Saturday, 1 October 2022

Babar Azam – Virat Kohli: ಕಿಂಗ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಬಾಬರ್ ಆಜಂ

Babar Azam - Virat Kohli

Babar Azam – Virat Kohli Records:  ಇಂಗ್ಲೆಂಡ್​ ವಿರುದ್ಧದ 6ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ (Babar Azam) ಆಜಂ 59 ಎಸೆತಗಳಲ್ಲಿ 87 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಬಾಬರ್ ಟಿ20 ಕ್ರಿಕೆಟ್​ನಲ್ಲಿ 3 ಸಾವಿರ ರನ್ ಪೂರೈಸಿದರು. ಈ ಸಾಧನೆಯೊಂದಿಗೆ ಪಾಕ್ ನಾಯಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ (Virat Kohli) ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ. ಟಿ20 ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 3 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ರನ್ ಮೆಷಿನ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 81 ಇನಿಂಗ್ಸ್​ಗಳ ಮೂಲಕ ಈ ಮೈಲುಗಲ್ಲು ಸಾಧಿಸಿದ್ದರು. ಇದೀಗ ಪಾಕ್ ತಂಡದ ನಾಯಕ ಬಾಬರ್ ಆಜಂ ಕೂಡ 81 ಇನಿಂಗ್ಸ್​​ ಮೂಲಕವೇ 3 ಸಾವಿರ ರನ್​ ಪೂರೈಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಷ್ಟೇ ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 3 ಸಾವಿರ ರನ್ ಪೂರೈಸಿದ ವಿಶ್ವದ ಐದನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಬಾಬರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ನಾಲ್ವರು ಆಟಗಾರರು ಟಿ20 ಕ್ರಿಕೆಟ್​ನಲ್ಲಿ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಅವರೆಂದರೆ…

  1. ವಿರಾಟ್ ಕೊಹ್ಲಿ- 81 ಇನಿಂಗ್ಸ್​
  2. ಮಾರ್ಟಿನ್ ಗಪ್ಟಿಲ್- 101 ಇನಿಂಗ್ಸ್
  3. ರೋಹಿತ್ ಶರ್ಮಾ- 108 ಇನಿಂಗ್ಸ್
  4. ಪೌಲ್ ಸ್ಟರ್ಲಿಂಗ್- 113 ಇನಿಂಗ್ಸ್

ಈ ಆಟಗಾರರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3 ಸಾವಿರ ರನ್ ಪೂರೈಸಿದ ವಿಶೇಷ ದಾಖಲೆ ಹೊಂದಿದ್ದಾರೆ. ಇದೀಗ ಈ ಪಟ್ಟಿಗೆ 81 ಇನಿಂಗ್ಸ್ ಮೂಲಕ ಐದನೇ ಆಟಗಾರನಾಗಿ ಎಂಟ್ರಿ ಕೊಟ್ಟಿರುವ ಬಾಬರ್ ಆಜಂ ರನ್ ಮೆಷಿನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.

ಇನ್ನು ಇಂಗ್ಲೆಂಡ್​ ವಿರುದ್ಧದ 6ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಾಯಕ ಬಾಬರ್ ಆಜಂರ ಅರ್ಧಶತಕದೊಂದಿಗೆ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಸ್ಫೋಟಕ ಇನಿಂಗ್ಸ್ ಆಡಿದರು. ಕೇವಲ 41 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 13 ಬೌಂಡರಿಯೊಂದಿಗೆ ಅಜೇಯ 88 ರನ್​ ಬಾರಿಸಿದ ಸಾಲ್ಟ್ ತಂಡವನ್ನು 14.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿಸಿದರು.

 



source https://tv9kannada.com/sports/cricket-news/babar-azam-equals-virat-kohlis-record-zp-au50-449123.html

No comments:

Post a Comment