Saturday, 5 June 2021

ಕಾಲಕ್ಕೆ ತಿಳಿಯದಂತೆ, ಕಾಲದಲ್ಲಿಯೇ ಕಳೆದುಹೋದ ಸರಳ ಬದುಕು!!


ವೀಕೆಂಡ್ ಸ್ಪೆಷಲ್: ಪ್ರತಿ ಭಾನುವಾರ ಕಥೆ,ಕಾದಂಬರಿ,ಕವನ,ಲೇಖನ ಮತ್ತುವಿಮರ್ಶೆಸಮಗ್ರ ಸುದ್ದಿಯಲ್ಲಿ. ಈ ವಾರದ ಸಂಡೇ ಸ್ಪೆಷಲ್.

ದಿನವೊಂದು ಕಳೆದು ಹೋಗುತ್ತದೆ. ಮತ್ತೊಂದು ದಿನ ಬರುತ್ತದೆ. ಕಳೆದುಹೋದ ದಿನದ ಕುರಿತು ಆಲೋಚಿಸುತ್ತ ಕುಳಿತರೆ ಈ ದಿನದ ಖುಷಿಯೂ ಕಳೆದು ಹೋಗುತ್ತದೆ. ಹೀಗೆ ಬಂದು ಹೋಗುವ ದಿನಗಳಲ್ಲಿ ಒಂದು ದಿನ ಹುಚ್ಚಯ್ಯ ಹೊರಟುಹೋದನು. ಸಾಕಷ್ಟು ಜನ ಹೊರಟು ಹೋಗುವ ಈ ಲೋಕದಲ್ಲಿ ಹುಚ್ಚಯ್ಯ ಹೊರಟು ಹೋಗಿರುವುದು ವಿಶೇಷತೆ ಏನಲ್ಲ. ಮೇಲಾಗಿ ಆತನೇನು ಕವಿ, ನಟ, ಗಾಯಕನೋ ಇಂಥದ್ದೇನು ಅಲ್ಲ. ಜೀವನದಲ್ಲಿ ಏನಾದರೂ ಸಾಧಿಸಿದ್ದಾನೆ ಅಂದುಕೊಳ್ಳೋಣವೇ? ಅದು ಇಲ್ಲ. ಆದರೆ ವೇಗವಾಗಿ ಹರಿಯುವ ಪ್ರವಾಹದಲ್ಲಿ ಎತ್ತ ಈಜಬೇಕು ಎಂದು ತಿಳಿಯದ ಮೀನಿನ ಮರಿಯಂತೆ, ಬಾವಿಯಲ್ಲಿರುವ ನೀರು, ಎಂದಿಗೂ ಅಲೆಯಾಗಿ ಕದಲಿ ಹೊರಹೋಗದಂತೆ, ಆತ ಕಾಲಕ್ಕೆ ತಿಳಿಯದಂತೆ ಕಾಲದೊಂದಿಗೆ ಬೆರೆತು ಜೀವನವನ್ನೆಲ್ಲ ಕಳೆದನು.

ಶಬ್ದಗಳ ಸಂಗತಿ ಗಿರಲಿ, ನಿಶ್ಯಬ್ಧದಲ್ಲಿಯೂ, ಪರಮನಿಶ್ಯಬ್ಧ ನಾಗಿ ಕಳೆದುಹೋದ ಆತನ ಬದುಕನ್ನು ತಿಳಿಯಬೇಕೆಂದರೆ ಆತನ ದಿನಚರಿಯ ಒಂದು ದಿನ ಗಮನಿಸಿದರೆ ಸಾಕು. ಆತ ಬೆಳಿಗ್ಗೆ ಎದ್ದು, ಮನೆ ಮುಂಬಾಗಿಲಿಗೆ ಬರುವುದರೊಳಗಾಗಿ ಸೀತಮ್ಮ ದೊಡ್ಡ ಕಂಚಿನ ಚೊಂಬಿನಲ್ಲಿ ನೀರು, ಕಾಲಿಗೆ ಚಪ್ಪಲಿಯನ್ನು ಜೋಡಿಸಿ ಇಟ್ಟಿರುತ್ತಾಳೆ. ಮುಖ ತೊಳೆದು ಕಾಲಿಗೆ ಚಪ್ಪಲಿ ಹಾಕಿಕೊಂಡಾತ ಅಲ್ಲಿಂದ ನೇರವಾಗಿ ಕೃಷ್ಣಾನದಿಗೆ ಬರುತ್ತಾನೆ.

