ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತ (India vs South Africa) ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಆಫ್ರಿಕಾ ನಡುವೆ ಎರಡನೇ ಚುಟುಕು ಕದನ ಏರ್ಪಡಿಸಲಾಗಿದೆ. ಟೀಮ್ ಇಂಡಿಯಾ (Team India) ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಹರಿಣಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಅಲ್ಲದೆ ಇಂದಿನ ಪಂದ್ಯದ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿದ್ದು, ಹೀಗಾಗಿ ಗುವಾಹಟಿಯಲ್ಲಿ (Guwahati) ಹೈವೋಲ್ಟೇಜ್ ಮ್ಯಾಚ್ ಆಗುವುದರಲ್ಲಿ ಅನುಮಾನವಿಲ್ಲ.
ಟೀಮ್ ಇಂಡಿಯಾ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಒಬ್ಬ ಬ್ಯಾಟರ್ ಜವಾಬ್ದಾರಿ ವಹಿಸಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ಆದರೆ, ನಾಯಕ ರೋಹಿತ್ ಶರ್ಮಾ ಬ್ಯಾಟ್ನಿಂದ ಇನ್ನಷ್ಟು ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿದೆ. ಉಪ ನಾಯಕ ಕೆಎಲ್ ರಾಹುಲ್ ಕೂಡ ನಿಧಾನಗತಿಯ ಆಟಕ್ಕೆ ಬ್ರೇಕ್ ಹಾಕಿ ವೇಗದ ಆಟದ ಮೊರೆ ಹೋಗಬೇಕಿದೆ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಸಿಕ್ಕ ಅವಕಾಶವನ್ನು ಬಳಸಬೇಕಿದೆ.
ಭಾರತದ ಬೌಲಿಂಗ್ ಆಫ್ರಿಕಾ ಸರಣಿಯಲ್ಲಿ ಮಾರಕವಾಗಿದೆ. ತಿರುವನಂತಪುರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆರ್ಷದೀಪ್ ಸಿಂಗ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಗಳಿಸಿ ದಕ್ಷಿಣ ಆಫ್ರಿಕಾ ಬಳಗಕ್ಕೆ ಬಲವಾದ ಪೆಟ್ಟುಕೊಟ್ಟಿದ್ದರು. ಇವರ ಜೊತೆಗೆ ಹರ್ಷಲ್ ಪಟೇಲ್, ದೀಪಕ್ ಚಹರ್ ಅವರ ಮೇಲೂ ಕಣ್ಣಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಉಮೇಶ್ ಯಾದವ್ ಅವರಿಗೆ ಅವಕಾಶ ಸಿಗುವುದು ಅನುಮಾನ. ಸಿರಾಜ್ ಉತ್ತಮ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ಗೂ ಆಯ್ಕೆ ಆಗಬಹುದು.
ಇತ್ತ ಆಫ್ರಿಕಾ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ. ಸ್ವತಃ ನಾಯಕ ತೆಂಬಾ ಬವುಮಾ ಅವರೇ ವೈಫಲ್ಯ ಅನುಭವಿಸುತ್ತಿದ್ದಾರೆ. ಸರಣಿ ಗೆಲುವಿನ ಆಸೆ ಜೀವಂತವಾಗುಳಿಯಬೇಕಾದರೆ ದಕ್ಷಿಣ ಆಫ್ರಿಕಾ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕಾಗಿದೆ. ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್ ಹಾಗೂ ಆ್ಯಡನ್ ಮರ್ಕರಂ ಅವರು ಮಿಂಚಿದರೆ ಭಾರತದ ಬೌಲರ್‌ಗಳಿಗೆ ಕಠಿಣವಾಗಬಹುದು. ಅನುಭವಿ ಕಗಿಸೊ ರಬಡಾ, ಲುಂಗಿ ಗಿಡಿ ಹಾಗೂ ಎನ್ರಿಚ್ ನಾಕಿಯಾ ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಕೊಡುಗೆ ನೀಡಬೇಕಿದೆ.
ಈ ಮೈದಾನದಲ್ಲಿ ಭಾರತ ಎರಡು ಪಂದ್ಯಗಳಲ್ಲಷ್ಟೆ ಕಣಕ್ಕಿಳಿದಿತ್ತು. ಅವುಗಳಲ್ಲಿ ಒಂದು ಮಳೆಯಿಂದಾಗಿ ರದ್ದಾಗಿದ್ದರೆ, ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದೆ. ಭಾರತ-ಆಫ್ರಿಕಾ ಕದನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ 6.30ಕ್ಕೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು. ಇದಲ್ಲದೆ, ಪಂದ್ಯದ ಲೈವ್ ನವೀಕರಣಗಳನ್ನು tv9kannada.com ನಲ್ಲಿಯೂ ಓದಬಹುದು.
ಸಂಭಾವ್ಯ ಪ್ಲೇಯಿಂಗ್ XI:
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ತೆಂಬ ಬವುಮಾ (ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಎರ್ನಿಕ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
source https://tv9kannada.com/sports/cricket-news/india-and-south-africa-second-t20i-will-be-played-on-sunday-at-the-barsapara-cricket-stadium-in-guwahati-vb-au48-449491.html
No comments:
Post a Comment