್ಪ ಕಡಿಮೆಯಾದಾಗ ಇಸ್ಪೀಟ್ ಆಡುವವರ ಹಿಂದೆ ಕುಳಿತುಕೊಂಡು 'ಪೋಲಯ್ಯನವರೇ! ಆ ಎಲೆ ತೆಗೆದುಕೊಳ್ಳಿ. ಅದರ ಹೊಡೆತಕ್ಕೆ ಆಟ ಆಗಿಬಿಡಬೇಕು! ಅಂತ ಹೇಳುತ್ತಲೇ, ಎಲೆ ಮೇಲೆ ಬೋಂಡ  ಇಟ್ಟುಕೊಂಡು ತಿನ್ನಿಸಿ ಹಣ ವಸೂಲಿ ಮಾಡಿಕೊಳ್ಳುತ್ತಿದ್ದನು. ಆಟ ಸೋತು ಕುಳಿತುಕೊಂಡವರ ಹತ್ತಿರ ಬಂದು, ಅವರು ಬೇಡವೋ? ಅಂದರು ಚಟ್ನಿ ಜಾಸ್ತಿ ಹಾಕಿದ್ದೀನಿ ತಗೊಳ್ಳಿ. ಮತ್ತೆ ಆಟ ಆರಂಭವಾಗೋತನ್ಕ ಸುಮ್ಮನೆ ಖಾಲಿ ಕೂರೋದ್ಹೇಕೆ ಎಂದು ಕೊಡುತ್ತಿದ್ದನು.

ಸಾಯಂಕಾಲ ಮೂರು ಗಂಟೆಗೆಲ್ಲಾ ಬುಟ್ಟಿ ಖಾಲಿಯಾಗುತ್ತಿತ್ತು. ಆದರೂ ಸುಬ್ಬ ಅಲ್ಲಿಂದ ಕದಲುತ್ತಿರಲಿಲ್ಲ. ನಿಜವಾಗ್ಲೂ ಸುಬ್ಬನ ವ್ಯಾಪಾರ ಶುರುವಾಗುತ್ತಿದ್ದೆ ಆಗ. ಇಸ್ಪೀಟು ಎಂಬ  ಕುರುಕ್ಷೇತ್ರದಲ್ಲಿ ಕೈ-ಕಾಲು ಮುರಿದು, ತಲೆ ಒಡೆದುಕೊಂಡು ಅಡ್ಡಬಿದ್ದ ಸೈನಿಕರೆಲ್ಲ, ಸುಬ್ಬನನ್ನು ಶ್ರೀಕೃಷ್ಣನಂತೆ ದೀನವಾಗಿ ನೋಡುತ್ತಾ, ಒಂದೆರಡು ರೂಪಾಯಿಗಳು ಕೊಡ್ತೀರಾ$$? ಎಂದು ಕೇಳಿದರೆ 'ಬೋಂಡಾ ಮಾರಿ ಜೀವನ ಮಾಡೋನ ಹತ್ತಿರ ದುಡ್ಡು ಎಲ್ಲಿರುತ್ತೆ ಸ್ವಾಮಿ? ಅನ್ನುತ್ತಿದ್ದ. ಯಾರು ಕೇಳಿದರೂ ಮೊದಮೊದಲು ಹೀಗೆ ಹೇಳುತ್ತಿದ್ದವನ ಅನಂತರದ ಸಂಭಾಷಣೆ ಹೀಗೆ ಸಾಗುತಿತ್ತು.