ಚಳಿಯಿರಲಿ, ಮಳೆಯಿರಲಿ, ಅಂಗವಸ್ತ್ರವನ್ನು ಸೊಂಟಕ್ಕೆ ಸುತ್ತಿಕೊಂಡು ಕೃಷ್ಣಾ ನದಿಗೆ ಇಳಿದು, ಎದೆಮಟ್ಟದ ನೀರಿನಲ್ಲಿ ನಿಂತು ಬೆಳಗಿನವಂದನೆ ಮುಗಿಸುತ್ತಾನೆ. ಚೆಂಬಿನಲ್ಲಿ ಕೃಷ್ಣೋದಕವನ್ನು ತೆಗೆದುಕೊಂಡು ಗುಡಿಯ ಕಡೆಗೆ ಬರುತ್ತಾನೆ. ಬರುವ ದಾರಿಯಲ್ಲಿ ಬೀದಿಬದಿಯ ಮನೆಯಂಗಳದಲ್ಲಿ  ಮಾತನಾಡುತ್ತಾ ಕುಳಿತ  ಹುಡುಗರ ಮೇಲೆ ತಣ್ಣಗೆ ಕೊರೆಯುವ ಕೃಷ್ಣಾ ನೀರನ್ನು ಚಿಮುಕಿಸುತ್ತಾನೆ. ತಣ್ಣನೆ ನೀರು ಮೈಮೇಲೆ ಬಿದ್ದಾಕ್ಷಣ ಹುಡುಗರೆಲ್ಲ ಚಳಿ ಚಳಿ ಎಂದು ನಡುಗಿದರೆ, ನಗುತ್ತಾ ಮುಂದಕ್ಕೆ ಸಾಗುತ್ತಿದ್ದ.

ಎರಡನೇ ಬೀದಿಯಲ್ಲಿನ ಗಿಲೆ ಗಿಡದ ಹತ್ತಿರ ಬಂದು ಹೂಗಳನ್ನು ಕೊಯ್ಯುತ್ತಾ, ನಿನ್ನೆ ಇಲ್ಲೆರಡು ಮೊಗ್ಗುಗಳಿದ್ದವೇ? ಅಂದುಕೊಳ್ಳುತ್ತಿದ್ದ. ಆತನಿಗೆ ಕೊಂಬೆಗಳು, ರೆಂಬೆಗಳು, ಹೂಗಳು, ಮೊಗ್ಗುಗಳು ಎಲ್ಲಾ ಲೆಕ್ಕವೇ. ನಾಲ್ಕು ಸುರಹೊನ್ನೆ ಹೂಗಳನ್ನು  ಚೊಂಬಿನಲ್ಲಿ  ಹಾಕಿಕೊಂಡು, ಬಿಲ್ವಪತ್ರೆ ಗಿಡದತ್ತ ಬರುತ್ತಿದ್ದ ಆತ ಎಳೆಯ ಬಿಲ್ವಪತ್ರೆ ದಳಗಳನ್ನು ಒಂದು ಹಿಡಿಯಷ್ಟು ಕೊಯ್ದುಕೊಂಡು ಗುಡಿಯ ಮೆಟ್ಟಿಲುಗಳನ್ನು ಹತ್ತಿ, ಬರುವ ಸಮಯಕ್ಕಾಗಲೇ ಅರ್ಚಕರು ಅಮರೇಶ್ವರನಿಗೆ ಅಭಿಷೇಕ ಮಾಡಿ ಸಿದ್ಧವಾಗುತ್ತಿದ್ದರು.

ಸ್ವತ: ತಂದ ಕೃಷ್ಣೋದಕದಿಂದ ಸ್ವಾಮಿಗೆ ಅಭಿಷೇಕ ಮಾಡಿ, ಹೂವು-ಪತ್ರೆಗಳನ್ನು ಇಟ್ಟು, ಪೂಜೆ ಮಾಡುತ್ತಿದ್ದ. ಅದೇನು ಮೌನಪೂಜೆಯೊ? ಹುಚ್ಚಯ್ಯನ ತುಟಿ ಎರಡಾಗುತ್ತಿರಲಿಲ್ಲ. ಮಂತ್ರಗಳು ಬಾಯಿಂದ ಹೊರಬರುತ್ತಿರಲಿಲ್ಲ. ಆ ಮೌನಸ್ವಾಮಿಗೇ !! ತಿಳಿಯಬೇಕು. ಗರ್ಭಗುಡಿಯಿಂದ ಹೊರಬಂದು, ಗಂಟೆ ಬಾರಿಸಿ, ದೇವರಿಗೆ ಕೈಮುಗಿದು, ದೇವರ ಮುಂದಿದ್ದ ನಂದಿಗೆ ಪ್ರದಕ್ಷಿಣೆ ಹಾಕಿ, ಅಲ್ಲಿಂದ ಬಾಲಚಾಮುಂಡೇಶ್ವರಿ ಗುಡಿಗೆ ಬಂದು, ದೇವಿಗೆ ನಮಸ್ಕರಿಸಿ ತಾಯಿಯ ಪಾದಗಳಲ್ಲಿ ಅಂಟಿಕೊಂಡ ಕುಂಕುಮವನ್ನು ಹಣೆಗೆ ಹಚ್ಚಿಕೊಂಡು ಮುಂದಿನ ಮಂಟಪಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ. ಅಷ್ಟೊತ್ತಿಗೆ ಅಲ್ಲಿ ಸೇರುತ್ತಿದ್ದ ಅಭಿಷೇಕ ಬ್ರಾಹ್ಮಣರು ಅನೇಕ ವಿಧವಾಗಿ ಚರ್ಚೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದರು. ಬೆಲೆ ಏರಿಕೆಯ ಕುರಿತಾಗಿಯೊ, ಮಾವಿನ-ನಿಂಬೆಯ ಉಪ್ಪಿನಕಾಯಿಗಳ ಕುರಿತಾಗಿಯೊ, ಪಾಕಿಸ್ತಾನದ ಕುರಿತಾಗಿಯೊ, ಯಾರೋ ಓಡಿ ಹೋಗಿರುವ ಕುರಿತಾಗಿಯೊ. ನಿಲ್ಲದೆ ನಡೆಯುತ್ತಿದ್ದ ಈ ಸಂಭಾಷಣೆ ಎಲ್ಲವನ್ನೂ ಕೇಳುತ್ತಾ ಕುಳಿತಿರುತ್ತಿದ್ದನು.

ಮಧ್ಯದಲ್ಲಿ ಯಾರೋ ಲಿಂಗಯ್ಯನು ಹುಚ್ಚಯ್ಯನವರೇ ಹೌದು ಅಂತೀರೋ? ಇಲ್ಲ ಅಂತೀರೋ? ಅಂದ್ರೆ ಹುಚ್ಚಯ್ಯ ಕಿರುನಗೆ ಸೂಸುತ್ತಿದ್ದ. ಅಷ್ಟು ಬಿಟ್ಟರೆ ತುಟಿಬಿಚ್ಚಿದವನಲ್ಲ. ಇವರ ಮಾತುಕತೆಯ ಮಧ್ಯೆ ಗುಡಿಗೋಪುರದ ಮೇಲೆ ಹಾರುತ್ತಿದ್ದ ಪಾರಿವಾಳಗಳನ್ನು ಲೆಕ್ಕ ಮಾಡುತ್ತಿದ್ದನು. ಅಷ್ಟು ಮೌನವಾಗಿ ಲೋಕವನ್ನು ಅವಲೋಕಿಸುತ್ತಿದ್ದ ಹುಚ್ಚಯ್ಯನು ಮನೆ ಬಾಗಿಲಿಗೆ ಬರುತ್ತಲೇ ಏನ್ 'ಸಾರೇ' ಇವತ್ತು ಎಂದು ದೊಡ್ಡದಾಗಿ ಕೂಗುತಿದ್ದನು.

ಮನೆಯ ಹಿತ್ತಲಿನಿಂದ ಸೀತಮ್ಮನವರು ಸೌತೆಕಾಯಿ ಸಾರು ಎಂದೋ? ಹುಣಸೆ ಚಿಗುರು ಹುಳಿ ಎಂದೋ? ಅಂದರೆ, ಖಾರ ಜಾಗ್ರತೆ ಅನ್ನುತ್ತಿದ್ದ. ಹುಚ್ಚಯ್ಯನಿಗೆ ಪ್ರತಿದಿನವೂ ಖಾರ ರುಬ್ಬಿ ಮಾಡಿದ ಸಾರೆ ಆಗಬೇಕು. ಅದರಲ್ಲಿ ಖಾರ ಹೆಚ್ಚಾಗಿ ಇರಲೇಬೇಕು. ಇಲ್ಲವೆಂದರೆ ತುಂಬಾ ಬೇಸರಿಸಿಕೊಳ್ಳುತ್ತಿದ್ದ. ಭೋಜನಾನಂತರ ಒಂದೆರಡು ಅಡಿಕೆ ಚೂರುಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ನೂಲಿನಿಂದ ನೇಯ್ದ ಮಂಚದಲ್ಲಿ ವಿಶ್ರಮಿಸುತ್ತಿದ್ದರೆ, ಸೀತಮ್ಮನವರು ಯಜಮಾನ ಕಾಲುಗಳ ಹತ್ತಿರ ಕುಳಿತು ಪಾದಗಳಿಗೆ ಔಡಲ ಎಣ್ಣೆಯನ್ನು ಸವರುತ್ತಿದ್ದಳು. ಅಡಿಕೆ ಜಗಿಯುತ್ತಾ ಜಗಿಯುತ್ತಾ ಹುಚ್ಚಯ್ಯನವರು ನಿದ್ರೆಗೆ ಜಾರುವ ಮುನ್ನವೇ, ಸೀತಮ್ಮನವರು ದಿಂಬಿನ ಮೇಲೆ ತಲೆಯಿಟ್ಟು ನಿದ್ರೆಗೆ ಜಾರಿರುತ್ತಿದ್ದಳು.

ಸಾಯಂಕಾಲ ಹುಚ್ಚಯ್ಯ ಊರನ್ನು ಒಂದು ಸುತ್ತು ಸುತ್ತಿ ಬರುತ್ತಿದ್ದನು. ಪಾಂಡುರಂಗಸ್ವಾಮಿ ಗುಡಿಯ ಆಚಾರ್ಯರಿಗೂ, ಈತನಿಗೂ ನಡೆಯುವ ಸಂಭಾಷಣೆ ಪ್ರತಿದಿನವೂ ಹೀಗೆ ಇರುತ್ತಿತ್ತು. ಇವತ್ತು ಏನು ಸಾರು? ಸೋರೆಕಾಯಿ; ಸಾಂಬಾರು? ಇಲ್ಲ ಚಟ್ನಿ; ಇವತ್ತು ಎಷ್ಟು ಪೂಜೆ? ಎರಡು; ಏನಾದರೂ ಗಿಟ್ಟುಪಟ್ಟಾಯ್ತಾ? ಏನೋ ಎಂದು ಆಚಾರ್ಯರು ನಗುತ್ತಿದ್ದರು. ಹುಚ್ಚಯ್ಯನು ನಗುತ್ತಿದ್ದನು.

