ಮೊಳಕಾಲ್ಮುರು: ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ವಿಚಾರ ಅಪ್ರಸ್ತುತ. ರಾಜ್ಯದ ಯಾವುದೇ ಬಿಜೆಪಿ ಶಾಸಕರಿಗೂ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಂಸದ ಎ.ನಾರಾಯಣ ಸ್ವಾಮಿ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರ ಕಾರ್ಮಿಕರಿಗೆ ಮತ್ತು ಆಟೊ ಚಾಲಕರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಪುರಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಇಳಿಯ ವಯಸ್ಸು ಮತ್ತು ಕೋವಿಡ್ ಸಂಕಷ್ಟದಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ಅಲೆಗಳನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಸರ್ಕಾರದ ಅವಧಿ ಮುಗಿಯುವ ತನಕ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಇದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ
ಎಂದು ಹೇಳಿದರು.
ಸ್ಥಳೀಯ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕ್ರೀಡಾಂಗಣಕ್ಕೆ ಶೀಘ್ರ ಮಂಜೂರಾತಿ ಸಿಗಲಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಂಜೂರಾಗಿದ್ದು, ಲಾಕ್‌ಡೌನ್ ತೆರವು ನಂತರ ಶಂಕುಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ನಂತರ ಪಿಯು ಕಾಲೇಜಿನಲ್ಲಿ ಸ್ಥಾಪಿಸಿರುವ ಕೋವಿಡ್ ಕೇಂದ್ರಕ್ಕೆ, ಕಿತ್ತೂರು ರಾಣಿ ಚನ್ನಮ್ಮ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಲಕ್ಷ್ಮಣ, ಉಪಾಧ್ಯಕ್ಷೆ ಶುಭಾ, ಮುಖ್ಯಾಧಿಕಾರಿ ಕಾಂತರಾಜ್ ಮತ್ತು ಸದಸ್ಯರು, ಮಂಡಲ ಬಿಜೆಪಿ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಹಾಗೂ ಮುಖಂಡರು ಇದ್ದರು
No comments:
Post a Comment