ಬೋಂಡಾ ಮಾರಿದ ದುಡ್ಡಲ್ಲಿ ಕೊಡೋ$$? ಅಮ್ಮೋ$$? 'ಇದು ಕೊಟ್ಟರೆ ಅಕ್ಕಿಗೆ ಇರಲ್ಲಪ್ಪೋ$$ ಸ್ವಾಮಿ,' ಸಾಯಂಕಾಲ ಕೊಟ್ಟು ಬಿಡ್ತೀನಿ ಬಿಡೋ? 'ಈಗ ನಿಮಗೆ ಕೊಟ್ಟರೆ ಸಾಮಾನು ತರಕ್ಕೆ ದುಡ್ಡು ಎಲ್ಲಿಂದ ಬರುತ್ತೆ. ಬೆಲೆಗಳು ನೋಡಿದ್ರೆ ಗಗನಕ್ಕೇರುತ್ತಲೇ ಇವೆ. ನೀನು ನಾಲ್ಕಣೆ ಬಡ್ಡಿ ಹಾಕಿಕೊಳ್ಳೋ? ಅಂದಾಗ ಅಸಲು-ಬಡ್ಡಿ ನಿಮ್ಮತ್ರ ಎಲ್ಲಿ ಹೋಗುತ್ತೆ, ಬಿಡಿ, ಸ್ವಾಮಿ. ಎಂದು ಹೇಳುತ್ತಲೇ, ಅಂಗಲಾಚಿದವರಿಗೆಲ್ಲ ನಾಲ್ಕಾಣೆ ಬಡ್ಡಿಯಂತೆ ಸಾಲ ಕೊಡುತ್ತಿದ್ದನು. ಬೋಂಡ ಮಾರಿದ್ದರ ಲಾಭ ಐದು ರೂಪಾಯಿ ಬಂದರೆ, ರೂಪಾಯಿಗೆ ನಾಲ್ಕಣೆ ಬಡ್ಡಿಯಿಂದ ಹತ್ತು ರೂಪಾಯಿ ಉಳಿಯೋದು. ಕತ್ತಲಾಗುವುದರ ಒಳಗೆ ಅಸಲು-ಬಡ್ಡಿ ವಸೂಲಿ ಮಾಡಿಕೊಂಡು, ಅಲ್ಲಿಂದ ನೇರವಾಗಿ ಸಾರಾಯಿ ಅಂಗಡಿ ಹತ್ತಿರ ಬರುತ್ತಿದ್ದನು.

ಸಾರಾಯಿ ಮಾರುವ ಹುಡುಗಿ ಕೊಡುವ ಒಂದು ಮುತ್ತಿನಿಂದ ರೋಮಾಂಚನಗೊಳ್ಳುತಿದ್ದ. ಆ ಯುವತಿಯನ್ನು ತಬ್ಬಿಕೊಳ್ಳಲು, ಮುತ್ತು ಪಡೆಯಲು ಹಣವಿಲ್ಲದ, ಸಾರಾಯಿ ಕುಡಿದ ರಸಿಕರಿಗೆ ಎಂಟಾಣೆ ಬಡ್ಡಿ ಲೆಕ್ಕದಲ್ಲಿ ಸಾಲ ನೀಡುತ್ತಿದ್ದ. ಆ ಅಸಲು ಬಡ್ಡಿಯನ್ನು ಜಗಳ ಮಾಡಿಯಾದರೂ ಸರಿ ವಸೂಲಿ ಮಾಡಿಕೊಡುತ್ತಿದ್ದನು.

ಹೀಗೆ ಮೂರು ವರ್ಷದೊಳಗೆ ಒಂದು ಚಿಲ್ಲರೆ ಅಂಗಡಿ ಹಾಕಿಕೊಂಡ ಸುಬ್ಬ. ಜನರಿಗೆ ಒಡವೆ, ಹೊಲ, ಮನೆಯ ಕಾಗದ ಪತ್ರಗಳನ್ನು ಅಡವಿಟ್ಟುಕೊಂಡು ಬಡ್ಡಿಗೆ ಸಾಲ ನೀಡುತ್ತಿದ್ದ. ಅಸಲು-ಬಡ್ಡಿ ತೀರಿಸಲಾರದ ಸಾಕಷ್ಟು ಜನರ ಒಡವೆಗಳು ಅವನಲ್ಲೇ ಉಳಿದವು. ಸಾಲ ತೀರಿಸಲಾರದ ಕೆಲವರ ಹೊಲಗಳು ಸುಬ್ಬನ ಕಡೆ ಜಪ್ತಿಯಾದವು. ಬೋಂಡಾ ಮಾರುತಿದ್ದ, ಸುಬ್ಬ. ಇಂದು ನಲವತ್ತು ಎಕರೆ ಹೊಲ, ಮೂರು ಕೆ.ಜಿ. ಬಂಗಾರಕ್ಕೆ ಅಧಿಪತಿ. ಮೇಲಾಗಿ ಇಂದು ಲಕ್ಷ-ಲಕ್ಷಗಳಲ್ಲಿ ನಡೆಯುತ್ತಿರುವ ಬಡ್ಡಿ ವ್ಯವಹಾರ.

