ಬೆಂಗಳೂರು, ಜೂನ್ 2: ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಗೊಳಿಸಿದ್ದರೂ, ಕೊರೊನಾ ಸೋಂಕು ಪ್ರಮಾಣ ನಿರೀಕ್ಷಿಸಿದಷ್ಟು ಕಡಿಮೆಯಾಗಿಲ್ಲ.
ಈ ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಿಸಬೇಕೋ, ಬೇಡವೋ ಎಂಬ ವಿಚಾರವಾಗಿ ಇಂದು (ಬುಧವಾರ) ಸಿಎಂ ಯಡಿಯೂರಪ್ಪ ಮಹತ್ವದ ಸಭೆ ಕರೆದಿದ್ದಾರೆ.
ಕರ್ನಾಟಕದ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಈಗಾಗಲೇ ಕರ್ನಾಟಕದಲ್ಲಿ ಲಾಕ್‌ಡೌನ್‌ನ್ನು ವಿಸ್ತರಣೆ ಮಾಡುವಂತೆ ವರದಿ ನೀಡಿದೆ. ಅದಾಗ್ಯೂ, ಲಾಕ್‌ಡೌನ್ ಅಥವಾ ಅನ್‌ಲಾಕ್ ಮಾಡುವ ವಿಚಾರವಾಗಿ ಸಭೆ ಕರೆಯಲಾಗಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ 4.30ಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ಕೋವಿಡ್ ತಜ್ಞರು, ವೈದ್ಯರು ಪಾಲ್ಗೊಳ್ಳಲಿದ್ದಾರೆ. ಇವರಿಂದ ಯಾವಾಗ ಅನ್‌ಲಾಕ್ ಮಾಡಿದರೆ ಒಳ್ಳೆಯದು ಎಂಬ ಬಗ್ಗೆ ಸಿಎಂ ಮಾಹಿತಿ ಪಡೆಯಲಿದ್ದಾರೆ.
ನಂತರ ಬುಧವಾರ ಸಂಜೆ 6ಕ್ಕೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಲಿದ್ದು, ತಜ್ಞರ ಸಭೆಯ ಸಲಹೆಗಳ ಕುರಿತು ಸಿಎಂ ಮರು ಚರ್ಚೆ ಮಾಡಲಿರುವರು. ಸಚಿವರು ಹಾಗೂ ಅಧಿಕಾರಿಗಳ ಅಭಿಪ್ರಾಯ ಆಲಿಸಿ ಅಂತಿಮ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಬುಧವಾರ ಅಥವಾ ಗುರುವಾರ ತೆಗೆದುಕೊಳ್ಳಲಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್‌ನ್ನು ಮತ್ತೊಂದು ವಾರ ಮುಂದುವರಿಸಬೇಕಾ? ಅಥವಾ ಲಾಕ್‌ಡೌನ್ ಕ್ಲಿಯರ್ ಮಾಡಿ ಹಂತ ಹಂತವಾಗಿ ಅನ್‌ಲಾಕ್ ಮಾಡಬೇಕಾ? ಎಂಬುದರ ಬಗ್ಗೆ ಸಿಎಂ ಇನ್ನೂ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ.
ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಲಾಕ್‌ಡೌನ್ ವಿಸ್ತರಣೆಗೆ ಆಗ್ರಹಿಸಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಲಾಕ್‌ಡೌನ್ ಮುಂದುವರಿಸಲು ಒತ್ತಾಯಿಸಿದ್ದು, ಈ ಕುರಿತು ಸಿಎಂ ಯಡಿಯೂರಪ್ಪ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

No comments:
Post a Comment