ನವದೆಹಲಿ, ಜೂನ್ 03: ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರಗಳ ಮಾನ್ಯತೆಯನ್ನು ಜೀವಿತಾವಧಿವರೆಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ.
ಗುರುವಾರ ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಬೋಧನಾ ವೃತ್ತಿಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇಚ್ಛಿಸುವವರಿಗೆ ಈ ಕ್ರಮ ಉದ್ಯೋಗಾವಕಾಶ ರೂಪಿಸುವಲ್ಲಿ ಉತ್ತಮ ಹೆಜ್ಜೆಯಾಗಲಿದೆ" ಎಂದು ಹೇಳಿಕೊಂಡಿದ್ದಾರೆ.2011ರಿಂದ ಜಾರಿಯಾಗುವಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರಗಳ ಮಾನ್ಯತೆಯನ್ನು ಏಳು ವರ್ಷಗಳಿಂದ ಜೀವಿತಾವಧಿವರೆಗೂ ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮ 2011ರಿಂದಲೇ ಪೂರ್ವಾನ್ವಯವಾಗಲಿದ್ದು, 2011ಕ್ಕೆ ಯಾರು ಮಾನ್ಯತೆ ಕಳೆದುಕೊಂಡಿದ್ದಾರೋ ಅವರೂ ಶಿಕ್ಷಕ ಕೆಲಸಕ್ಕೆ ಅರ್ಹರಾಗಲಿದ್ದಾರೆ. ಅಂಥ ಅಭ್ಯರ್ಥಿಗಳಿಗೆ ನೂತನ ಟಿಇಟಿ ಪ್ರಮಾಣ ಪತ್ರ ನೀಡಲು ಕೇಂದ್ರಾಡಳಿತ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
ಎನ್ ಸಿಟಿಇ 2011ರಲ್ಲಿ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಟಿಇಟಿ ಪರೀಕ್ಷೆಗಳಲ್ಲಿ ಪಾಸಾದ ವರ್ಷದಿಂದ ಏಳು ವರ್ಷದವರೆಗೆ ಮಾನ್ಯತೆ ನೀಡಲಾಗಿತ್ತು. ಇದೀಗ ಈ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ ಜೀವಿತಾವಧಿವರೆಗೂ ಮಾನ್ಯತೆಯನ್ನು ವಿಸ್ತರಿಸಲಾಗಿದೆ.
ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕ ಹೊಂದಲು ಇದು ಅರ್ಹತಾ ಪರೀಕ್ಷೆಯಾಗಿದ್ದು, ಪ್ರಮಾಣ ಪತ್ರ ಅಗತ್ಯವಾಗಿದೆ.

No comments:
Post a Comment