ಈಗ ಊರಲ್ಲಿ ಯಾರು ಅವನನ್ನು ಸುಬ್ಬ ಎಂದು ಕರೆಯುವುದಿಲ್ಲ. ಅವರ, ಕುಲದವರು ಸುಬ್ಬಯ್ಯ ಅಂದ್ರೆ, ಉಳಿದವರು ಸುಬ್ಬಾರಾವ್ ಸ್ವಾಮಿ, ಅನ್ನುತ್ತಾರೆ. ಮಕ್ಕಳು-ಮೊಮ್ಮಕ್ಕಳೊಂದಿಗೆ ಗೌರವಯುತವಾಗಿ ಬದುಕುತ್ತಿರುವ ಸುಬ್ಬ ಯಾರನ್ನು ನಂಬಲ್ಲ. ದಿನಾಲು ಬೆಳ್ಳಂಬೆಳಗ್ಗೆ ಎದ್ದು ಕೋಣೆಯೊಂದರ ಬಾಗಿಲನ್ನು ಹಾಕಿಕೊಂಡು ರಹಸ್ಯವಾಗಿ ಒಂದು ಗಂಟೆ ಕಾಲ ಪ್ರಾರ್ಥನೆ ಮಾಡುತ್ತಾನೆ. ಎಲ್ಲರಿಗೂ ಈ ನನ್ನ ಪ್ರಾರ್ಥನೆಯೇ ನಮ್ಮನೆಯ ಲಕ್ಷ್ಮಿ ಎಂದು ಹೇಳುತ್ತಾನೆ.

ಪಟ್ಟಣದ ಕಾಲೇಜಿನಲ್ಲಿ ಓದುತ್ತಿರುವ ಸುಬ್ಬನ ಮೊಮ್ಮಗ ತನ್ನ ತಂದೆ-ತಾತರು ಇಟ್ಟಿದ್ದ ಬುಚ್ಚಯ್ಯ ಎಂಬ ಹೆಸರನ್ನು ಹೇಮಂತ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದಾನೆ. ಒಮ್ಮೆ ಬೇಸಿಗೆರಜೆಗೆ ಮನೆಗೆ ಬಂದವನು 'ತಾನು ಚಿಕ್ಕಂದಿನಿಂದಲೂ ನೋಡುತ್ತಿದ್ದ ತಾತನ ರಹಸ್ಯ ಪ್ರಾರ್ಥನೆಯನ್ನು ಕಂಡು ಹಿಡಿಯಬೇಕು? ಎಂದು ಆಲೋಚಿಸುತ್ತಾನೆ. ಒಂದು ದಿನ ತಾತ ಪೂಜೆ ಮಾಡುವಾಗ ಬಾಗಿಲ ಸಂದಿಗೆ ಬೈನಾಕುಲರ್(ದೂರದರ್ಶಕ) ಇಟ್ಟು, ತಾತನ ಲಕ್ಷ್ಮಿ ರಹಸ್ಯವನ್ನು ತಿಳಿದುಕೊಳ್ಳುತ್ತಾನೆ. ಸುಬ್ಬರಾವ್  ಅವತ್ತು ಬೋಂಡಾ ಬುಟ್ಟಿ ಮತ್ತು ಬುಟ್ಟಿಯ ಮೇಲೆ ಗಾಳಿ ಬೀಸುತಿದ್ದ ಹಳೆಯ ಬಟ್ಟೆಯನ್ನು ಪೂಜಿಸುತ್ತಿದ್ದರು.

ಡಾ. ವಿರೂಪಾಕ್ಷಿ ಎನ್ ಬೋಸಯ್ಯ

ಬೊಸೇದೇವರಹಟ್ಟಿ, ಚಳ್ಳಕೆರೆ ತಾಲೂಕು.

No comments:

Post a Comment