ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡುವ ಕೆಲಸ ಭರದಿಂದ ಸಾಗುತ್ತಿದೆ.
·
ಭೌತಿಕ
ತರಗತಿಗಳ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ
·
ಕೊರೊನಾ
ನಿಯಂತ್ರಣ ವಿಷಯದಲ್ಲಿ ರಾಜ್ಯ ಸರ್ಕಾರ ಎಲ್ಲಿಯೂ ಮೈಮರೆತಿಲ್ಲ
·
ಲಸಿಕೆ
ಕಾರ್ಯ ಮುಗಿಯುತ್ತಿದ್ದಂತೆ ಕಾಲೇಜು ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು
ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಲಸಿಕೀಕರಣ ಕಾರ್ಯ ಮುಗಿದ ಬಳಿಕ
ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ
ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ ವ್ಯಾಪ್ತಿಯ ಕಾಲೇಜುಗಳ ಆರಂಭದ ಬಗ್ಗೆ
ಯಾವುದೇ ಚರ್ಚೆ ನಡೆಸಿಲ್ಲ. ಭೌತಿಕ ತರಗತಿಗಳ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು
ಮಾಡಿಕೊಳ್ಳಲಾಗುತ್ತಿದೆ. ಆಯಾ ವಿಶ್ವವಿದ್ಯಾಲಯಗಳ ವೇಳಾಪಟ್ಟಿಯ
ಪ್ರಕಾರವೇ ನಿಗದಿತ ದಿನಾಂಕಗಳಂದು ಪರೀಕ್ಷೆಗಳು ನಡೆಯುತ್ತವೆ. ಈಗಾಗಲೇ ವಿದ್ಯಾರ್ಥಿಗಳು,
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡುವ ಕೆಲಸ ಭರದಿಂದ ಸಾಗುತ್ತಿದೆ. ಲಸಿಕೆ ಕಾರ್ಯ
ಮುಗಿಯುತ್ತಿದ್ದಂತೆ ಕಾಲೇಜು ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸದ್ಯ ಕಾಲೇಜುಗಳನ್ನು
ತೆರೆಯಲು ನಮ್ಮ ಮುಂದೆ ಅನೇಕ ಸವಾಲುಗಳಿರುವುದು ನಿಜ. ಆದರೆ ಎಷ್ಟು ದಿನವೆಂದು ಹೀಗೆ ಇರಲು
ಸಾಧ್ಯ..? ಜೀವನ ಸಾಗುತ್ತಲೇ ಇರಬೇಕು. ಸುರಕ್ಷತೆಯ ಜೊತೆ
ಜೊತೆಗೆ ಜೀವನವೂ ಸಾಗುತ್ತಿರಬೇಕು. ಈ ನಿಟ್ಟಿನಲ್ಲಿ ಲಸಿಕೆ ಮಾತ್ರವೇ ನಮ್ಮ ಮುಂದಿರುವ
ಪರಿಹಾರವೆಂದು ಡಿಸಿಎಂ ಅಶ್ವತ್ಥನಾರಾಯಣ್ ಹೇಳಿದ್ದಾರೆ.
3ನೇ
ಅಲೆಗೆ ಅಗತ್ಯ ಸಿದ್ಧತೆ
ಕೊರೊನಾ ನಿಯಂತ್ರಣ
ವಿಷಯದಲ್ಲಿ ರಾಜ್ಯ ಸರ್ಕಾರ ಎಲ್ಲಿಯೂ ಮೈಮರೆತಿಲ್ಲ. ಒಂದೆಡೆ ಲಸಿಕೀಕರಣದ ವೇಗ ಹೆಚ್ಚಿಸುತ್ತಲೇ, ಇನ್ನೊಂದೆಡೆ ಆರೋಗ್ಯ ವ್ಯವಸ್ಥೆಯ
ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ರಾಜ್ಯಾದ್ಯಂತ ಕೊರೊನಾ ಸೋಂಕಿತರಿಗಾಗಿಯೇ 6 ಸಾವಿರ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಪ್ರಮಾಣಲ್ಲಿ ವೈದ್ಯರು,
ನರ್ಸುಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಗ್ರೂಪ್ ಡಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 2 ಸಾವಿರ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಕೋವಿಡ್-19
3ನೇ ಅಲೆಗೆ ಬೇಕಾದ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು
ಅವರು ಹೇಳಿದ್ದಾರೆ.
ಜನಸಂಖ್ಯೆ ನಿಯಂತ್ರಣ ಅಗತ್ಯ
ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ
ಜಾರಿಗೆ ತಂದಿರುವ ‘ಇಬ್ಬರು ಮಕ್ಕಳ ನೀತಿʼಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ್, ‘ದೇಶದ ಅಭಿವೃದ್ಧಿಗೆ ಪೂರಕವಾಗಿ ಜನಸಂಖ್ಯೆ ಇರಬೇಕು.
ಹೀಗಾಗಿ ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದೆ. ಜನಸಂಖ್ಯೆ
ಪ್ರಮಾಣ ತಡೆಯುವ ನಿಟ್ಟಿನಲ್ಲಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ’ ಎಂದು ಹೇಳಿದರು.
No comments:
Post a Comment