ಮುಂಬೈ: ಮಹಾರಾಷ್ಟ್ರ ರಾಜಧಾನಿ ವಾಣಿಜ್ಯನಗರಿ ಮುಂಬೈ ಮತ್ತು ನೆರೆಹೊರೆ ಪ್ರದೇಶಗಳಿಗೆ ಬುಧವಾರ ಮುಂಗಾರು ಮಳೆ ಆರಂಭವಾಗಿದೆ. ಇದರ ಪರಿಣಾಮ ಇಂದು ನಸುಕಿನ ಜಾವದಿಂದಲೇ ಧಾರಾಕಾರ ಮಳೆಯಾಗುತ್ತಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ-ಜನಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ.
ವಾಹನಗಳು ಅರ್ಧ ಮಟ್ಟದವರೆಗೆ ನೀರಿನಲ್ಲಿ ಮುಳುಗಿ ಹೋಗುತ್ತಿವೆ. ಇದು ಮುಂಬೈನ ಗಾಂಧಿ ಮಾರುಕಟ್ಟೆಯಲ್ಲಿನ ದೃಶ್ಯವಾಗಿದೆ. ರೈಲ್ವೆ ಹಳಿಗಳು ನೀರಿನಲ್ಲಿ ಮುಳುಗಿಹೋಗಿದೆ. ಸಿಯೊನ್ ರೈಲ್ವೆ ನಿಲ್ದಾಣ ಮತ್ತು ಜಿಟಿಬಿ ನಗರ ರೈಲ್ವೆ ನಿಲ್ದಾಣದ ಮಧ್ಯೆ ರೈಲ್ವೆ ಹಳಿಗಳು ಮುಳುಗಿಹೋಗಿರುವ ದೃಶ್ಯಗಳನ್ನು ಕಾಣಬಹುದು.
ಮುಂಬೈಯ ಕುರ್ಲಾ ಮತ್ತು ಸಿಎಸ್ ಎಂಟಿ ಮಧ್ಯೆ ಸ್ಥಳೀಯ ರೈಲು ಸೇವೆಗಳನ್ನು ಧಾರಾಕಾರ ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ನೀರು ಕಡಿಮೆಯಾದ ನಂತರ ರೈಲು ಸಂಚಾರ ಪುನಾರಂಭವಾಗಲಿದೆ. ಧಾರಾಕಾರ ಮಳೆಯಿಂದಾಗಿ ಮುಂಬೈಯ ಕಿಂಗ್ಸ್ ಸರ್ಕಲ್ ನಲ್ಲಿ ಹಲವು ಕಡೆ ವಾಹನಗಳು ಮುಳುಗಿದ್ದು ಪ್ರಯಾಣಿಕರಿಗೆ ತೀವ್ರ ಅಡಚಣೆಯುಂಟಾಗಿದೆ.
ಚುನಭಟ್ಟಿ ರೈಲ್ವೆ ನಿಲ್ದಾಣದ ಬಳಿ ಭಾರಿ ಮಳೆ ಮತ್ತು ನೀರು ಹರಿಯುವುದರಿಂದ, ಹಾರ್ಬರ್ ಮಾರ್ಗದಲ್ಲಿ ರೈಲು ಸೇವೆಗಳನ್ನು ಬಿ / ಡಬ್ಲ್ಯೂ ಸಿಎಸ್‌ಎಂಟಿ- ವಾಶಿ ಬೆಳಿಗ್ಗೆ 10.20 ರಿಂದ ಸ್ಥಗಿತಗೊಳಿಸಲಾಗಿದೆ. ಸಿಯಾನ್-ಕುರ್ಲಾ ವಿಭಾಗದಲ್ಲಿ ನೀರು ಹರಿಯುವುದರಿಂದ ಮುಖ್ಯ ಮಾರ್ಗದಲ್ಲಿ, ಸಿಎಸ್‌ಎಂಟಿ- ಥಾಣೆಯಿಂದ ಬೆಳಿಗ್ಗೆ 10.20 ರಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮುಂಬೈಯ ಹಲವು ರಸ್ತೆಗಳಲ್ಲಿ ಇಂದು ಬೆಳಗ್ಗೆಯಿಂದ ಸಂಚಾರ ದಟ್ಟಣೆಯುಂಟಾಗಿದೆ. ಹಲವು ಕಡೆಗಳಲ್ಲಿ ಬಸ್ ಸಂಚಾರದ ಮಾರ್ಗಗಳನ್ನು ಬದಲಿಸಲಾಗಿದೆ.
ಅರಬ್ಬೀ ಸಮುದ್ರದಲ್ಲಿ ಧಾರಾಕಾರ ಮಳೆಯಿಂದಾಗಿ ಅಪರಾಹ್ನ ಹೊತ್ತಿಗೆ 4 ಮೀಟರ್ ವರೆಗೆ ನೀರು ತುಂಬುವ ಲಕ್ಷಣಗಳಿವೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಮುಂಬೈಗೆ ಮಾನ್ಸೂನ್ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಂಬೈ ಕಚೇರಿಯ ಮುಖ್ಯಸ್ಥ ಡಾ ಜಯಂತ ಸರ್ಕಾರ್ ತಿಳಿಸಿದ್ದಾರೆ.
ನೈರುತ್ಯ ಮುಂಗಾರು ಇಂದು ಮುಂಬೈ ಥಾಣೆ ಪಾಲ್ಘರ್ ಮೇಲೆ ಆಗಮನವಾಗಿದೆ. ಮಾನ್ಸೂನ್ ಇಂದು ಎಫ್‌ಆರ್ ಎಂ ವಲ್ಸಾದ್ (ಗುಜರಾತ್), ಮಹಾರಾಷ್ಟ್ರದ ನಾಗ್ಪುರ ಮತ್ತು ನಂತರ ಭದ್ರಾಚಲಂ ಟುನಿ ಹಾದುಹೋಗುತ್ತದೆ. ಮುಂದಿನ 2-3 ದಿನಗಳಲ್ಲಿ ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಮಾನ್ಸೂನ್ ಪ್ರಾರಂಭವಾಗಲಿದೆ ಎಂದಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ, ಕೊಲಾಬಾ ವೀಕ್ಷಣಾಲಯದಲ್ಲಿ (ದಕ್ಷಿಣ ಮುಂಬೈನ ಪ್ರತಿನಿಧಿ) 77.4 ಮಿ.ಮೀ ಮಳೆಯಾಗಿದೆ, ಸ್ಯಾಂಟಕ್ರೂಜ್ ವೀಕ್ಷಣಾಲಯ (ಉಪನಗರಗಳ ಪ್ರತಿನಿಧಿ) ಕಳೆದ 24 ಗಂಟೆಗಳಲ್ಲಿ 59.6 ಮಿ.ಮೀ ಮಳೆಯಾಗಿದೆ. ಮುಂಬೈ ಮಹಾನಗರ ಪಾಲಿಕೆ ಪ್ರಕಾರ, ದ್ವೀಪ ನಗರ, ಪೂರ್ವ ಉಪನಗರಗಳು ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 48.49 ಮಿಮೀ, 66.99 ಮಿಮೀ ಮತ್ತು 48.99 ಮಿಮೀ ಇದುವರೆಗೆ ಮಳೆಯಾಗಿದೆ.
ಹವಾಮಾನ ಇಲಾಖೆ ಮುನ್ನೆಚ್ಚರಿಕೆ: ಮುಂದಿನ ನಾಲ್ಕೈದು ದಿನಗಳವರೆಗೆ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
No comments:
Post a Comment