Saturday 12 June 2021

ದಾವಣಗೆರೆ: ಜೂನ್ 14 ರಿಂದ 21 ರವರೆಗೆ ಮನೆವಾಸ ಮುಂದುವರಿಕೆ.

ದಾವಣಗೆರೆ:ಜಿಲ್ಲೆಯಲ್ಲಿ ಜೂನ್ 14 ರವರೆಗೆ ಇದ್ದ ಲಾಕ್‍ಡೌನ್ ಅನ್ನು ಜೂನ್ 21 ರ ಬೆಳಿಗ್ಗೆ 6 ರವೆರೆಗೆ ವಿಸ್ತರಿಸಿ ಆದೇಶಿಸಲಾಗಿದೆ.


ಜಿಲ್ಲಾಡಳಿತ ಭವನದಲ್ಲಿ ಇಂದು  ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ಈ ಹಿಂದಿನ ಮಾರ್ಗಸೂಚಿಯಂತೆ ಲಾಕ್‍ಡೌನ್‍ನ ಎಲ್ಲಾ ನಿರ್ಬಂಧಗಳು ಮುಂದುವರೆದಿದ್ದು, ಜೂನ್ 14, 16, 18 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಮದ್ಯದ ಅಂಗಡಿಗಳು, ಕೋವಿಡ್-19 ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಅನುಮತಿಸಲಾಗಿರುತ್ತದೆ.

ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ಕೆಲಸ, ಕಾಮಗಾರಿಗಳು, ಕಟ್ಟಡ ಕಾಮಗಾರಿ ಸಾಮಾಗ್ರಿ ಮತ್ತು ಅಗತ್ಯ ವಸ್ತುಗಳಾದ ಸಿಮೆಂಟ್, ಕಬ್ಬಿಣ, ಪೇಂಟ್ಸ್, ಹಾರ್ಡ್‍ವೇರ್, ಗ್ಲಾಸ್, ಪ್ಲೆ-ವುಡ್, ಸಾಮಿಲ್ಸ್, ಎಲೆಕ್ಟ್ರೀಕಲ್ಸ್, ಟೈಲ್ಸ್ ಅಥವಾ ಮಾರ್ಬಲ್ಸ್, ಸ್ಯಾನಿಟರಿ ವೈರ್ಸ್ ಅಂಗಡಿಗಳ ಚಟುವಟಿಕೆಗಳನ್ನು ನಡೆಸಲು ಜೂನ್ 14, 16, 18 ರ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಮೂರು ದಿನ ಅವಕಾಶ ಕಲ್ಪಿಸಲಾಗಿದೆ ಎಂದರು.

ಅನಗತ್ಯವಾಗಿ ಮನೆಯಿಂದ ಯಾರು ಹೊರ ಬರಬಾರದು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಅಟೆಂಡರ್‍ಗಳು ಸುಮ್ಮಸುಮ್ಮನೆ ಕಾರಣ ಹೇಳಿ ಹೊರಬರಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 26 ಕಡೆ ಚೆಕ್‍ಪೋಸ್ಟ್ ಇದ್ದು ಅಲ್ಲಿ ಸಿಬ್ಬಂದಿಗಳನ್ನು ಹೆಚ್ಚಳ ಮಾಡಲಾಗುವುದು. ಕೆಲವೆಡೆ ಇಬ್ಬರು ಸಿಬ್ಬಂದಿ ಇದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಹಾಗಾಗಿ ಹೋಂ ಗಾರ್ಡ್ ಗಳನ್ನು ಪಡೆದು ಸಿಬ್ಬಂದಿ ನೇಮಕ ಮಾಡಲಾಗುವುದು. ಹಾಗೂ ನಿಯಾಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಾಗಿಸಲಾಗುವುದು.

ಸಭೆಯಲ್ಲಿ ಎಸಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಒ ಡಾ.ನಾಗರಾಜ್, ಯೋಜನಾಧಿಕಾರಿ ನಜ್ಮಾ, ಎಎಸ್‍ಪಿ ರಾಜೀವ್, ಡಾ.ನಟರಾಜ್, ಡಾ.ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment