Monday 21 June 2021

Article: ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸುವುದಕ್ಕಿಂತ, ಪ್ರಜ್ಞಾವಂತರನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ.

ವೀರೇಶ್ ಎಂ.ಬಿ. ಶಿಕ್ಷಕರು, 'ಮಕ್ಕಳು ಪ್ರಜ್ಞಾವಂತರಾಗುವಲ್ಲಿ, ಶಿಕ್ಷಕರ ಪಾತ್ರ.' ಕುರಿತಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನಮ್ಮ ವಿದ್ಯಾರ್ಥಿಗಳು ಸಮಾಜದಲ್ಲಿ ವಿದ್ಯಾವಂತರಾಗಿ, ಬುದ್ಧಿವಂತರಾಗಿ ಬೆಳೆದು ದೊಡ್ಡವರಾಗುವುದುಕ್ಕಿಂತ ಪ್ರಜ್ಞಾವಂತರಾಗಿ ಸಮಾಜದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತಾದರೆ ಸಾಕು.



 
 "ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು". -ವಿನೋಬಾ ಭಾವೆ 


ಈ ಮಾತನ್ನು ನೆನಪಿಸಿಕೊಂಡ, ಉದ್ದೇಶ ಹೇಳುವುದಾದರೆ. ಗುರು ಪರಂಪರೆಯಲ್ಲಿರುವ ನಮಗೆ ಅಂದರೆ, ಶಿಕ್ಷಕ ವೃತ್ತಿಯಲ್ಲಿ ಇರುವ ನಾವು ಶಾಲೆಯಲ್ಲಿ ವಿದ್ಯೆ ಕಲಿಸುವ ಸಂದರ್ಭದಲ್ಲಿ ಎದುರಿರುವ ವಿದ್ಯಾರ್ಥಿಗಳು ಮುಂದೆ ಏನಾಗುತ್ತಾರೆ! ಎಂಬ ಅರಿವಿಲ್ಲದೆಯೇ ನಮ್ಮ ಬೋಧನೆ- ಕಲಿಕಾ ಪ್ರಕ್ರಿಯೆ ಸಾಗಿರುತ್ತದೆ. ಆದರೆ ಮುಂದೊಂದು ದಿನ ನಮಗಿಂತ ಹೆಚ್ಚಿನ ಕೀರ್ತಿ, ಹೆಸರು, ಜ್ಞಾನ. ಸಂಪಾದಿಸಿದಾಗ ಅವರ ತಂದೆ, ತಾಯಿಗಿಂತ ಹೆಚ್ಚಿನ ಸಂಭ್ರಮಪಟ್ಟು ಅದನ್ನು ಇನ್ನುಳಿದ ವಿದ್ಯಾರ್ಥಿಗಳಿಗೆ. ಇವರನ್ನೇ ಉದಾಹರಣೆಯಾಗಿ ಕೊಡುತ್ತೇವೆ. ತನಗಿಂತ ತನ್ನ ಶಿಷ್ಯನೇ ಶ್ರೇಷ್ಠ ಎಂದು ಹೇಳುತ್ತೇವೆ. ಇದೇ ನಮ್ಮ ಶಿಕ್ಷಕರ ಕಿರೀಟಪ್ರಾಯ, ಯಾಕೆಂದರೆ ಅವರಿಗೆ ಸಿಗುವ ಒಬ್ಬೊಬ್ಬ ಶಿಷ್ಯನೂ, ಕಿರೀಟದಲ್ಲಿ ಹಾರಾಡುವಂತೆ ರಿಗಳಂತೆ, ಮುಕುಟ ಮಣಿಗಳಂತೆ.

ಶಾಲೆಯಲ್ಲಿ ಬೋಧಿಸುವ ಸಂದರ್ಭದಲ್ಲಿ ಕೆಲವು ಮೂಲಭೂತ ಸೌಲಭ್ಯಗಳ ಕೊರತೆ ಅಥವಾ ತಂತ್ರಜ್ಞಾನ ಉಪಕರಣಗಳ ಕೊರತೆಹೀಗೆ ಬೋಧನಾ-ಕಲಿಕಾ ಪ್ರಕ್ರಿಯೆಗೆ ಎದುರಾಗುವ ಸಮಸ್ಯೆ ಯಾವುದಿದ್ದರೂ, ನಮ್ಮ ಕಾರ್ಯವನ್ನು ನಿಲ್ಲಿಸದೆ ಏನಾದರೂ ಹೊಸತನವನ್ನು ಹುಡುಕಿ ಕ್ರಿಯಾಶೀಲತೆಯಿಂದ ಬೋಧಿಸಿದ್ದೆ, ಆದರೆ ನಮ್ಮ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತೇವೆ.


