Friday, 14 October 2022

Virat Kohli: ಅಭ್ಯಾಸ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಮೈದಾನಕ್ಕಿಳಿದ ಕೊಹ್ಲಿ, ರೋಹಿತ್: ಯಾಕೆ ಗೊತ್ತೇ?

Virat Kohli and Rohit Sharma

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗಾಗಿ (T20I World Cup) ಕಾಂಗರೂಗಳ ನಾಡಿಗೆ ತೆರಳಿರುವ ಭಾರತಕ್ಕೆ ಒಂದರ ಮೇಲೊಂದು ಆಘಾತ ಉಂಟಾಗುತ್ತಿದೆ. ಇಂಜುರಿಯಿಂದ ಬಳಲುತ್ತಿರುವ ಆಟಗಾರರು ಒಂದು ಕಡೆಯಾದರೆ ಇದೀಗ ಅಭ್ಯಾಸ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಆಡಿದ ದ್ವಿತೀಯ ವಾರ್ಮ್​-ಅಪ್ ಮ್ಯಾಚ್​ ಟೀಮ್ ಇಂಡಿಯಾ (India vs Western Australia) 36 ರನ್​ಗಳ ಸೋಲುಂಡಿತು. ನಾಯಕನ ಜವಾಬ್ದಾರಿ ಹೊತ್ತಿದ್ದ ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿ ಗೆಲುವಿಗೆ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ವೈಫಲ್ಯ ಅನುಭವಿಸಿದರು. ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ ಭಾರತ ತಂಡದ ಬಗ್ಗೆ ಕೋಚ್ ಹಾಗೂ ಮ್ಯಾನೇಜ್ಮೆಂಟ್​ಗೆ ತಲೆನೋವು ಶುರುವಾಗಿದೆ. ಇದರ ನಡುವೆ ಪ್ರ್ಯಾಕ್ಟೀಸ್​ ಮ್ಯಾಚ್​ನಲ್ಲಿ ಸೋತ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮೈದಾನಕ್ಕಿಳಿದು ಬ್ಯಾಟಿಂಗ್ ಅಭ್ಯಾಸ ಶುರು ಮಾಡಿದ್ದಾರೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿರಲಿಲ್ಲ. ಎರಡನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಮಾಡಲಿಲ್ಲ. ಕೇವಲ ಫೀಲ್ಡಿಂಗ್ ಮಾತ್ರ ಮಾಡಿದರು. ಆದರೆ, ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ರೋಹಿತ್ ಬ್ಯಾಟ್ ಹಿಡಿದುಕೊಂಡು ಮೈದಾನಕ್ಕೆ ಬಂದು ಸತತವಾಗಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ಭಾರತ ತಂಡವು ಎದುರಾಳಿ ಪಶ್ಚಿಮ ಆಸ್ಟ್ರೇಲಿಯಾಗೆ ಬ್ಯಾಟಿಂಗ್​ಗೆ ಆಹ್ವಾನಿಸಿತು. ಕ್ರೀಸ್​ಗೆ ಇಳಿದ ನಿಕ್ ಹಾಬ್ಸನ್ ಮತ್ತು ಡಿ’ಆರ್ಸಿ ಶಾರ್ಟ್ ಅವರ ಅರ್ಧಶತಕಗಳ ನೆರವಿನಿಂದ ಪಶ್ಚಿಮ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಆರ್. ಅಶ್ವಿನ್ ಮೂರು ವಿಕೆಟ್‌ ಪಡೆದು ಮಿಂಚಿದರೆ, ಹರ್ಷಲ್ ಪಟೇಲ್ 2 ಹಾಗೂ ಅರ್ಶ್​ದೀಪ್ ಸಿಂಗ್ 1 ವಿಕೆಟ್ ಕಿತ್ತರು.

169 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲಿ ನಿಧಾನಗತಿ ಆಟ ಆಡಿದ್ದು ಕಷ್ಟಕ್ಕೆ ಸಿಲುಕಿತು. ಚೆಂಡು ಹೆಚ್ಚಾಗಿ ಟರ್ನ್ ಆಗುತ್ತಿದ್ದ ಕಾರಣ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಎಚ್ಚರಿಕೆ ಆಟ ಆಡಲು ಆರಂಭಿಸಿದರು. ಆದರೆ, ಹೆಚ್ಚು ಹೊತ್ತು ನಿಲ್ಲದ ಪಂತ್ 9 ರನ್​​ಗೆ ಪೆವಿಲಿಯಮ್ ತೆರಳಿದರು. ಸಿಕ್ಕ ಅವಕಾಶವನ್ನು ದೀಪಕ್ ಹೂಡ 6 ಉಪಯೋಗಿಸಿಕೊಳ್ಳಲಿಲ್ಲ. ಹಾರ್ದಿಕ್ ಪಾಂಡ್ಯ ಎರಡು ಸಿಕ್ಸ್​ ಸಿಡಿಸಿ 9 ಎಸೆತಗಳಲ್ಲಿ 17 ರನ್​ ಗಳಿಸಿ ನಿರ್ಗಮಿಸಿದರು. ಆಲ್‌ರೌಂಡರ್ ಅಕ್ಷರ್ ಪಟೇಲ್ ಆಟ2 ರನ್​ಗೆ ಅಂತ್ಯವಾಯಿತು. ಫಿನಿಶರ್ ದಿನೇಶ್ ಕಾರ್ತಿಕ್ (10) ಆಟ ಕೂಡ ನಡೆಯಲಿಲ್ಲ.

ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ನಾಯಕ ಕೆಎಲ್ ರಾಹುಲ್ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ, ಅರ್ಧಶತಕದ ಬಳಿಕ ಸ್ಫೋಟಕ ಆಟವಾಡಿದ ರಾಹುಲ್​ಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 55 ಎಸೆತಗಳಲ್ಲಿ 9 ಬೌಂಡರಿ ಮತ್ತು ಎರಡು ಸಿಕ್ಸರ್​ನೊಂದಿಗೆ ರಾಹುಲ್ 74 ರನ್ ಗಳಿಸಿ ಔಟಾದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಕೇವಲ 132 ರನ್​ ಗಳಿಸಲು ಮಾತ್ರ ಶಕ್ತವಾಗಿ ಸೋಲಿಗೆ ಶರಣಾಯಿತು. ಅಕ್ಟೋಬರ್‌ 16 ರಿಂದ ಆರಂಭವಾಗುವ ಈ ಮಹತ್ವದ ಟೂರ್ನಿಯಲ್ಲಿ ಭಾರತ ಅ. 23 ರಂದು ಮೆಲ್ಬೋರ್ನ್‌ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.



source https://tv9kannada.com/sports/cricket-news/rohit-sharma-virat-kohli-seen-with-the-bat-in-the-middle-right-after-india-vs-western-australia-warm-up-game-vb-au48-454836.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...