ನೆಲ್ಲೂರು: ಇದೀಗ ದೇಶ ಮಾತ್ರವಲ್ಲದೇ ವಿದೇಶಿಗರ ಕಣ್ಣೂ ಆಂಧ್ರಪ್ರದೇಶದ ಕೃಷ್ಣಂಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯನವರ ಮೇಲೆ ನೆಟ್ಟಿದೆ. ಇದಾಗಲೇ ಆಂಧ್ರ ಹೈಕೋರ್ಟ್ ಹಾಗೂ ಸರ್ಕಾರದಿಂದಲೂ ಕರೊನಾ ಔಷಧ ವಿತರಣೆಗೆ ಗ್ರೀಸ್ ಸಿಗ್ನಲ್ ಸಿಕ್ಕಿದ್ದು, ಕೃಷ್ಣಂಪಟ್ಟಣಂನತ್ತ ಜನರು ದೌದಾಡಿಸುತ್ತಿದ್ದಾರೆ.
ಜನರು ಮುಗಿಬೀಳುತ್ತಿರುವ ಕಾರಣ, ಇದಾಗಲೇ ಇಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಡುವೆಯೇ ಜೀವಬೆದರಿಕೆಯಿಂದಾಗಿ ಆನಂದಯ್ಯ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಅಲ್ಲಿಯೇ ಅವರು ಔಷಧ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಆಂಧ್ರಪ್ರದೇಶದ ಪ್ರತಿ ಜಿಲ್ಲೆಗೂ ಆರಂಭಿಕವಾಗಿ ವಿತರಿಸಲು 5000 ಪ್ಯಾಕ್‌ಗಳನ್ನು ಸಿದ್ಧಪಡಿಸಿರುವ ಆನಂದಯ್ಯನವರು, ಈ ಕುರಿತು ಮುಖ್ಯಮಂತ್ರಿ ಜಗನ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರತಿ ಜಿಲ್ಲೆಗೆ ಐದು ಸಾವಿರ ಪ್ಯಾಕ್ ಕೊಡಲು ಎಲ್ಲವೂ ಸಿದ್ಧವಾಗಿದೆ. ಇದನ್ನು ಸರ್ಕಾರದ ಮೂಲಕ ವಿತರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಅವರು ಪತ್ರದಲ್ಲಿ ಕೋರಿಕೊಂಡಿದ್ದಾರೆ.
ಇದರ ನಡುವೆಯೇ ಇವರ ಔಷಧವನ್ನು ಸ್ವಯಂಸೇವಕರು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇದು ಸದ್ಯ ಆಂಧ್ರಪ್ರದೇಶದಲ್ಲಿ ಮಾತ್ರ ನಡೆಯುತ್ತಿದೆ. ಈ ಔಷಧಕ್ಕೆ ಇಷ್ಟು ಪರಿಯಲ್ಲಿ ಡಿಮಾಂಡ್ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರದ ಸರ್ಕಾರ, ವಿವಿಧ ಭಾಗಗಳಲ್ಲಿಯೂ ಈ ಔಷಧ ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಟಿಟಿಡಿ (ತಿರುಪತಿ ತಿರುಮಲ ಟ್ರಸ್ಟ್) ಮೂಲಕ ಇದನ್ನು ವಿತರಣೆ ಮಾಡಲು ಸಾಧ್ಯವೇ ಎಂದು ನೋಡುತ್ತಿದೆ. ದೇಶಾದ್ಯಂತ ಟಿಟಿಡಿಯ ಘಟಕಗಳು ಹಾಗೂ ಟಿಕೆಟ್ ಬುಕಿಂಗ್ ಕೇಂದ್ರಗಳು ಇರುವ ಹಿನ್ನೆಲೆಯಲ್ಲಿ ಇದರ ಮೂಲಕ ಪೂರೈಕೆಯ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ.
ಆನಂದಯ್ಯವರು ಕಣ್ಣಿಗೆ ನೀಡುತ್ತಿರುವ ಔಷಧವನ್ನು ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣ, ಇದು ಕರೊನಾ ಹಾಗೂ ಅದರಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಎದುರಿಸುತ್ತದೆಯೇ ಇಲ್ಲವೇ ಎಂಬ ಬಗ್ಗೆ ತಜ್ಞರು ಇದುವರೆಗೆ ವರದಿ ನೀಡಿಲ್ಲ. ಏತನ್ಮಧ್ಯೆ ಇವರ ಔಷಧದ ಕುರಿತಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ.
No comments:
Post a Comment