 ಉತ್ತಮ ಶಿಕ್ಷಕ ಎಂದು ಸಮಾಜ, ಇಲಾಖೆ ಅಥವಾ ಮೂರನೇ ವ್ಯಕ್ತಿ ಗುರುತಿಸುವುದಲ್ಲ. ವಿದ್ಯಾರ್ಥಿಗಳೇ ನಮ್ಮ ನಿಜವಾದ ತೀರ್ಪುಗಾರರು. ಅವರ ಮನಸ್ಸಿನಲ್ಲಿ ಸದಾ ಉಳಿಯುವುದೇ, ನಮ್ಮ ಸಾಧನೆ. ತರಗತಿಯಲ್ಲಿ ಬೋಧಿಸುವಾಗ ಎದುರಿಗಿರುವ ವಿದ್ಯಾರ್ಥಿಗಳ ಕುಲ, ಜಾತಿ, ಧರ್ಮ ಮತ್ತು ಜನಾಂಗ ಯಾವುದನ್ನು ಪರಿಗಣಿಸದೆ ನಮ್ಮ ಒಳ್ಳೆಯ ನಡತೆಯಿಂದ ಅವರಲ್ಲಿ ಧನಾತ್ಮಕ ಪರಿವರ್ತನೆ ಕಾಣಬೇಕು.

ಮನೆಯಿಂದ ಶಾಲೆಗೆ ಬರುವ ಮಗುವಿನ ಮನಸ್ಸಿನಲ್ಲಿ ಅನೇಕ ಗೊಂದಲಗಳನ್ನು ತುಂಬಿಕೊಂಡು ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು? ಯಾರೊಂದಿಗೆ ಸ್ನೇಹ ಮಾಡುವುದು? ಯಾರೊಟ್ಟಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು? ಹೀಗೆ ಖಾಲಿ ಹಾಳೆಯಂತೆ ಬರುವ ಮಗುವನ್ನು, ನಮ್ಮ ಸುಂದರವಾದ ಶಾಲಾ ವಾತಾವರಣಕ್ಕೆ ಹೊಂದಿಕೊಂಡು, ನಮ್ಮ ಮೇಲೆ ಸಂಪೂರ್ಣ ನಂಬಿಕೆ ಬರುವಂತೆ ಮಾಡಿ, ನಮ್ಮ ಶಾಲೆಯ ನೀತಿ- ನಿಯಮಗಳನ್ನು ತಿಳಿಸಿ ಪಾಲಿಸುವಂತೆ ಮನವೊಲಿಸುತ್ತಾ, ಆದರ್ಶ ಗುಣಗಳನ್ನು ಬೆಳೆಸುತ್ತಾ ಸಾಗಬೇಕು.ಮುಂದೊಂದು ದಿನ ಅವ ಉತ್ತಮ ಸಾಧನೆಗೆ ನಾವು ಬುನಾದಿಯಾಗಿರುತ್ತೇವೆ.

ನಾನೊಬ್ಬ ವಿಜ್ಞಾನ ಮತ್ತು ಗಣಿತ ಬೋಧಿಸುವ ಶಿಕ್ಷಕ .ನನ್ನ ವಿಷಯ ಬೋಧನೆಯ ಪರಿಮಿತಿಯಲ್ಲಿ ಹೇಳುವುದಾದರೆ, ನನ್ನ ವಿಷಯದಲ್ಲಿ ವಿದ್ಯಾರ್ಥಿಗಳು ಉತ್ತಮ ಜ್ಞಾನ ಸಂಪಾದಿಸಬೇಕಾದರೆ, ಉಳಿದ ಶಿಕ್ಷಕರು ಹಾಕುವ ಬುನಾದಿ ಸಾಮರ್ಥ್ಯಗಳು ಮುಖ್ಯವಾಗುತ್ತವೆ. ಶಾಲೆಯಲ್ಲಿ ಬೋಧಿಸುವ ವಿಷಯಗಳು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುತ್ತವೆ.ನನ್ನ ವಿದ್ಯಾರ್ಥಿಗಳು ಮುಂದೆ ಒಬ್ಬ ಒಳ್ಳೆಯ ಡಾಕ್ಟರ್, ಇಂಜಿನಿಯರ ಮತ್ತು ವಿಜ್ಞಾನಿಯೇ? ಆಗಬೇಕೆಂದು ಕನಸು ಕಾಣುವುದಲ್ಲ.

