Saturday, 3 December 2022

Mohammed Shami: ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಮೊಹಮ್ಮದ್ ಶಮಿ ಔಟ್

India vs bangladesh

ಬಾಂಗ್ಲಾದೇಶ ಪ್ರವಾಸ ಬೆಳೆಸಿರುವ ಭಾರತ ಕ್ರಿಕೆಟ್ ತಂಡ (India vs Bangladesh) ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಡಿಸೆಂಬರ್ 4 ಭಾನುವಾರದಂದು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ, ಈ ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ (Mohammed Shami) ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇಂಜುರಿಗೆ ತುತ್ತಾಗಿರುವ ಶಮಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ (BCCI) ತಿಳಿಸಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಪ್ರಕಟಿಸಿರುವ ಭಾರತೀಯ ಕ್ರಿಕೆಟ್ ನಿಂತ್ರಣ ಮಂಡಳಿ ಶಮಿ ಜಾಗಕ್ಕೆ ಬದಲಿ ಆಟಗಾರನಾಗಿ ಉಮ್ರಾನ್ ಮಲಿಕ್ ಅವರನ್ನು ಆಯ್ಕೆ ಮಾಡಿದೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್‌ನಿಂದ ಭಾರತ ತಂಡ ಸೆಮಿಫೈನಲ್‌ನಲ್ಲಿ ನಿರ್ಗಮಿಸಿ ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ಶಮಿ ತರಬೇತಿ ಅವಧಿಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೇವಲ ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಮಾತ್ರವಲ್ಲದೆ ಡಿಸೆಂಬರ್ 14 ರಿಂದ ಚಿತ್ತಗಾಂಗ್‌ನಲ್ಲಿ ಪ್ರಾರಂಭವಾಗುವ ಎರಡು-ಟೆಸ್ಟ್ ಸರಣಿಗೂ ಶಮಿ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

“ಆಸ್ಟ್ರೇಲಿಯದಿಂದ ತವರಿಗೆ ಮರಳಿ ತರಬೇತಿಯನ್ನು ಪುನರಾರಂಭಿಸಿದ ನಂತರ ಮೊಹಮ್ಮದ್ ಶಮಿ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವರದಿ ಮಾಡಲು ಹೇಳಿದ್ದೇವೆ. ಹೀಗಾಗಿ ಶಮಿ ಡಿಸೆಂಬರ್ 1 ರಂದು ಭಾರತ ತಂಡದೊಂದಿಗೆ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿಲ್ಲ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

“ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶಮಿ ಅವರ ಅನುಪಸ್ಥಿತಿಯು ಖಂಡಿತವಾಗಿಯೂ ದೊಡ್ಡ ಹಿನ್ನಡೆಯಾಗಿದೆ. ಅವರು ಟೆಸ್ಟ್‌ ಸರಣಿಗೂ ಅಲಭ್ಯರಾದರೆ ಇದು ಇನ್ನಷ್ಟು ದೊಡ್ಡ ಹಿನ್ನಡೆ. ಜಸ್​ಪ್ರೀತ ಬುಮ್ರಾ ಬದಲಿಗೆ ಅವರನ್ನು ಆಯ್ಕೆ ಮಾಡಿದ್ದೆವು. ಆದರೀಗ ಶಮಿ ಕೂಡ ಇಂಜುರಿಗೆ ತುತ್ತಾಗಿರುವುದು ಚಿಂತೆಯಾಗಿದೆ,” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೀರಾನ್ ಪೊಲಾರ್ಡ್- ರಶೀದ್ ಖಾನ್​ಗೆ ನಾಯಕತ್ವ ಪಟ್ಟಕ್ಕಟಿದ ಮುಂಬೈ ಫ್ರಾಂಚೈಸಿ..!

ಶಮಿ ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನೂ ತಿಳಿದಿಲ್ಲ. ಅವರು ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕು ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ. ಶಮಿ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್ ಏಕದಿನ ಸರಣಿಯನ್ನು ವೇಗಿಗಳ ವಿಭಾಗದಿಂದ ಮುನ್ನಡೆಸಬೇಕಿದೆ. ಉಮ್ರಾನ್ ಮಲಿಕ್, ಕುಲದೀಪ್ ಸೇನ್ ಕೂಡ ರೇಸ್​ನಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿ. 7 ರಂದು ದ್ವಿತೀಯ ಏಕದಿನ ಮತ್ತು ತೃತೀಯ ಪಂದ್ಯ ಡಿಸೆಂಬರ್ 10ಕ್ಕೆ ಆಯೋಜಿಸಲಾಗಿದೆ. ಮೂರೂ ಏಕದಿನ ಪಂದ್ಯ ಢಾಕಾದ ಬಾಂಗ್ಲಾದೇಶ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ ಚಿತ್ತಗಾಂಗ್​ನಲ್ಲಿ ಜರುಗಲಿರುವ ಮೊದಲ ಟೆಸ್ಟ್ ಡಿಸೆಂಬರ್ 14-18ರ ವರೆಗೆ ಇರಲಿದೆ. ನಂತರ ಡಿಸೆಂಬರ್ 22-26 ಎರಡನೇ ಟೆಸ್ಟ್ ಇದ್ದು ಢಾಕಾದಲ್ಲಿ ಆಯೋಜಿಸಲಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



source https://tv9kannada.com/sports/cricket-news/mohammed-shami-ruled-out-of-the-odi-series-against-bangladesh-due-to-a-hand-injury-cricket-news-in-kannada-vb-au48-480025.html

No comments:

Post a Comment