Monday 23 August 2021

ಚಿತ್ರದುರ್ಗ: ಪಿಡಿಒ ವರ್ಗಾವಣೆ ಕುರಿತು, ಪ್ರತಿಭಟನೆ ನಿರತ ಗ್ರಾ. ಪಂ. ಅಧ್ಯಕ್ಷೆ, ಸದಸ್ಯರು.

 

ಚಿತ್ರದುರ್ಗ, ಆಗಸ್ಟ್ 23: ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬೇಜವಾಬ್ದಾರಿ ವರ್ತನೆ ಖಂಡಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂರಗೊಂಡನಹಳ್ಳಿಯಲ್ಲಿ ನಡೆದಿದೆ.

ಸೂರಗೊಂಡನಹಳ್ಳಿ ಪಂಚಾಯತಿ ಪಿಡಿಒ ಸೌಮ್ಯರನ್ನು ವರ್ಗಾವಣೆ ಮಾಡಿ, ಬೇರೆ ಪಿಡಿಒ ನೇಮಕ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಜೊತೆಗೆ ಪಿಡಿಒ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, "ಪಿಡಿಒ ಅಧಿಕಾರಿ ಸೌಮ್ಯ ಸರಿಯಾದ ಸಮಯಕ್ಕೆ ಪಂಚಾಯತಿಗೆ ಬರುತ್ತಿಲ್ಲ, ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡುತ್ತಿಲ್ಲ, ಯಾರ ಸಮಸ್ಯೆಗೂ ಸ್ಪಂದಿಸುತ್ತಿಲ್ಲ," ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಗಳ ಸುರಿಮಳೆಗೈದರು.

"ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅಧ್ಯಕ್ಷರು ಹಾಗೂ ಸದಸ್ಯರು ಅಧಿಕಾರಿಗೆ ಫೋನ್ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಕರೆ ಮಾಡಿ ಏನಾದರೂ ಕೇಳಿದರೆ ನಾನು ಅಲ್ಲಿದ್ದೇನೆ, ಇಲ್ಲಿದ್ದೇನೆ, ನಾನು ಯಾಕೆ ಬರಲಿ, ಆದರಿಂದ ನನಗೆ ಏನು ಲಾಭ ಇಲ್ಲ, ಅವರಿಗೆ ಲಾಭ ಆಗುತ್ತದೆ ನನಗೆ ಯಾಕೆ ಎಂದು ಹಾರಿಕೆ ಉತ್ತರ ನೀಡುತ್ತಾರೆ," ಎಂದು ಆರೋಪಿಸಿದರು.


ಪಿಡಿಒ ಅಧಿಕಾರಿಯನ್ನು ವರ್ಗಾವಣೆ ಮಾಡಿ

"ನಾವು ಪಿಡಿಒ ಅಧಿಕಾರಿಯನ್ನು ವರ್ಗಾವಣೆ ಮಾಡಿ, ಬೇರೆ ಅಧಿಕಾರಿ ನೇಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೂ ತರಲಾಗಿದೆ. ಅವರು ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ ಎನ್ನುತ್ತಾರೆ. ಹೀಗಿದ್ದಾಗ ನಾವು ಯಾರ ಹತ್ತಿರ ಹೋಗಬೇಕು," ಎಂದು ಪ್ರಶ್ನೆ ಮಾಡಿದರು.

ಪ್ರತಿಭಟನೆ ವಿಷಯ ತಿಳಿದ ತಕ್ಷಣ ಹಿರಿಯೂರು ತಾಲ್ಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಸದಸ್ಯರು ಗ್ರಾಮ ಪಂಚಾಯಿತಿಗೆ ಬೇರೆ ಪಿಡಿಒ ನೇಮಕ ಮಾಡುವಂತೆ ತಾಲೂಕು ಪಂಚಾಯಿತಿ ಇಒಗೆ ಮನವಿ ಸಲ್ಲಿಸಿದರು.

