ನಾವು ಜೀವಿಸುತ್ತಿರುವ ಈ ಭೂಮಿ ಹಲವು ಜೀವರಾಶಿಗಳನ್ನು ತನ್ನ
ಮಡಿಲಿನಲ್ಲಿರಿಸಿಕೊಂಡು ಸಾಕಿ ಸಲಹುತ್ತಿದೆ. ಪ್ರತಿಯೊಂದು ಜೀವರಾಶಿಗಳಿಗೆ ಆಹಾರ, ಆಶ್ರಯ,
ಗಾಳಿ ಮತ್ತು ಬೆಳಕನ್ನು ಒದಗಿಸುತ್ತಾ, ಮಾನವನ ಎಲ್ಲಾ
ಅಗತ್ಯಗಳನ್ನು ಪೂರೈಸುತ್ತಲೇ ಇದೆ.
ನಾವು ನಮ್ಮ ಜೀವನದಲ್ಲಿ ಪ್ರಕೃತಿಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದೇವೆ.
ಪರಿಸರವಿಲ್ಲದೆ ಈ ಗ್ರಹದಲ್ಲಿ ನಮ್ಮ ಜೀವನವನ್ನು ಊಹಿಸಿಕೊಳ್ಳಲು
ಸಾಧ್ಯವಿಲ್ಲ. ಆದರೆ ಮಾನವನ ಹೊಸ ಹೊಸ ಆವಿಷ್ಕಾರಗಳು, ಇಂದು ಪರಿಸರದಲ್ಲಿ ಹಲವು ವ್ಯತಿರಿಕ್ತ ಪರಿಣಾಮಗಳನ್ನು
ತಂದೊಡ್ಡಿದೆ. ಇದರಿಂದ ಪ್ರಕೃತಿಯ ವಿನಾಶಕ್ಕೆ ನಾವುಗಳೇ ನಾಂದಿ ಹಾಡಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಮಹತ್ವ ನಮಗೆ ಹೆಚ್ಚಿನ ಅರಿವಾಗುತ್ತಿದೆ. ಹಾಗಾಗಿ ನಾವು ಜನರಲ್ಲಿ, ಜಾಗೃತಿ
ಮೂಡಿಸುವ ಅಗತ್ಯವಿದೆ. ನಮ್ಮ ಮಕ್ಕಳು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದವರು.
ಅವರಿಗೂ ಪರಿಸರದ ಕಾಳಜಿ ಅರ್ಥ ಮಾಡಿಸುವ ಪ್ರಾಮುಖ್ಯತೆ ಹೆಚ್ಚಿದೆ. ಹಾಗಾಗಿ ಈ ದಿನವನ್ನು ವಿಶ್ವದ ಎಲ್ಲೆಡೆ ಆಚರಿಸಲಾಗುತ್ತದೆ.
ವಿಶ್ವ ಪರಿಸರ ದಿನ ಇತಿಹಾಸ: ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5
ರಂದು ಆಚರಿಸಲಾಗುತ್ತದೆ. ಪರಿಸರವನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ
ಮೂಡಿಸಲು 1974 ರಲ್ಲಿ ಅಮೇರಿಕದ ಸ್ಪೋಕಾನೆ ನಗರದಲ್ಲಿ ಈ ದಿನವನ್ನು
ಮೊದಲು ಆಚರಿಸಲಾಯಿತು.ಪರಿಸರದ ಕುರಿತಾದ ಮೊದಲ ಪ್ರಮುಖ ಸಮ್ಮೇಳನವನ್ನು 1972 ರಲ್ಲಿ ಜೂನ್ 5 ರಿಂದ 16ರ ವರೆಗೆ
ಸ್ಟಾಕ್ಹೋಮ್ (ಸ್ವೀಡನ್) ನಲ್ಲಿ ನಡೆಸಲಾಯಿತು. ಅದೇ ವರ್ಷದ ಡಿಸೆಂಬರ್ 15 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 5 ಅನ್ನು
ವಿಶ್ವ ಪರಿಸರ ದಿನವೆಂದು ಅಂಗೀಕರಿಸಲಾಯಿತು. 1974 ರಲ್ಲಿ ಮೊದಲ ವಿಶ್ವ
ಪರಿಸರ ದಿನವನ್ನು ಆಚರಿಸಲಾಯಿತು.
ಪ್ರತಿ ವರ್ಷ ಈ ದಿನದಂದು ಜನರು ಸಾಮಾನ್ಯವಾಗಿ ಸಸಿಗಳನ್ನು ನೆಡುತ್ತಾರೆ. ವಿವಿಧೆಡೆ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಜನರು ತಮ್ಮ ಮನೆಗಳಲ್ಲಿ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವುದರಿಂದ, ವಿಶ್ವ ಪರಿಸರ ದಿನಾಚರಣೆಯು ವಿಭಿನ್ನವಾಗಿರುತ್ತದೆ. ಜನರು ಹೊರಗೆ ಹೋಗುವ ಬದಲಾಗಿ ಪರಿಸರ ದಿನವನ್ನು ಕ್ರಿಯಾತ್ಮಕವಾಗಿಯೂ ಆಚರಿಸಬಹುದು. ಆನ್‌ಲೈನ್ ಮೂಲಕ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.
2021 ವಿಶ್ವ ಪರಿಸರ ದಿನ ಥೀಮ್: . ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆಗೆ ಒಂದು
ನಿರ್ಧಿಷ್ಟ ವಿಷಯವಿದೆ. "ಪರಿಸರ ವ್ಯವಸ್ಥೆ ಪುನಃಸ್ಥಾಪನೆ". ಅಂದರೆ ಪರಿಸರ
ವ್ಯವಸ್ಥೆಯನ್ನು ಪುನಃಸ್ಥಾಪಿಸುವುದು, ಸಕ್ರಿಯವಾಗಿ ಮರಗಳನ್ನು ನೆಡುವುದು,
ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದು, ಹೆಚ್ಚುತ್ತಿರುವ
ಮಾಲಿನ್ಯವನ್ನು ಕಡಿಮೆ ಮಾಡುವುದು, ಪರಿಸರ ವ್ಯವಸ್ಥೆಯ ಮೇಲಿನ
ಒತ್ತಡಗಳನ್ನು ತೆಗೆದುಹಾಕುವುದರ ಮೂಲಕ ಪರಿಸರವನ್ನು ರಕ್ಷಿಸಿಕೊಳ್ಳುವುದು.
ವಿಶ್ವ ಪರಿಸರ ದಿನದ ವಿಧಾನ: ಸರ್ಕಾರಿ ಕಛೇರಿಗಳು
, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಪ್ರಸಿದ್ಧ ವ್ಯಕ್ತಿಗಳು,
ಸೆಲೆಬ್ರಿಟಿಗಳು ಹಾಗೂ ನಾಗರಿಕರು ಸಸಿಗಳನ್ನು ನೆಡುವುದರ ಮೂಲಕ, ಪರಿಸರ ಸಮಸ್ಯೆಗಳ ಕುರಿತಾದ ಜಾಗೃತಿ ಕಾರ್ಯಕ್ರಮಗಳ್ಳಲ್ಲಿ ತೊಡಗುತ್ತಾರೆ.
ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ ಮತ್ತು ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ಪರಿಸರ ಊಳಿಸಿ-ಬೆಳಸಿ.
-ವನಿತಾ ಜಿ ಓ





No comments:
Post a Comment