ನನ್ನ ಮನವಿ ಏನೆಂದರೆ ನಮ್ಮ ವಿದ್ಯಾರ್ಥಿಗಳು ಸಮಾಜದಲ್ಲಿ ವಿದ್ಯಾವಂತರಾಗಿ, ಬುದ್ಧಿವಂತರಾಗಿ ಬೆಳೆದು ದೊಡ್ಡವರಾಗುವುದುಕ್ಕಿಂತ ಪ್ರಜ್ಞಾವಂತರಾಗಿ ಸಮಾಜದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತಾದರೆ ಸಾಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ಮೋಸ, ಕೊಲೆ, ವಂಚನೆ, ಸೈಬರ್ ಕ್ರೈಂ, ಭ್ರಷ್ಟಾಚಾರ ಇತ್ಯಾದಿ. ಇವುಗಳನ್ನು ಅಕ್ಷರ ಜ್ಞಾನ  ಇಲ್ಲದಿರುವವರಿಗಿಂತ. ಪದವೀಧರರು, ಅಕ್ಷರವಂತರು, ಉತ್ತಮ ವಿದ್ಯೆ ಸಂಪಾದಿಸಿದವರು ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಹೆಚ್ಚು. ಆದ್ದರಿಂದ ನಮ್ಮ ಪಾಠ ಅವತ್ತಿನ ತರಗತಿಷ್ಟೇ ಮೀಸಲಾಗದೆ .ವಿದ್ಯೆ ,ಬುದ್ಧಿ ಕಲಿಸುವುದಕ್ಕೂ ಸೀಮಿತಗೊಳ್ಳದೆ,ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಿದಾಗ ಮುಂದೆ ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಪ್ರಜ್ಞೆಯಿಂದ ಆಲೋಚಿಸಿ ಮುನ್ನುಗ್ಗುತ್ತಾರೆ.
 ಪ್ರಜ್ಞೆ ಕಳೆದುಕೊಂಡು ಮಾಡುವ ಇವತ್ತಿನ ಒಳ್ಳೆಯ ಕೆಲಸ, ನಾಳೆ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ, ‘ಪ್ರಜ್ಞೆ ಇರುವ ಒಬ್ಬ ಸಾಮಾನ್ಯ ಪ್ರಜೆ,ಪ್ರಭುಗೆ ಸಮಾನ.’ ಪ್ರಜ್ಞೆ ಇಲ್ಲದೆ ಮಾಡಿದ ನಗರೀಕರಣ ಇವತ್ತು ನರಕಕ್ಕೆ ನೂಕುತ್ತಿದೆ. ಪ್ರಕೃತಿಯನ್ನು ಅಸಮತೋಲನಗೊಳಿಸಿದ್ದಕ್ಕಾಗಿ, ನಾವು ನಮ್ಮ ನೆಲೆಯನ್ನು ಕಳೆದುಕೊಳ್ಳುವಂತಾಗಿದೆ. ನಮ್ಮ ಯಾವುದೇ ಅಭಿವೃದ್ಧಿ ಕಾರ್ಯಗಳು ಪರಿಸರ ಹಾಳಾಗದಂತೆ ಸಾಗುವಂತಿರಬೇಕು. ಇಲ್ಲವೇ ಅದೇ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವಂತಿರಬೇಕು.

 ಪ್ರಕೃತಿಯಿಂದ ನಾವು,ನಮ್ಮಿಂದ ಪ್ರಕೃತಿಯಲ್ಲ.’ ಎಂಬ ಅರಿವು ಮೂಡಲಿ. ನಮ್ಮ ಈ ಎಲ್ಲಾ ವಹಿವಾಟು ಪ್ರಕೃತಿ ನೀಡಿರುವ ಭಿಕ್ಷೆ. ಭಿಕ್ಷೆ ಹಾಕಿಸಿಕೊಂಡ ವರಿಗೆ ಸ್ವಲ್ಪ ನಿಯತ್ತು ಇರಬೇಕಾಗುತ್ತದೆ. ಮಾನವನಾಸೆಗೆ ಕೊನೆಯಿಲ್ಲ. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಹಾಗೂ ನಾವು ವಿದ್ಯಾವಂತರಿಗಿಂತ, ಬುದ್ಧಿವಂತರಿಗಿಂತ. ಪ್ರಜ್ಞಾವಂತರಾಗೋಣ ಎಂದು ಆಶಿಸುತ್ತಾ.....!


ಎಂ. ಬಿ. ವೀರಭದ್ರಯ್ಯ (ವೀರೇಶ್ ಎಂ.ಬಿ)

 ಪದವೀಧರ ಪ್ರಾಥಮಿಕ ಶಿಕ್ಷಕ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರ್ರೇನಳ್ಳಿ.

ಮೊಳಕಾಲ್ಮೂರು (ತಾಲ್ಲೂಕು) ಚಿತ್ರದುರ್ಗ (ಜಿಲ್ಲೆ)

2 comments:

  1. ಪ್ರಸ್ತುತವಾಗಿರುವ ಲೇಖನ ತುಂಬಾ ಚನ್ನಾಗಿದೆ.

    ReplyDelete