Saturday 3 July 2021

ಸೋಮವಾರದಿಂದ ಅನ್‌ಲಾಕ್ : ಏನಿರುತ್ತೆ.. ಏನಿರಲ್ಲ..? : ಇಲ್ಲಿದೆ ಮಾಹಿತಿ

 


ಬೆಂಗಳೂರು : ರಾಜ್ಯದಲ್ಲಿ ಕೊವಿಡ್ - ಸೋಂಕು ಗಣನೀಯವಾಗಿ ಇಳಿಮುಖವಾದ ಕಾರಣ ಬರುವ ಸೋಮವಾರದಿಂದಲೇ ಕೆಲವು ನಿಬಂಧನೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ‌. ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸುವುದು ‌ಸೇರಿದಂತೆ ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಇಂದು ಸಂಜೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಿದರು. ಸೋಮವಾರ ಬೆಳಿಗ್ಗೆ 5 ಗಂಟೆಯಿಂದ 19-07- ಬೆಳಿಗ್ಗೆ 5.00 ಗಂಟೆಯವರೆಗೆ ರಾಜ್ಯ ಸರಕಾರ ಕೆಲವು ಸಡಿಲಿಕೆಗಳನ್ನು ಜಾರಿಗೊಳಿಸಿದೆ‌ ಎಂದು ಘೋಷಿಸಿದರು.

ಈ ವರೆಗೂ ಜಾರಿಯಲ್ಲಿದ್ದ ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿದ್ದರೆ, ವಾರಾಂತ್ಯದ ಕರ್ಫ್ಯೂ ತೆಗೆದುಹಾಕಲಾಗಿದೆ. ಪಬ್ ಗಳು ಯಥಾಸ್ಥಿತಿಯಲ್ಲೇ ಮುಂದುವರೆಯಲಿದ್ದು,ಬಾರ್ ಗಳು ಇನ್ನು ಮುಂದೆ ಎಂದಿನಂತೆ ದಿನ ಪೂರ್ತಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

ಆದರೆ ಕೊವಿಡ್ ಸೋಂಕು ಮತ್ತೆ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಬಹುದೆಂಬ ಭೀತಿಯಿಂದ ರಾಜ್ಯ ಸರಕಾರ ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದ್ದು, ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಬೇಕು. ಇವರೆಗೂ ಮುಚ್ಚಲ್ಪಟ್ಟಿದ್ದ ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಬಹುದಾಗಿದೆ ಎಂದರು. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸುವುದರ ಜೊತೆಗೆ ‌ ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ ಈಗಿರುವ ನಿರ್ಬಂಧ ಮುಂದುವರೆಯಲಿದೆ. ಬಹು ನಿರೀಕ್ಷಿತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ
ಬಗ್ಗೆ ಸರಕಾರ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿಲ್ಲ.ಈ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ ಎಂದು ತಿಳಿಸಿದರು.

ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಸಿ.ಎಂ.ಯಡಿಯೂರಪ್ಪ ಮನವಿ ಮಾಡಿದರು.

 


No comments:

Post a Comment