ನಮ್ಮ ಕೈಯಲ್ಲಿ ಅಧಿಕಾರ ಇಲ್ಲ

ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಹಿರಿಯೂರು ತಾಲ್ಲೂಕು ಪಂಚಾಯತ್ ಇಒ, "ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಬದಲಾವಣೆ ಮಾಡುವುದು ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಅಧಿಕಾರಿಗಳು, ಅಧ್ಯಕ್ಷೆ ಮತ್ತು ಸದಸ್ಯರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು," ಎಂದು ತಿಳಿಸಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಬದಲಾವಣೆ ಮಾಡದಿದ್ದರೆ, "ನಾವು ವಿಧಾನಸೌಧದ ಮುಂದೆ ಧರಣಿ ಮಾಡುತ್ತವೆ. ಅಧಿಕಾರಿ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದರು. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಕೈಬಿಡಲು ಸಾಧ್ಯವಿಲ್ಲ. ನಾವು ಜೈಲಿಗೆ ಹೋಗಲು ಸಿದ್ಧ," ಎಂದರು.

ಅಧಿಕಾರಿಯ ಅವಾಚ್ಯ ಪದ ಬಳಕೆಗೆ ಕೆರಳಿದ ಸದಸ್ಯರು

ಈ ವೇಳೆ ಸದಸ್ಯರೊಬ್ಬರು ಮಾತನಾಡಿ, ಕೆಲಸ ಮಾಡುವ ಇಚ್ಛೆ ಇಲ್ಲವೆಂದರೆ ಮನೆಯಲ್ಲಿ ಇರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಸದಸ್ಯರೊಬ್ಬರನ್ನು ಲೋ... ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಕುಟುಂಬದ ವಿಚಾರಕ್ಕೆ ಬರಬೇಡಿ ಎಂದರು.

ಅಧಿಕಾರಿಯ ಅವಾಚ್ಯ ಪದ ಬಳಕೆಗೆ ಕೆರಳಿದ ಇತರೆ ಸದಸ್ಯರು ಅಧಿಕಾರಿ ವಿರುದ್ಧ ಮುಗಿಬಿದ್ದರು. ನಂತರ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒ ಮಧ್ಯೆ ವಾಗ್ವಾದ ನಡೆಯಿತು. ನಂತರ ಮಾತನಾಡಿದ ಗ್ರಾ.ಪಂ. ಸದಸ್ಯ ಭೂತೇಶ್, "ಒಂದು ವೇಳೆ ಪಂಚಾಯತಿ ಪಿಡಿಒ ಬದಲಾವಣೆ ಆಗದಿದ್ದರೆ ಪ್ರತಿಭಟನೆ ಮುಂದುವರಿಸಲಾಗುವುದು ಹಾಗೂ ನಾವು ಜೈಲಿಗೆ ಹೋಗಲು ಸಿದ್ಧ, ಪಿಡಿಒ ಬದಲಾವಣೆ ಆಗಲೇಬೇಕು," ಎಂದು ಎಚ್ಚರಿಕೆ ನೀಡಿದರು.

ಪಂಚಾಯಿತಿಯಲ್ಲೇ ಶೌಚಾಲಯ ಇಲ್ಲ

ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲೇ ಶೌಚಾಲಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯತಿ ಮುಂಭಾಗದಲ್ಲಿ ನೀರು ನಿಂತಿವೆ. ಸರಿಯಾದ ವ್ಯವಸ್ಥೆ ಇಲ್ಲ, ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲಿ ಹಸಿರು ಹುಲ್ಲು ಬೆಳೆದು ನಿಂತಿದೆ. ಕಟ್ಟಡ ಶಿಥಿಲಗೊಂಡಿದೆ. ಗಾಳಿ, ಬೆಳಕಿನ ವ್ಯವಸ್ಥೆ ಕುಂಠಿತವಾಗಿದೆ. ಪಂಚಾಯತಿ ಆವರಣದಲ್ಲೇ ಶೌಚಾಲಯ ಇಲ್ಲವೆಂದ ಮೇಲೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಒಟ್ಟಾರೆಯಾಗಿ ಪಂಚಾಯತಿ ಪಿಡಿಒ ಅಧಿಕಾರಿ ಸೌಮ್ಯರನ್ನು ವರ್ಗಾವಣೆ ಮಾಡಿ ಬೇರೆ ಅಧಿಕಾರಿಯನ್ನು ನೇಮಿಸುವವರೆಗೂ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ ಹಾಗೂ ಸದಸ್ಯರುಗಳು ಸೇರಿದಂತೆ ಗ್ರಾಮಸ್ಥರು ಇದ್ದರು.

 

No comments:

Post a Comment