Tuesday, 8 June 2021

ಮೆಸ್ಸಿ ದಾಖಲೆ ಮುರಿದ ಭಾರತದ ಫುಟ್ಬಾಲ್ ತಾರೆ ಸುನೀಲ್ ಛೇಟ್ರಿ.

ದೋಹಾ: ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್​ ಛೇಟ್ರಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಸಕ್ರಿಯ ಇರುವ ಆಟಗಾರರ ಪೈಕಿ 2ನೇ ಅತ್ಯಧಿಕ ಗೋಲು ಗಳಿಕೆಯ ದಾಖಲೆ ಬರೆದಿದ್ದಾರೆ. ಅರ್ಜೆಂಟೀನಾದ ತಾರೆ ಲಿಯೋನೆಲ್​ ಮೆಸ್ಸಿ ಅವರ 72 ಗೋಲು ಗಳಿಕೆಯ ಸಾಧನೆಯನ್ನು ಹಿಮ್ಮೆಟ್ಟಿಸುವ ಮೂಲಕ ಛೇಟ್ರಿ ಈ ಸಾಧನೆ ಮಾಡಿದ್ದಾರೆ.

36 ವರ್ಷದ ಸುನೀಲ್​ ಛೇಟ್ರಿ ಸೋಮವಾರ ರಾತ್ರಿ ಬಾಂಗ್ಲಾದೇಶ ವಿರುದ್ಧ ನಡೆದ 2022ರ ಫಿಫಾ ವಿಶ್ವಕಪ್​ ಮತ್ತು 2023ರ ಎಎಫ್​​ಸಿ ಏಷ್ಯನ್​ ಕಪ್​ ಅರ್ಹತಾ ಸುತ್ತಿನ ಪಂದ್ಯದ ವೇಳೆ 2 ಗೋಲು ಸಿಡಿಸುವ ಮೂಲಕ ಮೆಸ್ಸಿ ಅವರನ್ನು ಹಿಂದಿಕ್ಕಿದರು. ಈ ಪಂದ್ಯಕ್ಕೆ ಮುನ್ನ ಮೆಸ್ಸಿ ಜತೆಗೆ ಸಮಬಲದಲ್ಲಿದ್ದ ಛೇಟ್ರಿ ಇದೀಗ ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಗೋಲು ಗಳಿಕೆಯನ್ನು 74ಕ್ಕೆ ವಿಸ್ತರಿಸಿಕೊಂಡಿದ್ದಾರೆ.


ಹಾಲಿ ಆಟಗಾರರ ಪೈಕಿ ಪೋರ್ಚುಗಲ್​ನ ಸೂಪರ್​ ಸ್ಟಾರ್​ ಕ್ರಿಶ್ಚಿಯಾನೊ ರೊನಾಲ್ಡೊ 103 ಗೋಲು ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಸ್ಟಾರ್​ ಛೇಟ್ರಿ 73 ಗೋಲು ಗಳಿಸಿರುವ ಯುಎಇಯ ಅಲಿ ಮಬ್​ಕೌಟ್​ ಅವರನ್ನೂ ಹಿಂದಿಕ್ಕಿದ್ದಾರೆ. ಇದರಿಂದ ಮೆಸ್ಸಿ ಈಗ 4ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಛೇಟ್ರಿ ದಾಖಲೆಯ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್​ ಅರ್ಹತಾ ಸುತ್ತಿನಲ್ಲಿ 6 ವರ್ಷಗಳ ಬಳಿಕ ಗೆಲುವು ದಾಖಲಿಸಿದ್ದು, 20 ವರ್ಷಗಳ ಬಳಿಕ ವಿದೇಶದಲ್ಲಿ ಗೆಲುವಿನ ಸಾಧನೆಯನ್ನೂ ಮಾಡಿದೆ. ಛೇಟ್ರಿ ಈಗ ಫುಟ್​ಬಾಲ್​ನ ಸಾರ್ವಕಾಲಿಕ ಗರಿಷ್ಠ ಗೋಲು ಸ್ಕೋರರ್​ಗಳ ಟಾಪ್​ 10 ಪಟ್ಟಿ ಪ್ರವೇಶದಿಂದಲೂ ಕೇವಲ ಒಂದು ಗೋಲು ಹಿಂದಿದ್ದಾರೆ. ಸದ್ಯ ತಲಾ 75 ಗೋಲು ಗಳಿಸಿರುವ ಕುವೇಟ್​ನ ಬಶರ್​ ಅಬ್ದುಲ್ಲ, ಹಂಗೆರಿಯ ಸ್ಯಾಂಡರ್​ ಕೋಕ್​ಸಿಸ್​ ಮತ್ತು ಜಪಾನ್​ನ ಕುನಿಶಿಗೆ 10ನೇ ಸ್ಥಾನದಲ್ಲಿ ನೆಲೆಸಿದ್ದಾರೆ.


ಭಾರತ ಪರ 3 ದಶಕಗಳಲ್ಲಿ ಗೋಲು ಬಾರಿಸಿದ ಮೊದಲ ಆಟಗಾರರೆಂಬ ವಿಶೇಷ ದಾಖಲೆಯನ್ನೂ ಛೇಟ್ರಿ ಬರೆದಿದ್ದಾರೆ. ಅವರು 2007ರಲ್ಲಿ ಭಾರತ ಪರ ಮೊದಲ ಗೋಲು ಬಾರಿಸಿದ್ದರು. ಇದೀಗ 2000, 2010 ಮತ್ತು 2020ರ ದಶಕದಲ್ಲಿ ಗೋಲು ಬಾರಿಸಿದ ದಾಖಲೆ ನಿಮಿರ್ಸಿದ್ದಾರೆ.

No comments:

Post a Comment