ಪ್ರವಾಸ, ಪ್ರಯಾಣದ
ತಂಗುದಾಣಗಳ ಪರಿಕಲ್ಪನೆ ಬಂದಾಗ ಏರ್ಬಿಎನ್ಬಿ ಬಾಡಿಗೆ ನಿವಾಸಗಳು ಸದ್ಯ ಹೆಚ್ಚು
ಪ್ರಚಲಿತದಲ್ಲಿವೆ. ಪ್ರಯಾಣಿಕರ ಮನಸೆಳೆವ ಸ್ಥಳ, ಆಕರ್ಷಕ ಶೈಲಿ ಮತ್ತು
ತನ್ನ ವಿಭಿನ್ನತೆಯಿಂದ ಹೆಚ್ಚು ಜನರು ಏರ್ಬಿಎನ್ಬಿಯನ್ನೇ ಹುಡುಕುತ್ತಾರೆ. ಇದೇ ಕಾರಣಕ್ಕೆ
ಉಳಿದ ಬಾಡಿಗೆ ನಿವಾಸಗಳಿಗಿಂತ ಇದು ವಿಶಿಷ್ಟವಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಈಗ
ಇದೇ ಏರ್ಬಿಎನ್ಬಿ ಒಂದು ವಿಭಿನ್ನ ಅಪಾರ್ಟ್ಮೆಂಟ್ ಬಗ್ಗೆ ವಿವರಿಸಿದೆ. ಒಂದು ವೇಳೆ
ನೀವೇನಾದರೂ ಇತಿಹಾಸ ಪ್ರಿಯರಾಗಿದ್ದರೆ, ಸಾಹಸ ಮನೋಭಾವ, ಧೈರ್ಯಶಾಲಿಯಾಗಿದ್ದು ಥ್ರಿಲ್ಲಿಂಗ್ ಅನುಭವಕ್ಕಾಗಿ ಹುಡುಕಾಟ ನಡೆಸಿದ್ದರೆ ಇಲ್ಲಿದೆ
ಒಂದು ಅವಕಾಶ.
ಯುಕೆ ಯಾರ್ಕ್ನಲ್ಲಿರುವ 600 ವರ್ಷ
ಹಳೆಯ ಅಪಾರ್ಟ್ಮೆಂಟ್ ಖಂಡಿತ ನಿಮಗೆ ಸೂಕ್ತವಾದ ಆಯ್ಕೆ. ಏಕೆಂದರೆ
ಇದು ಭಯ, ಆತಂಕವನ್ನು ಉಂಟು ಮಾಡುವ ಅತಿಮಾನುಷ ಶಕ್ತಿಯಿಂದ
ಆವೃತ್ತವಾಗಿದೆ. ನೀವೇನಾದರೂ ದೆವ್ವದ ಅನುಭವವನ್ನು ಹೊಂದಲು ಬಯಸಿದರೆ ಈ ಅಪಾರ್ಟ್ಮೆಂಟ್ನಲ್ಲಿ
ತಂಗಬಹುದು.
ನೀವು ಇಂಗ್ಲೆಂಡ್ಗೆ ಪ್ರವಾಸಕ್ಕೆ ಹೊರಟರೆ ಅಲ್ಲಿರುವ
ಕ್ಯಾಥೆಡ್ರಲ್ ಸಿಟಿಯ 'ಟ್ರೆಂಬ್ಲಿಂಗ್ ಮ್ಯಾಡ್ನೆಸ್ ಅಪಾರ್ಟ್ಮೆಂಟ್'ಗಳಿಗೆ ಭೇಟಿ
ನೀಡಬಹುದು. ಏಕೆಂದರೆ ಅಲ್ಲಿರುವ ನಿವಾಸಗಳಲ್ಲಿ ದೆವ್ವಗಳು ಸಾಕಷ್ಟು ಆತಂಕವನ್ನುಂಟು ಮಾಡಿವೆ
ಅನ್ನೋ ಮಾತಿದೆ. ಅದರಲ್ಲೂ ನಗರ ಕೇಂದ್ರದಲ್ಲಿರುವ ಪಬ್‌ನ ಹಿಂದಿದೆ 'ದಿ
ಹೌಸ್ ಆಫ್ ಟ್ರೆಂಬ್ಲಿಂಗ್ ಮ್ಯಾಡ್ನೆಸ್, ಸ್ಟೋನ್‌ಗೇಟ್' ಅಪಾರ್ಟ್ಮೆಂಟ್.
ಓಲ್ಡ್ ಗ್ಯಾಲರಿ ಮತ್ತು ದಿ
ಹಾಂಟೆಡ್ ಮ್ಯಾನ್ಷನ್ ಈ ಎರಡು ಲಕ್ಷುರಿ ಅಪಾರ್ಟ್ಮೆಂಟ್ಗಳು ಯಾರ್ಕ್ ಮಿನಿಸ್ಟರ್ ಕುರಿತು
ಉತ್ತಮ ನೋಟವನ್ನು ನೀಡುತ್ತದೆ. ನಗರದ ಹೃದಯಭಾಗದಲ್ಲಿರುವ ಅದ್ಧೂರಿ ಕ್ಯಾಥೆಡ್ರಲ್ ದೊಡ್ಡ
ಗೋಡೆಗಳಿಂದ ಆವೃತ್ತವಾಗಿದ್ದು, ಒಂದು ಸಾಮಾನ್ಯ ಮನೆಯ ಅವಶೇಷದ ಮೇಲೆ ಕ್ರಿ.ಶ 1180 ರಲ್ಲಿ
ನಿರ್ಮಿಸಲಾಗಿದೆ.
