ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನೀಚ ಕೃತ್ಯ
ಎಸಗುವವರನ್ನು ಸುಮ್ಮನೆ ಬಿಡುವುದಿಲ್ಲ, ತಕ್ಕ ಶಾಸ್ತಿಯನ್ನು
ಪೊಲೀಸರು ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ
ಜನತೆಗೆ ಇದರಿಂದ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಹೆಚ್ಚುತ್ತದೆ ಎಂದರು.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ದೇಶ-ವಿದೇಶಗಳಿಂದ
ಪ್ರವಾಸಿಗರು ಬರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಾಗ ಸಹಜವಾಗಿ
ಎಲ್ಲರಿಗೂ ಬೇಸರ, ಆತಂಕ ಉಂಟಾಗಿತ್ತು. ಸರ್ಕಾರದಲ್ಲಿ ನಾನು
ಮತ್ತು ಮುಖ್ಯಮಂತ್ರಿಗಳು ಪೊಲೀಸ್ ವರಿಷ್ಠರನ್ನು ಕರೆದು ಈ ಪ್ರಕರಣಗಳನ್ನು ಭೇದಿಸಿ, ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ಸೂಚಿಸಿದ್ದೆವು, ಇದೀಗ
ಪೊಲೀಸರು ಆರೋಪಿಗಳ ಬಂಧಿಸುವ ಮೂಲಕ ತೆರೆಬಿದ್ದಿದೆ ಎಂದರು.
ನಗದು ಬಹುಮಾನ: ಪ್ರಕರಣ ಬೆಳಕಿಗೆ ಬಂದು 85 ಗಂಟೆಗಳಲ್ಲಿ
ಹಗಲು-ರಾತ್ರಿ ಯಶಸ್ವಿ ಕಾರ್ಯಾಚರಣೆ ನಡೆಸಿ ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನು
ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
No comments:
Post a Comment