Sunday 22 August 2021

'ವಾಸ್ತವದ ಬಗ್ಗೆ ಅರಿವಿರುವವರು ಮಾನ, ಅಪಮಾನ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಾರೆ: ಶಿವಮೂರ್ತಿ ಮುರುಘಾ ಶರಣರು.

 

ಚಿತ್ರದುರ್ಗ: 'ವಾಸ್ತವದ ಬಗ್ಗೆ ಅರಿವಿರುವವರು ಮಾನ, ಅಪಮಾನ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಾರೆ. ವಾಸ್ತವ ತಪಸ್ಸಿಗೆ ಸಮಾನ' ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸದಾಶಿವನಗರ ಬಡಾವಣೆಯ ಶಂಕರಾಚಾರ್ ಮನೆಯಲ್ಲಿ ಮುರುಘಾ ಮಠದಿಂದ ನಡೆದ 'ನಿತ್ಯ ಕಲ್ಯಾಣ' ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

'ನೈಜತೆ, ಸಹಜತೆ, ಸಮತೋಲನ ಸ್ಥಿತಿಯಿಂದ ಕೂಡಿರುವುದೇ ವಾಸ್ತವ. ಈ ಕುರಿತು ಜನರು ಅರಿವು ಮೂಡಿಸಿಕೊಳ್ಳಬೇಕಿದೆ. ವಾಸ್ತವದಲ್ಲಿ ಸತ್ಯ ಅಡಗಿದ್ದು, ಇದರಿಂದ ಆನಂದ ಸಿಗಲಿದೆ. ಮೌಖಿಕವಾದ ಸುಖಕ್ಕೂ ಕಾರಣವಾಗಿದೆ. ಆದ್ದರಿಂದ ಅವಾಸ್ತವದಿಂದ ವಾಸ್ತವದ ಕಡೆಗೆ ಪಯಣ ಮಾಡುತ್ತ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಿಳುವಳ್ಳಿ ಕಲ್ಮಠದ ಬಸವ ನಿರಂಜನ ಸ್ವಾಮೀಜಿ, 'ಇರುವುದರಲ್ಲೇ ಸಂತೋಷ ಕಾಣುವ ಪ್ರವೃತ್ತಿ ನಮ್ಮದಾಗಬೇಕು. ನಾವು ಆಕಾಶಕ್ಕೆ ಏಣಿ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಅತಿಯಾದ ಆಸೆ ಒಳ್ಳೆಯದಲ್ಲ. ತೃಪ್ತ ಭಾವನೆ ಇದ್ದಲ್ಲಿ ದುಃಖ ಬರುವುದಿಲ್ಲ. ಸರಳ ಜೀವನ ರೂಢಿಸಿಕೊಳ್ಳಬೇಕು. ಮೌಢ್ಯದಿಂದ ಹೊರಬರಬೇಕು. ಅದೇ ನಿಜವಾದ ವಾಸ್ತವ' ಎಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, 'ವಚನ ಸಾಹಿತ್ಯ ಮಕ್ಕಳಿಗೆ ಪರಿಚಯಿಸಿ. ಆದರ್ಶ ವ್ಯಕ್ತಿಗಳ ಕುರಿತು ಮಾಹಿತಿ ನೀಡಿ. ಉತ್ತಮ ಸಂಸ್ಕಾರ ಬೆಳೆಸಲು ಮುಂದಾಗಿ. ನ್ಯೂನತೆ ಕಂಡೊಡನೆ ಸರಿಪಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಿ' ಎಂದು ಸಲಹೆ ನೀಡಿದರು.

ಉಪ್ಪಾರ ಸಮುದಾಯ ನಿಗಮದ ಅಧ್ಯಕ್ಷ ಗಿರೀಶ್, ನಗರಸಭೆ ಉಪಾಧ್ಯಕ್ಷೆ ಶ್ವೇತಾ ವೀರೇಶ್ ಇದ್ದರು.

No comments:

Post a Comment