Friday, 7 October 2022

SSCಯಲ್ಲಿ 20 ಸಾವಿರ ಹುದ್ದೆ : ಕನ್ನಡಿಗರಿಗಾಗಿ ಎರಡು ಬೇಡಿಕೆ ಇಟ್ಟ ಕುಮಾರಸ್ವಾಮಿ

ಬೆಂಗಳೂರು: ಹಿಂದಿ ಹೇರಿಕೆ ಸಲ್ಲದು ಎಂಬ ವಿರೋಧದ ನಡುವೆಯೇ ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗದ ಪರೀಕ್ಷೆಯಲ್ಲಿ ಹಿಂದಿ ಹೇರಿಕೆ ಎದ್ದು ಕಾಣುತ್ತಿದೆ. ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿದ್ದ. ಯಾವುದೇ ಸ್ಥಳೀಯ ಭಾಷೆಗೂ ಅವಕಾಶ ನೀಡಿಲ್ಲ.

ಈ ವಿಚಾರವಾಗಿ ಧ್ವನಿ ಎತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ (SSC) 20,000 ಹುದ್ದೆ ಆಯ್ಕೆಗೆ ಹಿಂದಿ-ಇಂಗ್ಲೀಷ್‌ʼನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು. ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?.

ಕೇಂದ್ರ @BJP4India ಸರಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎನ್ನುವ ಕೆಟ್ಟ ಹಠವಿದ್ದಂತೆ ಇದೆ. ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ.

ಒಕ್ಕೂಟ ತತ್ವದಲ್ಲಿ ಆಡಳಿತ ನಡೆಸುವ ಪಕ್ಷಕ್ಕೇ ಒಪ್ಪಿಗೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಹಿಂದಿ ಭಾಷಿಗರನ್ನು ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ತುಂಬುವ ದುಸ್ಸಾಹಸವಷ್ಟೇ ಇದು.

ಈ ವಿಷಯದಲ್ಲಿ ನಮ್ಮ 2 ಬೇಡಿಕೆಗಳಿವೆ.
1.ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು.
2.ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು.

ಈ ಬದಲಾವಣೆ ನಂತರವಷ್ಟೇ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆ ನಡೆಸಬೇಕು. ಕನ್ನಡದಲ್ಲೇ ಪರಿಕ್ಷೆ ನಡೆಸಿದರೆ ಕರ್ನಾಟಕದ ಅನೇಕ ಪ್ರತಿಭಾವಂತ ಯುವಜನರು ಆಯ್ಕೆ ಆಗಲು ಅನುಕೂಲವಾಗುತ್ತದೆ. ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರ ನೇಮಕವಾದರೆ, ಕರ್ನಾಟಕದ ಜನರಿಗೆ ಕನ್ನಡದಲ್ಲಿ ಸೇವೆ ದೊರೆಯುತ್ತದೆ. ತಪ್ಪಿದರೆ, ಕೇಂದ್ರವು ಕನ್ನಡಿಗರ ಆಗ್ರಹಕ್ಕೆ ಗುರಿಯಾಗಬೇಕಾಗುತ್ತದೆ ಎಂದಿದ್ದಾರೆ.

The post SSCಯಲ್ಲಿ 20 ಸಾವಿರ ಹುದ್ದೆ : ಕನ್ನಡಿಗರಿಗಾಗಿ ಎರಡು ಬೇಡಿಕೆ ಇಟ್ಟ ಕುಮಾರಸ್ವಾಮಿ first appeared on Kannada News | suddione.



source https://suddione.com/20-thousand-posts-in-ssc-kumaraswamy-made-two-demands-for-kannadigas/

No comments:

Post a Comment