ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಚ್. ಮೂಕಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದ ಮಹದೇವಪ್ಪ 47 ವರ್ಷ, ಅವರ ಪತ್ನಿ ಮಂಗಳಮ್ಮ 40 ವರ್ಷ , ಅವರ ಮಕ್ಕಳಾದ ಜ್ಯೋತಿ 14 ವರ್ಷ, ಶ್ರುತಿ (12 ವರ್ಷ) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾದೇವಪ್ಪ ಒಂದೂವರೆ ಎಕರೆ ಮಳೆ ಆಶ್ರಿತ ಜಮೀನು ಹೊಂದಿದ್ದು, ಕೂಲಿ ಕಾರ್ಮಿಕರಾಗಿದ್ದರು. ಆತ್ಮಹತ್ಯೆ ಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಡು ಬಡತನ, ಸಾಲಬಾಧೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮಹಾದೇವಪ್ಪ ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಗ್ರಾಮದ ಕುಮಾರ್ ಎಂಬುವರ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ. ಆಗ ಆತ ಯಾವುದೇ ಸಮಸ್ಯೆ ತಿಳಿಸಲಿಲ್ಲ. ಆತ ಇಪ್ಪತ್ತು ದಿನದ ಹಿಂದೆ ಕೋವಿಡ್ ಬಂದು ಗುಣಮುಖನಾಗಿದ್ದ. ನಾನೇ ಚಿಕಿತ್ಸೆ ಗೆ ಸಹಾಯ ಮಾಡಿದ್ದೆ ಎಂದು ಕುಮಾರ್ ಉದಯವಾಣಿಗೆ ತಿಳಿಸಿದರು.
ಇಂದು ಬೆಳಿಗ್ಗೆ ಗ್ರಾಮದವರೊಬ್ಬರು ಮಹಾದೇವಪ್ಪ ಅವರನ್ನು, ಕಬ್ಬಿನ ತೊಂಡೆ ತರುವ ಸಲುವಾಗಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಮನೆಯೊಳಗಿನಿಂದ ಯಾವುದೇ ಶಬ್ದ ಬರಲಿಲ್ಲ. ಆಗ ಮನೆಯ ಮೇಲೆ ಹತ್ತಿ ಹೆಂಚು ತೆರೆದು ನೋಡಿದಾಗ, ನಾಲ್ವರೂ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಹಾದೇವಪ್ಪ ಅವರಿಗೆ ಮೂವರು ಪುತ್ರಿಯರಿದ್ದು, ಹಿರಿಯ ಪುತ್ರಿಗೆ ವಿವಾಹವಾಗಿದೆ. ಪೂರ್ವ ಠಾಣೆ ಪೊಲೀಸರು ಈಗ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

No comments:
Post a Comment