ದಾವಣಗೆರೆ: ಕರೊನಾದಿಂದ ಮೃತಪಟ್ಟ ಯುವಕನ ದೇಹವನ್ನು ತರದಂತೆ ಗ್ರಾಮಸ್ಥರು ವಿರೋಧಿಸಿದ ಅಮಾನವೀಯ ನಡೆ ಒಂದೆಡೆಯಾದರೆ, ಮತ್ತೊಂದೆಡೆ ಅದೇ ಶವವನ್ನು ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಬೇರೆಡೆಯ ಸ್ಮಶಾನಕ್ಕೆ ಕೊಂಡೊಯ್ದು ಸಂಸ್ಕಾರ ನಡೆಸಿ ಶಾಸಕರೊಬ್ಬರು ಮಾನವೀಯತೆ ಮೆರೆದಿದ್ದಾರೆ. ಆಂಧ್ರಪ್ರದೇಶ ಮೂಲದ ಕುಟುಂಬವೊಂದು ಹೊನ್ನಾಳಿಯಲ್ಲಿ ನೆಲೆಸಿದ್ದು, ಆ ಕುಟುಂಬಕ್ಕೆ ಸೇರಿದ 31 ವರ್ಷದ ವ್ಯಕ್ತಿ ಕರೊನಾ ಸೋಂಕಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಅವರು ಬೆಳಗ್ಗೆ ಈ ಸೋಂಕಿತನ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದರು. ಅದಾದ ಒಂದು ಗಂಟೆಯಲ್ಲಿ ಈ ವ್ಯಕ್ತಿ ಮೃತಪಟ್ಟಿದ್ದ. ಆದರೆ ಈತನ ಶವವನ್ನು ಊರಿಗೆ ಕಳುಹಿಸಿಕೊಡದಂತೆ ಆಂಧ್ರಪ್ರದೇಶದ ಗ್ರಾಮವೊಂದರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಷಯವನ್ನು ತಿಳಿದ ಶಾಸಕ ರೇಣುಕಾಚಾರ್ಯ ಅವರು ಕೊನೆಗೆ ತಾವೇ ಆಂಬುಲೆನ್ಸ್ ಚಲಾಯಿಸಿಕೊಂಡು ಹೊನ್ನಾಳಿಯ ಸ್ಮಶಾನಕ್ಕೆ ಶವವನ್ನು ಕೊಂಡೊಯ್ದು ಅಲ್ಲಿ ಕುಟುಂಬಸ್ಥರ ಸಮ್ಮುಖ ಶವಸಂಸ್ಕಾರ ಮಾಡಿಸಿದ್ದಾರೆ. ಹೊನ್ನಾಳಿಯ ಹಿಂದೂ ರುದ್ರಭೂಮಿಯಲ್ಲಿ ಶಾಸಕರೇ ನೇತೃತ್ವವಹಿಸಿ ಸುಗಮವಾಗಿ ಅಂತ್ಯಸಂಸ್ಕಾರ ನಡೆಯುವಂತೆ ನೋಡಿಕೊಂಡು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.