Saturday, 28 August 2021

ಗ್ಯಾಂಗ್ ರೇಪ್ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರ ಕಾರ್ಯಕ್ಕೆ ಗೃಹ ಸಚಿವರ ಶ್ಲಾಘನೆ.

 

ಬೆಂಗಳೂರು: ರಾಜ್ಯಾದ್ಯಂತ ಆತಂಕ ಸೃಷ್ಟಿಸಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ನೀಚ ಕೃತ್ಯವೆಸಗುವವರಿಗೆ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಆತಂಕವನ್ನು ಸೃಷ್ಟಿಸಿತ್ತು. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು. ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಮೂಲಕ ಪೊಲೀಸರು ನೀಚ ಕೃತ್ಯವೆಸಗಿದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಧನ್ಯವಾದ ಎಂದರು.

ವಿಕೃತ ಮನಸ್ಸಿನ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆ ಸಂದೇಶವನ್ನು ಪೊಲೀಸರು ಈ ಮೂಲಕ ರವಾನಿಸಿದ್ದಾರೆ. ಆರೋಪಿಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಲಿದೆ. ಇಂತಹ ಕೃತ್ಯಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

No comments:

Post a Comment