Monday 16 August 2021

ನಿಮ್ಮ ಮೊಬೈಲ್ ನಲ್ಲಿರಬೇಕಾದ: ಭಾರತೀಯ ಅಪ್ಲಿಕೇಶನ್ ಗಳ ಸಂಕ್ಷಿಪ್ತ ವಿವರ.

 


ಬೆಂಗಳೂರು: ದೇಶ ಸ್ವಾತಂತ್ರ್ಯ ಪಡೆದು 75ನೇ ವರ್ಷಕ್ಕೆ ನಾವು ಕಾಲಿಟ್ಟಿದ್ದೇವೆ. ಈಗಲೂ ಹಲವು ವಲಯಗಳಲ್ಲಿ ಸ್ವದೇಶಿ ಸ್ವಾವಲಂಬನೆ ಸಾಧ್ಯವಾಗಿಲ್ಲ. ಚೀನಾದಲ್ಲಿ ಉದಯಿಸಿದೆ ಎನ್ನಲಾದ ಕೊರೊನಾ ಸೋಂಕಿನ ಹರಡುವಿಕೆ ಬಳಿಕವಂತೂ ಸ್ವಾವಲಂಬನೆಯ ಕೂಗು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಕೇಳಿಬರುತ್ತಿದೆ. 75ನೇ ಸ್ವಾತಂತ್ರ್ಯೋತ್ಸವ ಆಚರಿಸಿರುವ  ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಇರಬೇಕಾದ ಸ್ವದೇಶಿ ಅಪ್ಲಿಕೇಶನ್‌ಗಳು ಯಾವುವು? ಎಂಬ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.


ಕೂ (Koo)

ಬೆಂಗಳೂರು ಮೂಲದ ಕಂಪನಿ ಬೊಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಕೂ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಜನಪ್ರಿಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿ ಸ್ಥಿರವಾಗಿ ಬೆಳೆದಿದೆ. ಇದು ಜನರು ತಮ್ಮ ಅಭಿಪ್ರಾಯಗಳನ್ನು, ಇಷ್ಟವಾದ ಚಿತ್ರ, ವಿಡಿಯೊ, ಸುದ್ದಿ ಲಿಂಕ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಬಳಕೆದಾರರು ರಾಜಕೀಯ, ಕ್ರೀಡೆ, ಚಲನಚಿತ್ರಗಳು ಮುಂತಾದ ವಿಷಯಗಳ ಕುರಿತಂತೆ ಚರ್ಚಿಸಬಹುದಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಈ ಆಯಪ್ ಲಭ್ಯವಿದೆ. ಹಲವು ಸರ್ಕಾರಿ ಸಚಿವಾಲಯಗಳು ಮತ್ತು ಏಜೆನ್ಸಿಗಳು, ಖಾಸಗಿ ಸಂಸ್ಥೆಗಳು, ಸೆಲೆಬ್ರಿಟಿಗಳು, ಮಾಧ್ಯಮ ಸಂಸ್ಥೆಗಳು ವೇದಿಕೆಯಲ್ಲಿ ಸೇರಿಕೊಂಡಿವೆ. ಇಲ್ಲಿಯವರೆಗೆ, 60 ಲಕ್ಷಕ್ಕೂ ಹೆಚ್ಚು ಜನರು ಅಪ್ಲಿಕೇಶನ್‌ಗೆ ನೋಂದಾಯಿಸಿಕೊಂಡಿದ್ದಾರೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಲಭ್ಯವಿದೆ.


ಕಾಗಜ್ ಸ್ಕ್ಯಾನರ್(Kagaaz Scanner):  ಪಿಡಿಎಫ್ ಮತ್ತು ಡಾಕ್ ಸ್ಕ್ಯಾನ್ ಬಳಕೆದಾರರ ಗೌಪ್ಯತೆ ಸಮಸ್ಯೆ ಕಂಡುಬಂದ ಬಳಿಕ ಕ್ಯಾಮ್‌ಸ್ಕಾನರ್ ಅನ್ನು ನಿಷೇಧಿಸಿದ ನಂತರ, ಕಾಗಜ್ ಸ್ಕ್ಯಾನರ್ ಅಪ್ಲಿಕೇಶನ್ ಹೆಸರುವಾಸಿಯಾಗಿದೆ. ಈ ಆಯಪ್ ಅನ್ನು ಸಾರ್ಟೆಡ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಡಾಕ್ಯುಮೆಂಟ್ ಸ್ಕ್ಯಾನರ್, ಪಿಡಿಎಫ್ ಮೇಕರ್, ಪಿಡಿಎಫ್ ವೀವರ್, ಪಿಡಿಎಫ್ ಎಡಿಟರ್, ಫೈಲ್ ಮ್ಯಾನೇಜರ್ ಮತ್ತು ಕ್ಲೌಡ್ ಸ್ಟೋರೇಜ್, ಎಲ್ಲವೂ ಇದರಲ್ಲಿದೆ. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಯಪ್‌ಗಳಲ್ಲಿ ಒಂದಾಗಿದೆ. ಪ್ರಸ್ತುತ, ಇದು 49 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದೆ. ಅಲ್ಲದೆ, ಇದು 4.5 ಗ್ರಾಹಕರ ರೇಟಿಂಗ್ ಹೊಂದಿದೆ. ಆಯಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಲಭ್ಯವಿದೆ.