ಈ ವಿಷಯ ಕೇಳುತ್ತಿದ್ದಷ್ಟೂ ಕುತೂಹಲ ಕೆರಳುತ್ತದೆ! ಇತಿಹಾಸ
ಮತ್ತು ವಾಸ್ತುಶಿಲ್ಪದ ಆಸಕ್ತರಿಗೆ ಇದು ರಸದೌತಣವೇ ಸರಿ. ಇಲ್ಲಿನ ಮ್ಯಾಡ್‌ನೆಸ್ ಚೇಂಬರ್
ಸುಮಾರು 650
ವರ್ಷಗಳಷ್ಟು ಹಳೆಯದಾಗಿದೆ, ಮರದ ಚೌಕಟ್ಟಿನ ಮಧ್ಯಕಾಲೀನ ರಚನೆಯಿಂದ
ಮಾಡಲ್ಪಟ್ಟಿದೆ. ಈ ಅಪಾರ್ಟ್ಮೆಂಟ್ನ ಅಧಿಕೃತ ವೆಬ್ಸೈಟ್ ಹೇಳುವ ಪ್ರಕಾರ ಇದರ ಇತಿಹಾಸ
ಯಾರಿಗೂ ತಿಳಿದಿಲ್ಲವಂತೆ. ಆದರೆ ಇದು ರಹಸ್ಯದ ತಾಣವಾಗಿದೆ.
ಇದಕ್ಕೆ ಪೂರಕವೆನ್ನುವಂತೆ ಈ ಹಿಂದೆ ಈ
ಅಪಾರ್ಟ್ಮೆಂಟ್ಗಳಲ್ಲಿ ವಾಸವಿದ್ದ ಹಲವಾರು ಅತಿಥಿಗಳು ಭೂತದ ಚೇಷ್ಟೆಗೆ ಭಯಭೀತರಾಗಿದ್ದ
ಪ್ರಕರಣ ಮಿರರ್ನಲ್ಲಿ ವರದಿಯಾಗಿದೆ.
ಒಂದು ಕಿಂಗ್ ಸೈಜ್ ಬೆಡ್ ಈ ಕೋಣೆಯಲ್ಲಿದೆ. 4 ಜನರು ಇಲ್ಲಿ
ತಂಗಬಹುದಾಗಿದೆ. ಜೊತೆಗೆ ಒಂದು ಡಬಲ್ ಸೋಫಾ, ಎರಡೂ
ಅಪಾರ್ಟ್ಮೆಂಟ್ಗಳು ಎರಡು ಮಹಡಿಗಳಲ್ಲಿವೆ. ಅಷ್ಟೇ ಅಲ್ಲದೇ ಆಧುನಿಕ ಸೌಲಭ್ಯಗಳಾದ ವೈಫೈ,
ವಾಶಿಂಗ್ ಮೆಷಿನ್, ಟಿವಿ ಮತ್ತು ಫ್ರಿಡ್ಜ್
ಸೌಲಭ್ಯಗಳನ್ನು ಒಳಗೊಂಡಿದೆ.
ಅಷ್ಟೇ ಅಲ್ಲದೇ ಪರ್ಸನಲ್ ಕೇರ್ ಉತ್ಪನ್ನಗಳಾದ ಟವೆಲ್, ಸ್ನಾನಗೃಹಗಳು
ಮತ್ತು ಸುಖನಿದ್ರೆಯ ಹೊದಿಕೆಗಳನ್ನು ನೀಡಲಾಗುತ್ತದೆ. ಈ ಅಪಾರ್ಟ್ಮೆಂಟ್ಗಳಲ್ಲಿ ಉಳಿಯಲು ಒಂದು
ದಿನದ ಮೊತ್ತ 110 ಯೂರೋ (ರೂ 11000) ರಿಂದ 220 ಯುರೋ (20000ರೂ) ಆಗಿರುತ್ತದೆ.
ರೆಟ್ರೋ ನೋಟವನ್ನು ಹೊಂದಿರುವ ಓಲ್ಡ್ ಗ್ಯಾಲರಿ ನೆಲ ಅಂತಸ್ತಿನ
ಸ್ಟುಡಿಯೋ ಫ್ಲಾಟ್ ಆಗಿದೆ. ಇಲ್ಲಿ ಗೇಮ್ಸ್, ಪುಸ್ತಕ, ಸಿನಿಮಾದ
ವೀಕ್ಷಣೆಯೂ ಲಭ್ಯವಿದೆ. ಈ ಭೂತದ ಅಪಾರ್ಟ್ಮೆಂಟ್ನಲ್ಲಿ ಪ್ಲೇ ಸ್ಟೇಷನ್, ಬೋರ್ಡ್ ಗೇಮ್ಸ್, ಪುಸ್ತಕ ಮತ್ತು ಕಂಪ್ಯೂಟರ್ ಇದ್ದು
ಮನರಂಜನೆಗೆ ಕೊರತೆ ಇಲ್ಲ. ಹೊರಗಿನ ಅಂಗಳದ ಮೌನ ಮನಸ್ಸಿಗೆ ಸಾಕಷ್ಟು ನೆಮ್ಮದಿಯನ್ನು ನೀಡುತ್ತದೆ.
ಇಲ್ಲಿ ಸಾಕು ಪ್ರಾಣಿಗಳಿಗೆ ಅವಕಾಶವಿಲ್ಲ.
ಭಯದ ಜೊತೆಗೆ ಲಕ್ಷುರಿ ಜೀವನಕ್ಕಂತೂ ಕೊರತೆಯಿಲ್ಲ !
No comments:
Post a Comment