ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಎರಡನೇ ಟಿ20 ಪಂದ್ಯ ಏರ್ಪಡಿಸಲಾಗಿದೆ. ಮೊದಲ ಟಿ20 ಕದನದಲ್ಲಿ 8 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ (Team India) ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಹರಿಣಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈ ಮೈದಾನದಲ್ಲಿ ಭಾರತ ಎರಡು ಪಂದ್ಯಗಳಲ್ಲಷ್ಟೆ ಕಣಕ್ಕಿಳಿದಿತ್ತು. ಅವುಗಳಲ್ಲಿ ಒಂದು ಮಳೆಯಿಂದಾಗಿ ರದ್ದಾಗಿದ್ದರೆ, ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್ಗಳಿಂದ ಭಾರತವನ್ನು ಸೋಲಿಸಿದೆ. ಹೀಗಾಗಿ ಈ ಮೈದಾನ ಉಭಯ ತಂಡಗಳಿಗೆ ಹೊಸದು ಎನ್ನಬಹುದು. ಹಾಗಾದರೆ ಗುವಾಹಟಿಯ ಬರ್ಸಾಪರಾ (Barsapara) ಕ್ರಿಕೆಟ್ ಸ್ಟೇಡಿಯಂನ ಪಿಚ್ ಹೇಗಿದೆ?, ಇಲ್ಲಿ ಯಾರು ಯಶಸ್ಸು ಸಾಧಿಸುತ್ತಾರೆ ಎಂಬುದನ್ನು ನೋಡೋಣ.
ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ಸಾಮಾನ್ಯವಾಗಿ ನಿಧಾನವಾಗಿರುತ್ತದೆ. ಚೆಂಡು ವೇಗವಾಗಿ ಬ್ಯಾಟ್ಗೆ ಬರುವುದಿಲ್ಲ. ಹೀಗಾಗಿ ಇಲ್ಲಿ ವೇಗಿಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ, ಅಲ್ಲದೆ ಸ್ಪಿನ್ನರ್ಗಳಿಗೂ ಸಹಕಾರಿ ಆಗಿದ್ದು ಪಂದ್ಯ ಸಾಗಿದಂತೆ ಪಿಚ್ನಲ್ಲಿ ತಿರುವು ಮತ್ತು ಹಿಡಿತವನ್ನು ಸಾಧಿಸಬಹುದು. ಈ ಪಿಚ್ನಲ್ಲಿ ದೊಡ್ಡ ಸ್ಕೋರ್ ಮಾಡಲು ಸುಲಭವಿಲ್ಲ. ಇಲ್ಲಿ ಭಾರತ ಏಕೈಕ ಇನ್ನಿಂಗ್ಸ್ ಆಡಿದ್ದು, 122 ರನ್ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಇಂದು ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಲ್ಳುವ ಸಾಧ್ಯತೆ ಇದೆ.
ತುಂತುರು ಮಳೆ ಸಾಧ್ಯತೆ:
ಗುವಾಹಟಿಯಲ್ಲಿ ಭಾನುವಾರ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ, ಸಂಜೆ ವೇಳೆಗೆ ಬಿರುಗಾಳಿ ಸಹಿತ ಕೆಲವೆಡೆ ಮಳೆಯಾಗುವ ಆತಂಕವೂ ಇದೆ. ಅದೇ ಸಮಯದಲ್ಲಿ, ಹವಾಮಾನ ಮಾಹಿತಿ ವೆಬ್ಸೈಟ್ ಅಕ್ಯುವೆದರ್ ಮುನ್ಸೂಚನೆಯಂತೆ ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗಬಹುದು, ಉಳಿದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ವರದಿಯಾಗಿದೆ. ಇತ್ತ ಮಳೆಯಿಂದ ಸಮಯ ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ US ನಿಂದ ಎರಡು ಹಗುರವಾದ ಪಿಚ್ ಕವರ್ಗಳನ್ನು ಖರೀದಿಸಿದೆ. ಯೂನಿಯನ್ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಯಾರಿ ಬಗ್ಗೆ ಮಾತನಾಡಿದ್ದು, “ಈ ಎರಡು ಆಮದು ಮಾಡಿದ ಕವರ್ಗಳು ಪಿಚ್ಗೆ ನೀರು ಅಥವಾ ತೇವಾಂಶವನ್ನು ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಟೀಮ್ ಇಂಡಿಯಾ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಒಬ್ಬ ಬ್ಯಾಟರ್ ಜವಾಬ್ದಾರಿ ವಹಿಸಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ಆದರೆ, ನಾಯಕ ರೋಹಿತ್ ಶರ್ಮಾ ಬ್ಯಾಟ್ನಿಂದ ಇನ್ನಷ್ಟು ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ಉಪ ನಾಯಕ ಕೆಎಲ್ ರಾಹುಲ್ ಕೂಡ ನಿಧಾನಗತಿಯ ಆಟಕ್ಕೆ ಬ್ರೇಕ್ ಹಾಕಿ ವೇಗದ ಆಟದ ಮೊರೆ ಹೋಗಬೇಕಿದೆ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಸಿಕ್ಕ ಅವಕಾಶವನ್ನು ಬಳಸಬೇಕಿದೆ.
ಭಾರತದ ಬೌಲಿಂಗ್ ಆಫ್ರಿಕಾ ಸರಣಿಯಲ್ಲಿ ಮಾರಕವಾಗಿದೆ. ತಿರುವನಂತಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆರ್ಷದೀಪ್ ಸಿಂಗ್ ಒಂದೇ ಓವರ್ನಲ್ಲಿ ಮೂರು ವಿಕೆಟ್ ಗಳಿಸಿ ದಕ್ಷಿಣ ಆಫ್ರಿಕಾ ಬಳಗಕ್ಕೆ ಬಲವಾದ ಪೆಟ್ಟುಕೊಟ್ಟಿದ್ದರು. ಇವರ ಜೊತೆಗೆ ಹರ್ಷಲ್ ಪಟೇಲ್, ದೀಪಕ್ ಚಹರ್ ಅವರ ಮೇಲೂ ಕಣ್ಣಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಉಮೇಶ್ ಯಾದವ್ ಅವರಿಗೆ ಅವಕಾಶ ಸಿಗುವುದು ಅನುಮಾನ. ಸಿರಾಜ್ ಉತ್ತಮ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ಗೂ ಆಯ್ಕೆ ಆಗಬಹುದು.
ಭಾರತ-ಆಫ್ರಿಕಾ ಕದನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ 6.30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಚಾನಲ್ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು. ಇದಲ್ಲದೆ, ಪಂದ್ಯದ ಲೈವ್ ನವೀಕರಣಗಳನ್ನು tv9kannada.com ನಲ್ಲಿಯೂ ಓದಬಹುದು.
source https://tv9kannada.com/sports/cricket-news/ind-vs-sa-2nd-t20i-the-pitch-at-the-barsapara-cricket-stadium-is-generally-on-the-slower-side-vb-au48-449500.html
No comments:
Post a Comment