ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಅಂತಿಮ ಹಂತದತ್ತ ತಲುಪುತ್ತಿದೆ. ಬುಧವಾರ ಅಲ್ ಬಯಾತ್ ಸ್ಟೇಡಿಂನಲ್ಲಿ ನಡೆದ ದ್ವಿತೀಯ ಸೆಮಿ ಫೈನಲ್ ಹಣಾಹಣಿಯಲ್ಲಿ ಮೊರಾಕ್ಕೊ ತಂಡವನ್ನು 2-0 ಗೋಲ್ಗಳಿಂದ ಮಣಿಸಿದ ಫ್ರಾನ್ಸ್ (France vs Morocco) ತಂಡ ಪ್ರಶಸ್ತಿ ಸುತ್ತಿಗೇರಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ಜಯ ಸಾಧಿಸಿದ ಪರಿಣಾಮ ಫೈನಲ್ನಲ್ಲಿ ಅರ್ಜೆಂಟೀನಾ (France vs Argentina) ವಿರುದ್ಧ ಕಪ್ಗಾಗಿ ಹೋರಾಟ ನಡೆಸಲಿದೆ. ಸೆಮೀಸ್ ಪಂದ್ಯದಲ್ಲಿ ಫ್ರಾನ್ಸ್ ಪರ ಥಿಯೊ ಹೆರ್ನಾಂಡೀಸ್ ಮತ್ತು ಬದಲಿ ಆಟಗಾರನಾಗಿ ಬಂದ ರಂಡಲ್ ಕೊಲೊ ಮೌನಿ ತಲಾ ಒಂದು ಗೋಲು ಸಿಡಿಸಿ ಗೆಲುವಿಗೆ ಕಾರಣರಾದರು.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್ ಪಂದ್ಯದ 5ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮೊದಲು ಗೋಲು ಗಳಿಸಿದರು. ಬಳಿಕ ಮೊರಾಕ್ಕೊ ಸಾಕಷ್ಟು ಬಾರಿ ಗೋಲು ಗಳಿಸಿದರು ಪ್ರಯತ್ನಿಸಿದರೂ ಫ್ರಾನ್ಸ್ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋಗಿ ಮೊರಾಕ್ಕೊಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಪಂದ್ಯ 1-0 ಅಂತರದಲ್ಲಿ ಫ್ರಾನ್ಸ್ ಪರವಾಗಿಯೇ ಅಂತಿಮ ಹಂತದತ್ತ ಸಾಗುತ್ತಲೇ ಫ್ರಾನ್ಸ್ ಪರ ಪರ್ಯಾಯ ಆಟಗಾರನಾಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ ಗೋಲು ಗಳಿಸಿ ಫ್ರಾನ್ಸ್ ಗೆಲುವು ಸ್ಪಷ್ಟಪಡಿಸಿದರು.
IND vs BAN: 20 ಓವರ್ ಆಗುವಷ್ಟರಲ್ಲೇ ತಮ್ಮ ಇನ್ನಿಂಗ್ಸ್ ಮುಗಿಸಿದ ಗಿಲ್, ರಾಹುಲ್, ಕೊಹ್ಲಿ!
ಅಂತಿಮ ಹಂತದಲ್ಲಿ ಮೊರಾಕ್ಕೊ ಎಷ್ಟೇ ಪ್ರಯತ್ನ ಪಟ್ಟರೂ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಫ್ರಾನ್ಸ್ 2-0 ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿದ್ದ ಮೊರಾಕ್ಕೊ ತಂಡ ಸೆಮಿ ಫೈನಲ್ ಹಣಾಹಣಿಯಲ್ಲಿ ಹೀನಾಯ ಸೋಲು ಅನುಭವಿಸಿತು. ಇದೀಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಲಿಯೋನಲ್ ಮೆಸ್ಸಿ ನೇತೃತ್ವದ ಬಲಿಷ್ಟ ತಂಡ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಫೈನಲ್ ಪಂದ್ಯದ ಬಳಿಕ ಮೆಸ್ಸಿ ವಿದಾಯ:
ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ. ಭಾನುವಾರ ನಡೆಯುವ ಫೈನಲ್ ಪಂದ್ಯ ತಮ್ಮ ಪಾಲಿಗೆ ಕೊನೆಯದು ಎಂದು ಸ್ವತಃ ಮೆಸ್ಸಿ ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ”ಅರ್ಜೆಂಟೀನಾ ತಂಡ ಫೈನಲ್ ತಲುಪಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಭಾನುವಾರ ಫೈನಲ್ ಪಂದ್ಯದ ಬಳಿಕ ತಮ್ಮ ಫಿಫಾ ವಿಶ್ವಕಪ್ ಟೂರ್ನಿಯ ಪಯಣ ಅಂತ್ಯವಾಗಲಿದೆ. ವಿಶ್ವಕಪ್ ಗೆಲ್ಲಲು ಈ ಬಾರಿ ನಮಗೆ ಅತ್ಯುತ್ತಮ ಅವಕಾಶವಿದೆ. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಗಳು ಒಳ್ಳೆಯ ಸಂಗತಿ. ಆದರೆ, ಒಂದು ಗುಂಪಾಗಿ ಈ ಟೂರ್ನಿಯಲ್ಲಿ ಸಾಧನೆ ಮಾಡುವುದು ತುಂಬಾ ಮುಖ್ಯ. ಇದು ಅತ್ಯಂತ ಅದ್ಭುತವಾದ ಸಂಗತಿಯಾಗಿರುತ್ತದೆ. ಪ್ರಶಸ್ತಿ ಗೆಲ್ಲಲು ನಮಗೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಕಠಿಣ ಪೈಪೋಟಿ ನೀಡಿದ ಬಳಿಕ ನಮಗೆ ನಮ್ಮ ಕನಸು ನನಸು ಮಾಡಿಕೊಳ್ಳಲು ಅತ್ಯುತ್ತಮ ಅವಕಾಶ ಸಿಕ್ಕಿದೆ,” ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.
ಲಿಯೊನೆಲ್ ಮೆಸ್ಸಿ ಪಾಲಿಗೆ ಇದು ಐದನೇ ಫಿಫಾ ವಿಶ್ವಕಪ್ ಟೂರ್ನಿ. ಆ ಮೂಲಕ ಅರ್ಜೆಂಟೀನಾ ಪರ ಅತಿ ಹೆಚ್ಚು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಮೆಸ್ಸಿ ಭಾಜನರಾಗಿದ್ದಾರೆ. ಇದರೊಂದಿಗೆ ಡಿಯಾಗೊ ಮಾರಡೋನಾ ಹಾಗೂ ಜೇವಿಯರ್ ಅವರನ್ನು ಅರ್ಜೆಂಟೀನಾ ನಾಯಕ ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ. ಇದೀಗ ಕೊನೆಯ ವಿಶ್ವಕಪ್ನ ಫೈನಲ್ ಕಾದಾಟದಲ್ಲಿ ಮೆಸ್ಸಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
source https://tv9kannada.com/sports/other-sports/fifa-world-cup-2022-france-vs-morocco-france-defeats-morocco-2-0-to-reach-world-cup-final-vb-au48-485888.html
No comments:
Post a Comment