ಲಾಜಿಕಲಿ- ಚೆಕ್ ಫೇಕ್ ನ್ಯೂಸ್ ಅಂಡ್ ವೆರಿಫೈ ಫ್ಯಾಕ್ಟ್ಸ್

ಜನರು ಫೇಸ್‌ಬುಕ್, ವಾಟ್ಸಾಪ್ ಮತ್ತು ಇತರ ಸಂವಹನ ಅಪ್ಲಿಕೇಶನ್‌ಗಳ ಮೂಲಕ ಸಂವಹನ ನಡೆಸುವಾಗ ಕೆಲವು ದುಷ್ಕರ್ಮಿಗಳು ಈ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಸುದ್ದಿಗಳನ್ನು ಹರಡುತ್ತಾರೆ. ಜನರ ನಡುವೆ ದ್ವೇಷ ಹುಟ್ಟು ಹಾಕುತ್ತಾರೆ.

ಹಾಗಾಗಿ, ಲಾಜಿಕಲಿ ಆಯಪ್ ಕರೆಂಟ್ ಈವೆಂಟ್ಸ್‌ಗಳ ಕುರಿತು ವ್ಯಾಪಕವಾದ ಪರಿಶೀಲಿಸಬಹುದಾದ ಡೇಟಾವನ್ನು ನೀಡುತ್ತದೆ.


ಫೌ-ಜಿ(FAU-G)

ಈ ಆಯಪ್ ಅನ್ನು ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ್ದು, ಫಿಯರ್‌ಲೆಸ್ ಮತ್ತು ಯುನೈಟೆಡ್-ಗಾರ್ಡ್ಸ್ (ಎಫ್‌ಎಯು-ಜಿ) ಅನ್ನು ಕೆಲವು ತಿಂಗಳ ಹಿಂದೆ ಆರಂಭಿಸಿದೆ..

ಇದು ಭಾರತೀಯ ಸಶಸ್ತ್ರ ಪಡೆಗಳಿಂದ ಸ್ಫೂರ್ತಿ ಪಡೆದಿದೆ. ಈ ಗೇಮ್‌ನಲ್ಲಿ ನಾಯಕನಿಗೆ ತಂಡದಲ್ಲಿ ಆಡಲು ಮತ್ತು ಶತ್ರುಗಳನ್ನು ಎದುರಿಸಲು ರಹಸ್ಯ ಕಾರ್ಯಾಚರಣೆಗಳನ್ನು ನಡೆಸಲು ಐದು ಇತರ ತಂಡಗಳೊಂದಿಗೆ ಸಹಕರಿಸಲು ಅನುವು ಮಾಡಿಕೊಡುತ್ತದೆ. ಈ ಗೇಮ್‌ನಿಂದ ಗಳಿಸಿದ ನಿವ್ವಳ ಆದಾಯದ 20% ಅನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುವ ಭಾರತೀಯ ಗೃಹ ಸಚಿವಾಲಯ ನಡೆಸುತ್ತಿರುವ ಭಾರತ್ ಕೆ ವೀರ್ ಫೌಂಡೇಶನ್‌ಗೆ ದೇಣಿಗೆ ನೀಡಲಾಗುವುದು ಎಂದು ಎನ್‌ ಕೋರ್ ಘೋಷಿಸಿದೆ.


ಶೇರ್‌ಚಾಟ್(ShareChat)

10 ಕೋಟಿಗೂ ಹೆಚ್ಚಿನ ಡೌನ್ಲೋಡ್‌ಗಳೊಂದಿಗೆ, ಇದು ಅತಿದೊಡ್ಡ ದೇಶೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಕನ್ನಡ, ಹಿಂದಿ, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಮಲಯಾಳಂ, ಬಂಗಾಳಿ, ತಮಿಳು, ಒಡಿಯಾ, ಭೋಜ್‌ಪುರಿ, ಅಸ್ಸಾಮಿ, ರಾಜಸ್ಥಾನಿ, ಹರಿಯಾಣ್ವಿ ಮತ್ತು ಉರ್ದು ಸೇರಿದಂತೆ ಭಾರತೀಯ ಬಹುಭಾಷೆಗಳ್ಲಲಿ ಲಭ್ಯವಿದೆ. ಇದು ಚಿಕ್ಕ ವಿಡಿಯೊಗಳನ್ನು ಹಂಚಿಕೊಳ್ಳಲು, 15 ಭಾಷೆಗಳಲ್ಲಿ ಚಾಟ್‌ರೂಮ್‌ಗಳನ್ನು ರಚಿಸಲು, ಕ್ರೀಡೆ, ಚಲನಚಿತ್ರಗಳು, ರಾಜಕೀಯ ಮತ್ತಿತರ ನಿಮ್ಮ ನೆಚ್ಚಿನ ವಿಷಯಗಳ ಬಗ್ಗೆ ಚರ್ಚಿಸಲು ವೇದಿಕೆಯನ್ನು ಒದಗಿಸುತ್ತದೆ.

 



No comments:

Post a Comment