ಬೆಂಗಳೂರು, ಆ.27- ಮುಂದಿನ
ವಿಧಾನಸಭೆ ಚುನಾವಣೆ ವೇಳೆಗೆ ಜೆಡಿಎಸ್‍ನಿಂದ ಸುಮಾರು 7 ರಿಂದ 8 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವ ನಿರೀಕ್ಷೆಗಳಿದೆ. ಹಳೆ ಮೈಸೂರು ಭಾಗದಲ್ಲಿ
ಜೆಡಿಎಸ್ ಪ್ರಬಲ ಪಕ್ಷವಾಗಿದ್ದು, ಕಾಂಗ್ರೆಸ್‍ಗೆ ಪೈಪೋಟಿ
ನೀಡುತ್ತಿದೆ. ಈ ಭಾಗದಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ
ಜೆಡಿಎಸ್ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡುತ್ತಿದೆ.
ಅದರ ಹೊರತಾಗಿ ಕೂಡ ಕೆಲವರು ಕಾಂಗ್ರೆಸ್‍ನತ್ತ ಮುಖ ಮಾಡಿರುವುದು
ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ ಜೆಡಿಎಸ್
ತೊರೆಯುವುದನ್ನು ಖಚಿತಪಡಿಸಿದ್ದು, ಕಾಂಗ್ರೆಸ್
ಸೇರ್ಪಡೆಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿರುವುದಾಗಿ ಅವರು
ಹೇಳಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಎಸ್.ಆರ್.ಶ್ರೀನಿವಾಸ್ ಕೂಡ ಕಾಂಗ್ರೆಸ್
ಜತೆ ಗುರುತಿಸಿಕೊಳ್ಳಲಾರಂಭಿಸಿದ್ದಾರೆ.
ಇದೇ ರೀತಿ ಮೈಸೂರು, ಮಂಡ್ಯ,
ತುಮಕೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ
ಜೆಡಿಎಸ್‍ನ ಪ್ರಮುಖ ನಾಯಕರು ಹಾಗೂ ಶಾಸಕರು ಕಾಂಗ್ರೆಸ್ ಸೇರಲು ಒಲವು ತೋರಿಸಿದ್ದಾರೆ
ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈಗಾಗಲೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ
ಅಭ್ಯರ್ಥಿಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷದಿಂದ
ಹಾಲಿ ಶಾಸಕರು ಬಂದರೆ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕಾದ
ಅನಿವಾರ್ಯತೆ ಎದುರಾಗಲಿದೆ.
ಹೀಗಾಗಿ ಕಾಂಗ್ರೆಸ್ ನಾಯಕರು ಅಳೆದು ತೂಗಿ ನಿರ್ಧಾರ
ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಪರಿಶೀಲನೆ
ನಡೆಸಿ ಅಂಗೀಕಾರ ನೀಡಿದ ಬಳಿಕವಷ್ಟೇ ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ
ಮಾಡಿಕೊಳ್ಳಲಾಗುತ್ತಿದೆ.
ಆದರೆ ಹಾಲಿ ಶಾಸಕರನ್ನು ಸೇರ್ಪಡೆ ಮಾಡಿ ಕೊಳ್ಳುವಾಗ ಕೆಲವು
ನಿಯಮಾವಳಿಗಳನ್ನು ಸಡಿಲ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಗೆದ್ದವರು 5 ವರ್ಷಗಳ ಕಾಲ ಶಾಸಕರಾಗಿ ಸೇವೆ ಮಾಡಿರುವ ಜತೆಗೆ ಪಕ್ಷ
ಸಂಘಟನೆ ಕೂಡ ಮಾಡಿರುತ್ತಾರೆ. ಅವರದೇ ಆದಂತಹ ಅಭಿಮಾನಿ ವರ್ಗ, ಮತದಾರರಿರುತ್ತಾರೆ.
ಹಾಲಿ ಶಾಸಕರ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವಾಗಲಿದೆ. ಆದರೆ
ಕಾಂಗ್ರೆಸ್ ಒಳ ವಲಯದಲ್ಲಿರುವ ಹಿತಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಸಲಹೆಗಳು
ಕೇಳಿ ಬಂದಿವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಬಹಳಷ್ಟು ನಾಯಕರು ವಲಸೆ ಬರುವ ನಿರೀಕ್ಷೆ
ಇದೆ.ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕೂಡ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು
ಜೆಡಿಎಸ್ ನಡುವೆಯೇ ಹೆಚ್ಚು ಪೈಪೋಟಿ ಇದೆ.
No comments:
Post a Comment