ಅಲ್ಲಿಂದ ದೊಡ್ಡ ಬಜಾರಿನ ಹತ್ತಿರವಿರುವ ರಾಮದೇವರ ಗುಡಿ ಮೆಟ್ಟಿಲುಗಳ ಮೇಲೆ ಸ್ವಲ್ಪಹೊತ್ತು ಕುಳಿತುಕೊಂಡು ಗೋಲಿಯಾಟ ಆಡುತ್ತಿದ್ದ ಹುಡುಗರನ್ನು ನೋಡುತ್ತಿದ್ದನು. ಹುಡುಗರ ಜೊತೆಗೆ ಆತನು ಗೋಲಿಗಳನ್ನು ಲೆಕ್ಕ ಮಾಡುತ್ತಿದ್ದನು. ಬಾರೆಹಣ್ಣುಗಳ ಕಾಲದಲ್ಲಿ ಒಂದು ಪಾವಿನಷ್ಟು ಖರೀದಿಸಿ ತಂದು ಹುಡುಗರಿಗೆ ತಲೆಗೊಂದು ಹಂಚುತ್ತಿದ್ದನು. ಸಂಜೆ ವೇಳೆಗೆ ತಿರುಗಿ ಗುಡಿಗೆ ಬರುತ್ತಿದ್ದನು. ಗುಡಿಯಲ್ಲಿ ಹುಚ್ಚಯ್ಯನು ಕುಳಿತುಕೊಳ್ಳುವ ಜಾಗ ಹುಚ್ಚಯ್ಯನದೇ. ಅಲ್ಲಿ ಕುಳಿತುಕೊಂಡು ಗೋಪುರದ ಮೇಲಿದ್ದ ಗಿಳಿಗಳ ಕಡೆಗೋ, ಗಾಳಿಗೆ ತೂರಾಡುತ್ತಿದ್ದ ಬನ್ನಿಮರದ ಕಡೆಗೋ ನೋಡ್ತಾ ಇರುತ್ತಿದ್ದನು. ಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಪ್ರಸಾದವಾಗಿ ನೀಡುವ ಕೋಸಂಬರಿಯನ್ನು ತನ್ನ ತುಂಡುಬಟ್ಟೆಯ ತುದಿಗೆ ಕಟ್ಟಿಕೊಂಡು ಮನೆಗೆ ಬರುತ್ತಿದ್ದನು. ಎರಡು ತುತ್ತು ತಾನು ತಿಂದು ಉಳಿದ ಪ್ರಸಾದವನ್ನು ಸೀತಮ್ಮಳಿಗೆ ಇಟ್ಟು, ತಾನು ಒಂದೊಂದೇ ಕಾಳು ಅಗೆಯುತ್ತಾ ನಿದ್ರೆಗೆ ಜಾರುತ್ತಿದ್ದನು.

ಹಾಗೆ ನಿದ್ರೆಗೆ ಜಾರಿದ ಹುಚ್ಚಯ್ಯ ಒಂದು ದಿನ ತಿರುಗಿ ಏಳಲಿಲ್ಲ. ಗಂಡನ ಕಾಲಬಳಿಯಲ್ಲಿ ಮಲಗಿದ್ದ ಸೀತಮ್ಮ ನಿದ್ದೆಯಿಂದ ಎದ್ದು ನೋಡಿದವಳು ಹುಚ್ಚಯ್ಯ  ಹೋದನೆಂದು ರೋದಿಸಲಿಲ್ಲ. ಹಣೆಯ ಸಿಂಧೂರವನ್ನು ಮಾತ್ರ ಅಳಿಸಿಕೊಂಡು, ಇಷ್ಟು ದಿನ ನನ್ನ ಎದುರಿಗಿದ್ದವರು, ಈಗ ನನ್ನಲ್ಲಿ ಇದ್ದಾರೆ ಅಂದುಕೊಂಡಳು. ಹುಚ್ಚಯ್ಯ ಏನು ಸಾಧಿಸಲಿಲ್ಲ? ತಂಟೆ ತಕರಾರುಗಳನ್ನು ಬಗೆಹರಿಸಲಿಲ್ಲ? ಸಮಸ್ಯೆಗಳನ್ನು ಚರ್ಚಿಸಲಿಲ್ಲ? ಆದರೂ ಕಾಲಕ್ಕೆ ತಿಳಿಯದಂತೆ ಕಾಲದಲ್ಲಿಯೇ ಕಳೆದುಹೋಗಿ ಬದುಕಿದ್ದ. ಅದು ಸಾಲದೆ? ಸಾಲದು ಸಾಕಷ್ಟು ಜನರಿಗೆ?










ತೆಲುಗು ಮೂಲ : ಶಂಕರಮಂಚಿ ಸತ್ಯಂ
ಕನ್ನಡಕ್ಕೆ : ಡಾ. ವಿರೂಪಾಕ್ಷಿ ಎನ್ ಬೋಸಯ್ಯ
ಬೋಸೆದೇವರಹಟ್ಟಿ, ಚಳ್ಳಕೆರೆ ತಾಲೂಕು.



No comments:

Post a Comment