Sunday, 11 December 2022

AUS vs WI: ಆಸೀಸ್​ಗೆ 419 ರನ್​ಗಳ ಭಾರಿ ಜಯ; ಕೆರಿಬಿಯನ್ ದೈತ್ಯರಿಗೆ ವೈಟ್ ​ವಾಶ್ ಮುಖಭಂಗ..!

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಮಣಿಸಿದ್ದ ಆಸೀಸ್ ಪಡೆ (Australia beat West Indies), ಅಡಿಲೇಡ್​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲೂ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ಮೊದಲ ಟೆಸ್ಟ್​ನಲ್ಲಿ 164 ರನ್​ಗಳಿಂದ ಸೋಲೊಪ್ಪಿಕೊಂಡಿದ್ದ ಕೆರಿಬಿಯನ್ ಪಡೆ, ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ (Pink Ball Test) ಬರೋಬ್ಬರಿ 419 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಅಡಿಲೇಡ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಪರ 175 ರನ್ ಬಾರಿಸಿದ ಟ್ರಾವಿಸ್ ಹೆಡ್ (Travis Head) ಈ ಪಂದ್ಯದ ಗೆಲುವಿನ ಹೀರೋ ಎನಿಸಿಕೊಂಡರೆ, ಇಡೀ ಸರಣಿಯಲ್ಲಿ ಶತಕಗಳ ಸರಮಾಲೆ ಕಟ್ಟಿದ ಮಾರ್ನಸ್ ಲಬುಶೇನ್ (marnus labuschagne) ಸರಣಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಅಡಿಲೇಡ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಎದುರು 497 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ, ಈ ರನ್‌ಗಳ ಪರ್ವತವನ್ನು ಏರುವ ಸಾಹಸ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 77 ರನ್ ಗಳಿಸುವಷ್ಟರಲ್ಲಿಯೇ ಸುಸ್ತಾಯಿತು. ಈ ರೀತಿಯಾಗಿ 5 ದಿನಗಳ ಟೆಸ್ಟ್ ಪಂದ್ಯ ನಾಲ್ಕನೇ ದಿನದಲ್ಲಿ ಮುಕ್ತಾಯಗೊಂಡಿತು.

ಕೇವಲ 39 ರನ್​ಗಳಿಗೆ 6 ವಿಕೆಟ್ ಪತನ

ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಇಂದು ಎರಡನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ನಷ್ಟಕ್ಕೆ 38 ರನ್​ಗಳಿಂದ ತನ್ನ ಇನ್ನಿಂಗ್ಸ್ ಮುಂದುವರೆಸಿದ ವೆಸ್ಟ್ ಇಂಡೀಸ್, ಕೇವಲ 39 ರನ್​ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್‌ ಕಳೆದುಕೊಂಡು 419 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಭಾರತೀಯ ಒಲಿಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಿಟಿ ಉಷಾ..!

ಮೊದಲ ಇನ್ನಿಂಗ್ಸ್​ನಲ್ಲಿ 511 ರನ್ ಬಾರಿಸಿದ ಆಸ್ಟ್ರೇಲಿಯಾ

ಇದಕ್ಕೂ ಮೊದಲು, ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 511 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಲ್ಲಿ ಮಾರ್ನಸ್ ಲಬುಶೇನ್ 163 ರನ್​ಗಳ ಬಿಗ್ ಇನ್ನಿಂಗ್ಸ್ ಆಡಿದರೆ, ಅವರೊಂದಿಗೆ ಟ್ರಾವಿಸ್ ಹೆಡ್ ಕೂಡ 175 ರನ್ ಪ್ರಮುಖ ಕೊಡುಗೆ ನೀಡಿದರು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 214 ರನ್​ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಗರಿಷ್ಠ 3 ವಿಕೆಟ್ ಪಡೆದರು. ವಿಂಡೀಸ್ ತಂಡವನ್ನು ಅಲ್ಪ ರನ್​ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 297 ರನ್​ಗಳ ಮುನ್ನಡೆ ಪಡೆಯಿತು.

77 ರನ್‌ಗಳಿಗೆ ವಿಂಡೀಸ್ ಆಲೌಟ್

ಬೃಹತ್ ಮುನ್ನಡೆಯಿದ್ದರೂ, ಫಾಲೋ ಆನ್ ನೀಡುವ ಬದಲು ಎರಡನೇ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾ 6 ವಿಕೆಟ್​ ನಷ್ಟಕ್ಕೆ 199 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ವೆಸ್ಟ್ ಇಂಡೀಸ್​ಗೆ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ನಲ್ಲಿ 199 ರನ್​ ಸೇರಿಸುವ ಮೂಲಕ 497 ರನ್​ಗಳ ಟಾರ್ಗೆಟ್ ನೀಡಿತು. ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಮೂರನೇ ದಿನದಾಟದಲ್ಲಿಯೇ 4 ವಿಕೆಟ್ ಕಳೆದುಕೊಂಡು ಕೇವಲ 38 ರನ್​ಗಳಿಸಿತು. ಬಳಿಕ 4ನೇ ದಿನದಾಟವನ್ನು ಆರಂಭಿಸಿದ ವಿಂಡೀಸ್ ಪಡೆ ಇನ್ನುಳಿದ 6 ವಿಕೆಟ್‌ಗಳನ್ನು ದಿನದಾಟದ ಮೊದಲ ಸೆಷನ್‌ನಲ್ಲಿಯೇ ಕಳೆದುಕೊಂಡು, ಬೃಹತ್ ಸೋಲು ಅನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಮಿಚಲ್ ಸ್ಟಾರ್ಕ್, ಮೈಕಲ್ ನಾಸರ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ 3 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



source https://tv9kannada.com/sports/cricket-news/australia-beat-west-indies-by-419-runs-in-adelaide-pink-ball-test-and-win-test-series-psr-au14-484324.html

No comments:

Post a Comment