Wednesday, 7 December 2022

ರೈತ ಮಹಿಳೆಯರಿಗೆ ಬಡ್ಡಿರಹಿತ ಬೆಳೆ ಸಾಲ ನೀಡುವ ಮೂಲಕ ರಾಜ್ಯ ಸರ್ಕಾರ ಉತ್ತೇಜನ ನೀಡಬೇಕು : ನಾಗರತ್ನಮ್ಮ ವಿ.ಪಾಟೀಲ್

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ, (ಡಿ.07): ರೈತ ಮಹಿಳೆಯರು ಕೃಷಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಕನಿಷ್ಠ ಐದು ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಬೆಳೆ ಸಾಲ ನೀಡುವ ಮೂಲಕ ರಾಜ್ಯ ಸರ್ಕಾರ ಉತ್ತೇಜನ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ.ಪಾಟೀಲ್ ಒತ್ತಾಯಿಸಿದರು.

ಎ.ಪಿ.ಎಂ.ಸಿ.ರೈತ ಭವನದಲ್ಲಿ ಬುಧವಾರ ನಡೆದ ಮಹಿಳಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು ರೈತ ಮಹಿಳೆಯರಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಶೇ.100 ರಷ್ಟು ಸಹಾಯಧನ ನೀಡಬೇಕು. ಕೃಷಿ ಜೊತೆಗೆ ಪರ್ಯಾಯ ಕಸುಬಿಗಾಗಿ ರೈತ ಮಹಿಳೆಯರಿಗೆ ಉಚಿತವಾಗಿ ನಾಟಿ ಹಸುಗಳನ್ನು ವಿತರಿಸಬೇಕು. ಕುರಿ ಮತ್ತು ಕೋಳಿ ಸಾಕಾಣಿಕೆಗೆ ಸಹಾಯಧನ ಹೆಚ್ಚಿಸಬೇಕು. ಕೃಷಿ ಚಟುವಟಿಕೆಗೆ ಕನಿಷ್ಟ 200 ದಿನಗಳ ಕಾಲ ಉದ್ಯೋಗ ಭದ್ರತೆ ನೀಡಲು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಿ ಕೂಲಿ ಹೆಚ್ಚಿಸಬೇಕು. ಸರ್ಕಾರವೇ ರೈತ ಮಹಿಳೆಯರಿಗೆ ಜೀವ ವಿಮೆ ತುಂಬಬೇಕು. ಅರವತ್ತು ವರ್ಷ ತುಂಬಿರುವ ರೈತ ಮಹಿಳೆಯರಿಗೆ ಕನಿಷ್ಠ ಎರಡು ಸಾವಿರ ರೂ.ಮಾಶಾಸನ ನೀಡುವಂತೆ ಸರ್ಕಾರದ ಮುಂದೆ ಬೇಡಿಕೆಯಿಡುವ ಸಂಬಂಧ ರೈತ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು.

ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳ ಎಸ್.ಅಕ್ಕಿ, ಮೈಸೂರು ಜಿಲ್ಲಾಧ್ಯಕ್ಷೆ ನೇತ್ರಾವತಿ, ವಿಜಯನಗರ ಜಿಲ್ಲಾಧ್ಯಕ್ಷೆ ಯಶೋಧ ಎಸ್. ಹಿರಿಯೂರಿನ ಶಶಿಕಲ ಮತ್ತು ರತ್ನಮ್ಮ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಟಿ.ನುಲೇನೂರು ಶಂಕರಪ್ಪ, ರವಿಕಿರಣ್ ಪೂಣಚ್ಚ, ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಶಿವಾನಂದ ಕುಗ್ವೆ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಮುದ್ದಾಪುರ ನಾಗರಾಜ್, ಹುಣಸೆಕಟ್ಟೆ ಕಾಂತರಾಜ್, ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷರಾದ ಜೆ.ಯಾದವರೆಡ್ಡಿ ಸಭೆಯಲ್ಲಿದ್ದರು.

The post ರೈತ ಮಹಿಳೆಯರಿಗೆ ಬಡ್ಡಿರಹಿತ ಬೆಳೆ ಸಾಲ ನೀಡುವ ಮೂಲಕ ರಾಜ್ಯ ಸರ್ಕಾರ ಉತ್ತೇಜನ ನೀಡಬೇಕು : ನಾಗರತ್ನಮ್ಮ ವಿ.ಪಾಟೀಲ್ first appeared on Kannada News | suddione.



source https://suddione.com/the-state-government-should-encourage-women-farmers-by-providing-interest-free-crop-loans-nagaratnamma-v-patil/

No comments:

Post a Comment