Wednesday, 5 October 2022

VIDEO: 1 ಎಸೆತದಲ್ಲಿ 3 ಬಾರಿ ಜೀವದಾನ ಪಡೆದ ಹರ್ಷಲ್ ಪಟೇಲ್..!

Harshal Patel

India vs South Africa 3rd T20: ಇಂದೋರ್​ನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 49 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ರಿಲೀ ರೊಸೊ 7 ಸಿಕ್ಸ್​ ಒಳಗೊಂಡಂತೆ 48 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್​ ಕಲೆಹಾಕಿತು.

228 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್​ ಬಾರಿಸಿ ಅಬ್ಬರಿಸಿದರು. ಇನ್ನು ಅಂತಿಮ ಹಂತದಲ್ಲಿ ಹರ್ಷಲ್ ಪಟೇಲ್ ಕೂಡ 12 ಎಸೆತಗಳಲ್ಲಿ 17 ರನ್​ ಬಾರಿಸಿದ್ದರು. ವಿಶೇಷ ಎಂದರೆ ಆರಂಭದಲ್ಲೇ ಹರ್ಷಲ್ ಪಟೇಲ್​ಗೆ ಮೂರು ಜೀವದಾನ ಲಭಿಸಿತ್ತು. ಅದು ಕೂಡ ಒಂದು ಎಸೆತದಲ್ಲಿ ಎಂಬುದು ಮತ್ತೊಂದು ವಿಶೇಷ.

ಅಂದರೆ ಕೇಶವ್ ಮಹಾರಾಜ್ ಎಸೆದ 9ನೇ ಓವರ್​ನ ನಾಲ್ಕನೇ ಎಸೆತವನ್ನು ಹರ್ಷಲ್ ಪಟೇಲ್ ಮಿಡ್-ವಿಕೆಟ್ ಕಡೆಗೆ ಫ್ಲಿಕ್ ಮಾಡಿದರು. ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ಡ್ವೈನ್ ಪ್ರಿಟೋರಿಯಸ್ ಸುಲಭ ಕ್ಯಾಚ್​ ಅನ್ನು ಕೈಚೆಲ್ಲಿದರು. ಇತ್ತ ಮೊದಲ ಜೀವದಾನ ಪಡೆದ ಹರ್ಷಲ್ ಪಟೇಲ್ ರನ್ ಓಡಲು ಕ್ರೀಸ್ ತೊರೆದರು. ಆದರೆ ಇದೇ ವೇಳೆ ಅಕ್ಷರ್ ಪಟೇಲ್ ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಮತ್ತೊಂದೆಡೆ ಕ್ಯಾಚ್ ಬಿಟ್ಟಿದ್ದ ಪ್ರಿಟೋರಿಯಸ್ ಚೆಂಡನ್ನು ವಿಕೆಟ್​ನತ್ತ ಎಸೆದರು. ಆದರೆ ಪ್ರಿಟೋರಿಯಸ್​ ಕ್ಯಾಚ್ ಹಿಡಿದಿದ್ದಾರೆ ಎಂದು ಭಾವಿಸಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಫೀಲ್ಡರ್ ಕಡೆಗೆ ಧಾವಿಸಿದ್ದರು. ಇದರಿಂದ ಕೀಪರ್​ಗೆ ರನೌಟ್ ಮಾಡುವ ಅವಕಾಶ ಕೂಡ ಕೈತಪ್ಪಿತು.

ಅಷ್ಟರಲ್ಲಿ ರನೌಟ್ ತಪ್ಪಿಸಲು ಹಿಂತಿರುಗಿ ಓಡಿದ ಹರ್ಷಲ್ ಪಟೇಲ್ ಜಾರಿ ಬಿದಿದ್ದರು. ಈ ವೇಳೆ ಚೆಂಡು ಶಾರ್ಟ್ ಥರ್ಡ್ ಮ್ಯಾನ್‌ನತ್ತ ಫೀಲ್ಡಿಂಗ್​ನಲ್ಲಿದ್ದ ವೇಯ್ನ್ ಪಾರ್ನೆಲ್‌ನತ್ತ ಸಾಗಿತು. ಆದರೆ ನಿಧಾನಗತಿಯ ಫೀಲ್ಡಿಂಗ್ ಮಾಡಿದ ಪಾರ್ನೆಲ್ ಚೆಂಡನ್ನು ನಿಧಾನವಾಗಿ ಎಸೆಯುವ ಮೂಲಕ ಹರ್ಷಲ್ ಪಟೇಲ್ ಅವರನ್ನು ಮತ್ತೊಮ್ಮೆ ರನೌಟ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು. ಹೀಗೆ ಒಂದೇ ಎಸೆತದಲ್ಲಿ ಹರ್ಷಲ್ ಪಟೇಲ್ ಅವರನ್ನು ಮೂರು ಬಾರಿ ಔಟ್ ಮಾಡುವ ಅವಕಾಶವನ್ನು ಸೌತ್ ಆಫ್ರಿಕಾ ಆಟಗಾರರು ಕೈಚೆಲ್ಲಿಕೊಂಡರು.

ಇದಾಗ್ಯೂ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವಲ್ಲಿ ಸೌತ್ ಆಫ್ರಿಕಾ ಬೌಲರ್​ಗಳು ಯಶಸ್ವಿಯಾದರು. ಅದರಂತೆ ಅಂತಿಮವಾಗಿ 18.3 ಓವರ್​ಗಳಲ್ಲಿ ಭಾರತ ತಂಡವನ್ನು 170 ರನ್​ಗಳಿಗೆ ಆಲೌಟ್ ಮಾಡಿ 49 ರನ್​ಗಳ ಭರ್ಜರಿ ಜಯ ಸಾಧಿಸಿತು.

 



source https://tv9kannada.com/sports/cricket-news/south-africas-errors-saves-crawling-harshal-patel-thrice-on-one-ball-zp-au50-450981.html

No comments:

Post a Comment