ಬೆಂಗಳೂರು : ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದಿನಾಂಕ 15-06-2021 ರಿಂದ ಪ್ರಾರಂಭಿಸಲು ಸೂಚಿಸಲಾಗಿತ್ತು. ಪ್ರಸ್ತುತ ಕೋವಿಡ್-19 ಅನ್ನು ನಿಯಂತ್ರಿಸಲು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿರುವ ಹಿನ್ನಲೆಯಲ್ಲಿ ದಿನಾಂಕ 14-06-2021ರವರೆಗೆ ಶಾಲಾ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಇರುವುದಿಲ್ಲ.
ಪ್ರಸ್ತುತ ತಲೆದೋರಿರುವ ಈ ಪ್ರತಿಕೂಲ ಸನ್ನಿವೇಶ ಮುಂದುವರೆಯುವ ಸಾಧ್ಯತೆಯನ್ನು ಗಮದಲ್ಲಿ ಇರಿಸಿಕೊಂಡು ತಾತ್ಕಾಲಿಕವಾಗಿ ದಿನಾಂಕ 01-07-2021 ರಿಂದ ಅನುಷ್ಠಾನಕ್ಕೆ ಬರುವಂತೆ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ, ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ತಿಳಿಸಿದೆ.
ಶಾಲಾ ಕರ್ತವ್ಯದ ದಿನಗಳು
- ಮೊದಲ ಅವಧಿ - ದಿನಾಂಕ 01-07-2021 ರಿಂದ ದಿನಾಂಕ 09-10-2021
- ಎರಡನೇ ಅವಧಿ - ದಿನಾಂಕ 21-10-2021 ರಿಂದ ದಿನಾಂಕ 30-04-2022
ರಜಾ ದಿನಗಳು
- ದಸರಾ ರಜೆ - ದಿನಾಂಕ 10-10-2021 ರಿಂದ ದಿನಾಂಕ 20-10-2021
- ಬೇಸಿಗೆ ರಜೆ - ದಿನಾಂಕ 01-05-2022 ರಿಂದ ದಿನಾಂಕ 28-05-2022
ಈ ಮೇಲ್ಕಂಡಂತೆ 2021-22ನೇ ಶೈಕ್ಷಣಿಕ ಸಾಲಿನ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಾಲಾ ಕರ್ತವ್ಯದ ಅವಧಿಯನ್ನು ಮತ್ತು ರಜಾ ಅವಧಿಯನ್ನು ಪರಿಗಣಿಸಿ ನಿಗದಿಪಡಿಸಲಾಗಿರುವ ಮಾಸಿಕ ಶಾಲಾ ಕರ್ತವ್ಯದ ( ಬೋಧನಾ) ದಿನಗಳು ಮತ್ತು ರಜಾ ದಿನಗಳ ವಿವರಗಳು ಈ ಕೆಳಕಂಡಂತಿದೆ.
ಅಂದಹಾಗೇ ಮಕ್ಕಳ ಶಾಲಾ ಪ್ರವೇಶಾತಿಯನ್ನು, ದಾಖಲಾತಿಯನ್ನು ಜೂನ್.15ರಿಂದ ಆರಂಭಿಸಿ, ದಿನಾಂಕ 31-08-2021ರೊಳಗೆ ಮುಕ್ತಾಯಗೊಳಿಸುವಂತೆ ಸೂಚಿಸಿದೆ. ಅಲ್ಲದೇ ಶೈಕ್ಷಣಿಕ ಚಟುವಟಿಕೆಯನ್ನು ಪರ್ಯಾಯ ಮಾಧ್ಯಮಗಳಆದಂತ ಸಂವೇದ, ಬಾನುಲಿ, ಆನ್ ಲೈನ್ ಮತ್ತು ಇತರ ಆಫ್ ಲೈನ್ ಮಾರ್ಗಗಳ ಕಲಿಕೆ ಮುಖಾಂತರ ನಡೆಸುವಂತೆ ತಿಳಿಸಿದೆ.
ಪ್ರಾಥಮಿಕ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ದಿನಾಂಕ 29-04-2022 ರಂದು ಹಾಗೂ ಪ್ರೌಢ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ದಿನಾಂಕ 30-04-2022ರಂದು ನಡೆಸಬೇಕೆಂದು ಸೂಚಿಸಿದೆ.
ಇನ್ನೂ ರಾಷ್ಟ್ರೀಯ ಹಬ್ಬಗಳಾದಂತ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ನಾಡ ಹಬ್ಬವಾದ ಕನ್ನಡ ರಾಜ್ಯೋತ್ಸವ ಮುಂತಾದವುಗಳನ್ನು ಆಯಾ ದಿನಗಳಂದು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು. ಕ್ರಿಸ್ ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪ ನಿರ್ದೇಶಕರರಿಗೆ ಸಲ್ಲಿಸಿದಲ್ಲಿ, ಈ ಬಗ್ಗೆ ಆಯಾ ಉಪ ನಿರ್ದೇಶಕರು ಪರಿಶೀಲಿಸಿ, ನಿರ್ಧರಿಸುವುದು. ಡಿಸೆಂಬರ್ ನಲ್ಲಿ ನೀಡುವ ಕ್ರಿಸ್ ಮಸ್ ರಜಾ ಅವಧಿಯನ್ನು ಅಕ್ಟೋಬರ್ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ, ಸರಿದೂಗಿಸಿಕೊಳ್ಳಲು ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ತಿಳಿಸಿದೆ.


No comments:
Post a Comment