Thursday 15 December 2022

INDW vs AUSW: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಆಸೀಸ್: ಭಾರತೀಯ ಮಹಿಳೆಯರಿಗೆ ಎರಡನೇ ಸೋಲು

INDW vs AUSW

ಭಾರತ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಟಿ20 ಸರಣಿ ಆಡುತ್ತಿದ್ದು ಬೊಂಬಾಟ್ ಪ್ರದರ್ಶನ ತೋರುತ್ತಿದೆ. ಬುಧವಾರ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 21 ರನ್​ಗಳ ಜಯ ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡಿದೆ. ಕಾಂಗರೂ ಪಡೆಯ ಬ್ಯಾಟಿಂಗ್-ಬೌಲಿಂಗ್ ಅಬ್ಬರಕ್ಕೆ ತಬ್ಬಿಬ್ಬಾದ ಭಾರತ ಮಹಿಳಾ ತಂಡ ಎರಡನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಆಸೀಸ್ 9 ವಿಕೆಟ್​ಗಳ ಜಯ ಸಾಧಿಸಿದರೆ, ದ್ವಿತೀಯ ಟಿ20ಯಲ್ಲಿ ನಡೆದ ಸೂಪರ್ ಓವರ್​ನಲ್ಲಿ ಭಾರತ ಗೆಲುವು ಕಂಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಿಸುವ ಮೂಲಕ ಮುನ್ನಡೆ ಸಾಧಿಸಿದೆ. ಭಾರತ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ತೃತೀಯ ಟಿ20 ಯಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಮೊದಲ ಓವರ್​ನಲ್ಲೇ ರೇಣುಕಾ ಸಿಂಗ್ ಬೌಲಿಂಗ್​ನಲ್ಲಿ ಅಲಿಸ್ಸಾ ಹೀಲೆ (1) ಔಟಾದರು. ನಂತರದ ಓವರ್​ನಲ್ಲಿ ತಹಿಲಾ ಮೆಕ್​ಘ್ರತ್ ಕೂಡ 1 ರನ್​ಗೆ ನಿರ್ಗಮಿಸಿದರು. ನಂತರ ಬೆತ್ ಮೂನೆ ಹಾಗೂ ಎಲಿಸ್ಸಾ ಪೆರಿ ಉತ್ತಮ ಜೊತೆಯಾಟ ಆಡಿ ತಂಡವನ್ನು ಮೇಲೆತ್ತಿದರು. ಈ ಜೋಡಿ 64 ರನ್​ಗಳ ಜೊತೆಯಾಟ ಆಡತು. ಚೆನ್ನಾಗಿಯೆ ಆಡುತ್ತಿದ್ದ ಮೋನಿ 22 ಎಸೆತಗಳಲ್ಲಿ 30 ರನ್ ಗಳಿಸಿ ದೇವಿಕಾ ಬೌಲಿಂಗ್​ನಲ್ಲಿ ಔಟಾದರು. ಆಶ್ಲೆಗ್ ಗಾರ್ಡನ್ 7 ರನ್​ಗೆ ಸುಸ್ತಾದರು.

ಅಪ್ಪನಂತೆಯೇ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಅರ್ಜುನ್ ತೆಂಡೂಲ್ಕರ್..!

ಈ ಸಂದರ್ಭ ಗ್ರಾನ್ಸ್ ಹ್ಯಾರಿಸ್ ಹಾಗೂ ಎಲಿಸ್ಸಾ ಪೆರಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಫೋಟಕ ಆಟವಾಡಿದ ಈ ಜೋಡಿ ಭಾರತೀಯ ಬೌಲರ್​ಗಳ ಬೆವರಿಳಿಸಿದರು. ಪೆರಿ 47 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್​ನೊಂದಿಗೆ 75 ರನ್ ಚಚ್ಚಿದರೆ, ಹ್ಯಾರಿಸ್ ಕೇವಲ 18 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್​ನೊಂದಿಗೆ 41 ರನ್ ಸಿಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಭಾರತ ಪರ ರೇಣುಕಾ ಸಿಂಗ್, ಅಂಜಲಿ, ದೀಪ್ತಿ ಹಾಗೂ ದೇವಿಕಾ ತಲಾ 2 ವಿಕೆಟ್ ಪಡೆದರು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ಸ್ಮೃತಿ ಮಂದಾನ (1) ವಿಕೆಟ್ ಕಳೆದುಕೊಂಡಿತು. ಜೆಮಿಯಾ ರೋಡ್ರಿಗಸ್ 16 ರನ್​ಗೆ ಔಟಾದರು. ಈ ಸಂದರ್ಭ ತಂಡವನ್ನು ಮೇಲೆತ್ತಿದ ಶಫಾಲಿ ವರ್ಮಾ ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್ ಅತ್ಯುತ್ತಮ ಜೊತೆಯಾಟ ಆಡಿದರು. ಗೆಲುವಿಗೆ ಹೋರಾಟ ನಡೆಸಿದ ಈ ಜೋಡಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ಶಫಾಲಿ 41 ಎಸೆತಗಳಲ್ಲಿ 52 ರನ್ ಸಿಡಿಸಿದರೆ, ಕೌರ್ 27 ಎಸೆತಗಳಲ್ಲಿ 37 ರನ್​ಗಳ ಕೊಡುಗೆ ನೀಡಿದರು. ಆದರೆ, ನಂತರ ಬಂದ ಬ್ಯಾಟರ್​ಗಳ ಪೈಕಿ ದೀಪ್ತಿ ಶರ್ಮಾ (ಅಜೇಯ 25) ಬಿಟ್ಟರೆ ಮತ್ಯಾರೂ ಹೋರಾಟ ನಡೆಸಲಿಲ್ಲ.

20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ ಮಹಿಳಾ ತಂಡ 151 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ ಮತ್ತು ಗಾರ್ಡನರ್ ತಲಾ 2 ವಿಕೆಟ್ ಪಡೆದರೆ ಮೆಗನ್ ಸ್ಕಟ್ ಹಾಗೂ ನಿಕೋಲ ಕರೆ ತಲಾ 1 ವಿಕೆಟ್ ಪಡೆದರು. ಎಲಿಸ್ಸಾ ಪೆರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-2 ರ ಹಿನ್ನಡೆಯಲ್ಲಿದೆ. ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 17 ರಂದು ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



source https://tv9kannada.com/sports/cricket-news/indian-womens-team-batting-collapsed-ellyse-perry-shine-and-australia-21-run-victory-in-the-third-t20-vb-au48-485903.html

No comments:

Post a Comment