Saturday, 28 August 2021

ಆನ್ಲೈಕನ್ ನೌಕರಿಗೆ ಮಾರುಹೋಗಿ 14 ಲಕ್ಷ ಕಳೆದುಕೊಂಡ ಮಹಿಳೆ..!

 

ಹುಬ್ಬಳ್ಳಿ, ಆ.28- ಸೋಷಿಯಲ್ ಮಿಡಿಯಾದಲ್ಲಿ ಉದ್ಯೋಗಾವಕಾಶ ನೀಡುವ ಜಾಹೀರಾತು ಹರಿಬಿಟ್ಟ ಆನ್‍ಲೈನ್ ವಂಚಕರು ಮಹಿಳೆಯೊಬ್ಬರಿಗೆ ಬರೋಬ್ಬರಿ 14.56 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ವಿನುತಾ ಕಾಲೋನಿ ನಿವಾಸಿ ನಿಖಿತಾ ಗುಂಟಿ ವಂಚನೆಗೊಳಗಾದ ಮಹಿಳೆ.

ಸಾಮಾಜಿಕ ಜಾಲತಾಣದಲ್ಲಿ ವರ್ಕ್ ಫ್ರಂ ಹೋಮ್ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ದಿವ್ಯಾ ಎಂಬ ಹೆಸರಿನ ಯುವತಿ ಜಾಹೀರಾತು ಹಾಕಿದ್ದರು. ಅಲ್ಲದೇ, ಆನ್‍ಲೈನ್ ಲಿಂಕ್ ಸಹಿತ ಕಳುಹಿಸಿದ್ದಳು. ಬಳಿಕ ಅರ್ಜುನ ಹೆಸರಿನ ವ್ಯಕ್ತಿ ಮಹಿಳೆಯ ಜತೆಗೆ ವಾಟ್ಸ್‍ಆಯಪ್ ಮತ್ತು ಟೆಲಿಗ್ರಾಂ ಆಯಪ್‍ನಿಂದ ಚಾಟ್ ಮಾಡಿದ್ದಾನೆ. ಅಲ್ಲದೆ ದಿವ್ಯಾ ನೀಡಿದ ಲಿಂಕ್ ಒತ್ತುವಂತೆ ಹೇಳಿದ್ದಾನೆ.

ನಂತರ ಗೋಲ್ಡï ಪೇ ಆಯಪ್‍ನಿಂದ ರಿಚಾರ್ಜ್ ಮಾಡಲು ಹೇಳಿ, 100 ರೂ. ರಿಚಾರ್ಜ್ ಮಾಡಿಸಿಕೊಂಡು ಅದೇ ಆಯಪ್ ಮೂಲಕ ಮಹಿಳೆಗೆ 200 ರೂ. ಮರಳಿಸಿದ್ದಾರೆ. ಹೀಗೆಯೇ 3 ಸಾವಿರ ರೂ.ಗೆ 3400 ರೂ., 20 ಸಾವಿರಕ್ಕೆ 24 ಸಾವಿರ ರೂ.ವನ್ನು ಮಹಿಳೆಗೆ ಮರಳಿಸಿ ನಂಬಿಸಿದ್ದನು. ಇದೇ ರೀತಿ ಆಯಪ್‍ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ನಿಖಿತಾಳ ವಿಶ್ವಾಸ ಗಳಿಸಿದ್ದನು.

ಇದನ್ನು ನಂಬಿದ ನಿಖಿತಾ ಆನ್‍ಲೈನ್ ಮೂಲಕ ಆರೋಪಿ ಬ್ಯಾಂಕ್ ಖಾತೆಗೆ 1.91 ಲಕ್ಷ ರೂ. ಹಾಗೂ 12.65 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಇವರಿಗೆ ಹಣ ಮಾತ್ರ ಮರಳಿ ಬಂದಿಲ್ಲ. ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment