Monday, 5 December 2022

KL Rahul: ಕೆಎಲ್ ರಾಹುಲ್ ಮತ್ತೆ ವಿಕೆಟ್ ಕೀಪರ್: ರಿಷಭ್ ಪಂತ್​ಗೆ ಚಿಂತೆ ಶುರು..!

KL Rahul-Rishabh Pant

Bangladesh vs India: ಬಾಂಗ್ಲಾದೇಶ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ (Rishabh Pant) ಹೊರಗುಳಿದಿದ್ದರು. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪಂತ್​ಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ರಿಷಭ್ ಕಾಣಿಸಿಕೊಳ್ಳುವುದು ಅನುಮಾನ. ಇತ್ತ ಕೊನೇ ಕ್ಷಣದಲ್ಲಿ ಪಂತ್ ಹೊರಗುಳಿಯುತ್ತಿದ್ದಂತೆ, ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಏಕೆಂದರೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ತಂಡದಲ್ಲಿದ್ದರು. ಇನ್ನು ಪಂತ್ ಹೊರಗುಳಿದ ಕಾರಣ ಬದಲಿ ಆಟಗಾರನಾಗಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಿದ್ದಾರಾ ಎಂಬ ಕುತೂಹಲ ಕೂಡ ಎಲ್ಲರಲ್ಲಿತ್ತು.

ಆದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಘೋಷಣೆಯಾದಾಗ ವಿಕೆಟ್ ಕೀಪರ್ ಗ್ಲೌಸ್ ಕೆಎಲ್ ರಾಹುಲ್ ಜೊತೆಗಿತ್ತು. ಅಂದರೆ ಕೆಎಲ್​ಆರ್​ ಮತ್ತೊಮ್ಮೆ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ. 2019ರ ಏಕದಿನ ವಿಶ್ವಕಪ್​ ಬಳಿಕ ರಾಹುಲ್ ಟೀಮ್ ಇಂಡಿಯಾ ಪರ ವಿಕೆಟ್ ಕೀಪಿಂಗ್ ಮಾಡಿದ್ದು ತೀರಾ ವಿರಳ. ಆದರೆ ಇದೀಗ ಬ್ಯಾಕ್​ ಅಪ್ ವಿಕೆಟ್ ಕೀಪರ್ ಬದಲು ಕೆಎಲ್ ರಾಹುಲ್ ಅವರಿಗೆ ಕೀಪಿಂಗ್ ಗ್ಲೌಸ್ ತೊಡಿಸಲಾಗಿದೆ.

ಇತ್ತ ಕೆಎಲ್ ರಾಹುಲ್​ಗೂ ಇಂತಹದೊಂದು ಜವಾಬ್ದಾರಿ ಅನಿವಾರ್ಯ. ಏಕೆಂದರೆ ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಹುಲ್​ಗೆ ಇದೀಗ ದೇಶೀಯ ಅಂಗಳದಿಂದ ರುತುರಾಜ್ ಗಾಯಕ್ವಾಡ್, ಪೃಥ್ವಿ ಶಾರಂತಹ ಆಟಗಾರರು ಪೈಪೋಟಿ ನೀಡುತ್ತಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಕೆಟ್ಟ ಫಾರ್ಮ್​ನಲ್ಲಿದ್ದಾರೆ. ಅಂದರೆ ಇಲ್ಲಿ ಮುಂದಿನ ದಿನಗಳಲ್ಲಿ ಪಂತ್ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ.

ಇದೀಗ ಗಾಯಾಳುವಾಗಿರುವ ಪಂತ್ ಅವರ ಕೀಪಿಂಗ್ ಜವಾಬ್ದಾರಿಯನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಮತ್ತೊಮ್ಮೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಒಂದು ವೇಳೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದಿದ್ದರೆ, ಆಡುವ ಬಳಗದಿಂದ ಆಟಗಾರನೊಬ್ಬ ಹೊರಗುಳಿಯಬೇಕಾಗಿತ್ತು. ಆದರೆ ಹೆಚ್ಚುವರಿ ಜವಾಬ್ದಾರಿವಹಿಸಿಕೊಳ್ಳುವ ಮೂಲಕ ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 70 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 73 ರನ್​ ಬಾರಿಸಿದ್ದಾರೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಹೊರತುಪಡಿಸಿ ಟೀಮ್ ಇಂಡಿಯಾದ ಯಾವೊಬ್ಬ ಬ್ಯಾಟ್ಸ್​ಮನ್​​ನ ಸ್ಕೋರ್ ಕೂಡ 30ರ ಗಡಿದಾಟಿಲ್ಲ. ಇತ್ತ ಸಿಕ್ಕ ಅವಕಾಶದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಕೆಎಲ್​​ಆರ್ ಮಿಂಚಿದ್ದಾರೆ ಎನ್ನಬಹುದು. ಅಷ್ಟೇ ಅಲ್ಲದೆ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ 11 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ  58.44 ರ ಸರಾಸರಿಯಲ್ಲಿ 526 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ.

