ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಪಂದ್ಯ ಮುಕ್ತಾಯಗೊಂಡಿದ್ದು ರೋಹಿತ್ ಪಡೆ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಇದೀಗ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೈ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಟಿ20 ತಂಡದಲ್ಲಿದ್ದ ಬಹುತೇಕ ಎಲ್ಲ ಸ್ಟಾರ್ ಆಟಗಾರರು ಟಿ20 ವಿಶ್ವಕಪ್ (T20 World Cup) ಇರುವ ಕಾರಣ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಹೀಗಾಗಿ ಶಿಖರ್ ಧವನ್ (Shikhar Dhawan) ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಉಪ ನಾಯಕನಾಗಿದ್ದಾರೆ. ಆದರೆ, ಲಕ್ನೋದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಮೊದಲ ಏಕದಿನ ಪಂದ್ಯ ಆರಂಭವಾಗುವುದೇ ಅನುಮಾನ ಎನ್ನಲಾಗುತ್ತಿದೆ.
ಲಕ್ನೋದಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಗಿದೆ. ಹೆಚ್ಚಾಗಿ ಮೋಡ ಮತ್ತು ತೇವಾಂಶದಿಂದ ಕೂಡಿರುತ್ತದೆ. ದಿನದ ಅವಧಿಯಲ್ಲಿ ತುಂತುರು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗುರುವಾರ ಮಳೆ ಪ್ರಮಾಣ ಶೇ 95ರಷ್ಟಿರುವ ಕಾರಣ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ. ಗಾಳಿಯ ವೇಗ ಗಂಟೆಗೆ 19 ಕಿ.ಮೀ ಆಗಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಸಂಪೂರ್ಣವಾಗಿ ಪಿಚ್ ಅನ್ನು ಕವರ್ ಮಾಡಲಾಗಿತ್ತು. ಇಂದು ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು ಪಂದ್ಯ ಆರಂಭವಾದರೂ ತಡವಾಗಲಿದೆ ಎಂದು ಹೇಳಲಾಗಿದೆ.
ಇನ್ನು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟಿಂಗ್‌ಗೆ ಕೊಂಚ ಅನುಕೂಲವಾಗಿದ್ದು, ಸಮತೋಲನದಲ್ಲಿದೆ. ಪಿಚ್‌ಗಳು ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದೆ ಆದ್ದರಿಂದ ಬೌಲರ್‌ಗಳು ವಿಕೆಟ್‌ನಿಂದ ಗಮನಾರ್ಹ ಪ್ರಮಾಣದ ಬೌನ್ಸ್ ಅನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಇದು ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಸೀಮರ್‌ಗಳು ಆಟದ ಆರಂಭಿಕ ಓವರ್‌ಗಳಲ್ಲಿ ಮೇಲುಗೈ ಸಾಧಿಸಬಹುದು. ಹೀಗಾಗಿ ಮೊದಲು ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ನಿರ್ಧಾರ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 1992 ರಿಂದ ಮುಖಾಮುಖಿಯಾಗುತ್ತಿದ್ದು ಈವರೆಗೆ 87 ಏಕದಿನ ಪಂದ್ಯಗಳನ್ನು ಪರಸ್ಪರ ಆಡಿವೆ. ಈ ಪೈಕಿ ದಕ್ಷಿಣ ಆಫ್ರಿಕಾ ತಂಡ 49 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡಕ್ಕಿಂತ ಮೇಲುಗೈ ಸಾಧಿಸಿದೆ. ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 35 ಪಂದ್ಯಗಳನ್ನು ಗೆದ್ದಿದೆ. ಇನ್ನು 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಕಂಡಿದೆ.
ಭಾರತ ತಂಡ: ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪ ನಾಯಕ), ರಜತ್ ಪಾಟಿದಾರ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್, ಋತುರಾಜ್ ಗಾಯಕ್ವಾಡ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ತೆಂಬಾ ಬವುಮಾ (ನಾಯಕ), ಜಾನ್ನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ಹೆನ್ರಿಚ್ ಕ್ಲಾಸೆನ್, ಲುಂಗಿ ಎನ್‌ಗಿಡಿ, ರೀಜಾ ಹೆಂಡ್ರಿಕ್ಸ್.
source https://tv9kannada.com/sports/cricket-news/india-vs-south-africa-the-weather-report-from-lucknow-is-not-looking-very-rosy-ahead-of-the-first-odi-vb-au48-451336.html
No comments:
Post a Comment