ಹೀಗಾಗಿಯೇ ಪ್ರಸ್ತುತ 5ನೇ ಕ್ರಮಾಂಕದಲ್ಲಿನ ಪ್ರದರ್ಶನ ಕೆಎಲ್ ರಾಹುಲ್ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಮುಂಬರುವ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಪ್ರಸ್ತುತ ಸರಣಿಗಳು ಮಹತ್ವ ಪಡೆದುಕೊಂಡಿದೆ. ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್​ಗಾಗಿ ಈಗಲೇ ಬಲಿಷ್ಠ ತಂಡವನ್ನು ಕಟ್ಟಲು ಬಿಸಿಸಿಐ ಕೂಡ ಪ್ಲ್ಯಾನ್ ರೂಪಿಸುತ್ತಿದೆ. ಆದರೆ ಸ್ಟಾರ್ ಆಟಗಾರರ ದಂಡೇ ಹೊಂದಿರುವ ಟೀಮ್ ಇಂಡಿಯಾದಲ್ಲೇ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಭರ್ಜರಿ ಪೈಪೋಟಿ ಎದುರಾಗಲಿದೆ.

ಏಕೆಂದರೆ ಬಾಂಗ್ಲಾದೇಶ್ ವಿರುದ್ಧದ ಸರಣಿಯಿಂದ ಆಲ್​ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಹೊರಗುಳಿದಿದ್ದಾರೆ. ಇವರಿಬ್ಬರ ಆಗಮನದೊಂದಿಗೆ ವಾಷಿಂಗ್ಟನ್ ಸುಂದರ್ ಹಾಗೂ ಶಹಬಾಝ್ ಅಹ್ಮದ್ ಸ್ಥಾನ ಕಳೆದುಕೊಳ್ಳಬಹುದು. ಇದರ ಹೊರತಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಯ ಸಾಧ್ಯತೆ ತುಂಬಾ ಕಡಿಮೆ.

ಸದ್ಯ ಟೀಮ್ ಇಂಡಿಯಾ ಆರಂಭಿಕರಾಗಿ ರೋಹಿತ್ ಶರ್ಮಾ, ಶಿಖರ್ ಧವನ್ ಇದ್ದಾರೆ. ಇನ್ನು ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ನಂತರದ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಒಂದು ವೇಳೆ ಸೂರ್ಯಕುಮಾರ್ ಯಾದವ್ ಅಥವಾ ರಿಷಭ್ ಪಂತ್ ತಂಡಕ್ಕೆ ಬಂದರೆ ಕೆಎಲ್ ರಾಹುಲ್ ಸ್ಥಾನಕ್ಕೆ ಪೈಪೋಟಿ ಎದುರಾಗಬಹುದು. ಆದರೀಗ ಪಂತ್ ಸ್ಥಾನದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿವಹಿಸಿಕೊಂಡಿದ್ದಾರೆ. ಈ ಮೂಲಕ 2023ರ ವಿಶ್ವಕಪ್​ನಲ್ಲಿ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯಲು ಸಿದ್ಧ ಎಂಬ ಸ್ಪಷ್ಟ ಸಂದೇಶವನ್ನು ರಾಹುಲ್ ರವಾನಿಸಿದ್ದಾರೆ.

ಇತ್ತ ಬ್ಯಾಕ್ ಅಪ್ ವಿಕೆಟ್ ಕೀಪರ್ ಬದಲಿಗೆ ಕೆಎಲ್ ರಾಹುಲ್ ಅವರಿಗೆ ಗ್ಲೌಸ್ ತೊಡಿಸಿರುವುದು ರಿಷಭ್ ಪಂತ್ ಅವರ ಚಿಂತೆಯನ್ನು ಹೆಚ್ಚಿಸಿದೆ. ಮುಂಬರುವ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವ ಆಕಾಂಕ್ಷಿಯಾಗಿರುವ ಪಂತ್​ಗೆ ಈಗ ಕೆಎಲ್ ರಾಹುಲ್ ಅವರ ಹೆಚ್ಚುವರಿ ಜವಾಬ್ದಾರಿ ತೊಡಕಾಗಬಹುದು.

ಐದನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಕಾಣಿಸಿಕೊಂಡರೆ ಪಂತ್​ಗೆ ಚಾನ್ಸ್ ಸಿಗುವುದಿಲ್ಲ ಎಂದೇ ಹೇಳಬಹುದು. ಏಕೆಂದರೆ 6ನೇ ಮತ್ತು 7ನೇ ಕ್ರಮಾಂಕದಲ್ಲಿ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಮೂಲಕ ಮಿಂಚಿದರೆ ಪಂತ್ ಬದಲು ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆಯಲಿದ್ದಾರೆ. ಇದರಿಂದ ಏಕದಿನ ವಿಶ್ವಕಪ್​ಗೆ ಆಯ್ಕೆಯಾದರೂ ಪಂತ್ ಬೆಂಚ್ ಕಾಯಬೇಕಾಗಿ ಬರಬಹುದು. ಇತ್ತ ಹೆಚ್ಚುವರಿ ಜವಾಬ್ದಾರಿಯೊಂದಿಗೆ ಕೆಎಲ್ ರಾಹುಲ್ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು.

 

 



source https://tv9kannada.com/sports/cricket-news/kl-rahul-gets-keeping-duty-injured-rishabh-pants-world-cup-2023-aspirations-kannada-news-zp-au50-480702.html

No comments:

Post a Comment