
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (BCCI) ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಮಂಡಳಿಯ ನೂತನ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಇದೀಗ ಈ ಆರೋಪದ ಕೇಂದ್ರ ಬಿಂದುವಾಗಿದ್ದಾರೆ. ತನ್ನ ಸೊಸೆ ಮಯಾಂತಿ ಲ್ಯಾಂಗರ್ (Mayanti Langer) ಅವರ ವೃತ್ತಿಯೇ ಇದೀಗ ಬಿನ್ನಿಗೆ ಸಂಕಷ್ಟ ತಂದೊಡ್ಡಿದೆ. ಬಿನ್ನಿ ವಿರುದ್ಧ ಬಿಸಿಸಿಐನಿಂದಲೇ ಹಿತಾಸಕ್ತಿ ಸಂಘರ್ಷದ (conflict of interest) ನಿಯಮ ಉಲ್ಲಂಘನೆ ಆರೋಪ ಮಾಡಲಾಗಿದ್ದು, ಬಿಸಿಸಿಐ ಎಥಿಕ್ಸ್ ಆಫೀಸರ್ ವಿನೀತ್ (Vineet Saran) ಸರನ್ ಅವರು ಬಿನ್ನಿಗೆ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿರುವುದಾಗಿ ನೋಟಿಸ್ ಕಳುಹಿಸಿದ್ದಾರೆ.
ತನ್ನ ವಿರುದ್ಧದ ಹಿತಾಸಕ್ತಿ ಸಂಘರ್ಷದ ಆರೋಪಗಳಿಗೆ ಡಿಸೆಂಬರ್ 20 ರೊಳಗೆ ಲಿಖಿತ ಉತ್ತರವನ್ನು ನೀಡುವಂತೆ ವಿನೀತ್ ಸರನ್, ಬಿನ್ನಿಯನ್ನು ಕೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಭಾರತದ ತವರು ಸರಣಿಯನ್ನು ಪ್ರಸಾರ ಮಾಡುವ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತನ್ನ ಸೊಸೆ ಕೆಲಸ ಮಾಡುತ್ತಿರುವುದರಿಂದ ಬಿನ್ನಿ ಹಿತಾಸಕ್ತಿ ಸಂಘರ್ಷವನ್ನು ಹೊಂದಿದ್ದಾರೆ ಎಂದು ಈ ಹಿಂದೆ ದೂರುದಾರ ಸಂಜೀವ್ ಗುಪ್ತಾ ಆರೋಪಿಸಿದ್ದರು. ದೂರಿನನ್ವಯ ಕ್ರಮಕ್ಕೆ ಮುಂದಾಗಿರುವ ಬಿಸಿಸಿಐ, ನೂತನ ಅಧ್ಯಕ್ಷ ರೋಜರ್ ಬಿನ್ನಿಗೆ ಈ ಬಗ್ಗೆ ನೋಟಿಸ್ ನೀಡಿದೆ.
ನೋಟಿಸ್ನಲ್ಲಿರುವುದೇನು?
ಬಿಸಿಸಿಐ ನಿಯಮ 39(2)(ಬಿ) ಅಡಿಯಲ್ಲಿ ದೂರು ಸ್ವೀಕರಿಸಲಾಗಿದ್ದು, ತಾವು 38 (1) (ಐ) ಮತ್ತು 38 (2) ನಿಯಮವನ್ನು ಉಲ್ಲಂಘಿಸಿದ್ದೀರಿ ಎಂಬ ಆರೋಪ ಕೇಳಿಬಂದಿದೆ. ಬಿಸಿಸಿಐನ ನೈತಿಕ ಅಧಿಕಾರಿ ವಿನೀತ್ ಸರನ್, ಸಂಜೀವ್ ಗುಪ್ತಾ ಅವರಿಂದ ದೂರು ಸ್ವೀಕರಿಸಿದ್ದಾರೆ. ಅಂತೆಯೇ, 20 ಡಿಸೆಂಬರ್ 2022 ರಂದು ಅಥವಾ ಈ ದಿನಾಂಕಕ್ಕೂ ಮೊದಲು ದೂರಿಗೆ ಸಂಬಂಧಿಸಿದಂತೆ ನಿಮ್ಮ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಲು ನಿಮಗೆ ನಿರ್ದೇಶಿಸಲಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ‘ಕ್ಲಾಸ್ ಪ್ಲೇಯರ್’..! ಕೊಹ್ಲಿಯನ್ನು ಹೊಗಳಿದ ಬಿಸಿಸಿಐ ನೂತನ ಅಧ್ಯಕ್ಷ ಕನ್ನಡಿಗ ರೋಜರ್ ಬಿನ್ನಿ
ಗಂಗೂಲಿ ಸ್ಥಾನಕ್ಕೆ ಬಿನ್ನಿ ಆಯ್ಕೆ
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಬಿನ್ನಿ, ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಸ್ಥಾನಕ್ಕೆ 36 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಟೀಂ ಇಂಡಿಯಾದಲ್ಲಿ ಸಾಕಷ್ಟು ಸೇವೆ ಸಲ್ಲಿಸಿರುವ ಬಿನ್ನಿ ಈ ಹಿಂದೆ ಹಿರಿಯ ಆಯ್ಕೆ ಸಮಿತಿಯ ಭಾಗವಾಗಿಯೂ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಬಿನ್ನಿಗೆ ಕೋಚಿಂಗ್ ಮಾಡಿದ ಅನುಭವವೂ ಇದ್ದು, ಅವರು 2000ದಂದು ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿದ್ದರು. ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ ಕೂಡ ಭಾರತ ಪರ ಆಡಿದ್ದಾರೆ. ರೋಜರ್ ಬಿನ್ನಿ ಭಾರತದ ಪರ 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಮಾಯಾಂತಿ ಪ್ರಸಿದ್ಧ ಆಂಕರ್
ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮತ್ತು ರೋಜರ್ ಅವರ ಸೊಸೆ ಮಯಾಂತಿ ಲ್ಯಾಂಗರ್ ಅವರು ಕ್ರೀಡಾ ಆ್ಯಂಕರಿಂಗ್ ಜಗತ್ತಿನಲ್ಲಿ ಚಿರಪರಿಚಿತ ಹೆಸರು. ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮಾಡುವ ಭಾಗಶಃ ಎಲ್ಲಾ ಸರಣಿಗಳಲ್ಲಿ ಮಾಯಾಂತಿ ಆ್ಯಂಕರಿಂಗ್ ಇದ್ದೇ ಇರುತ್ತದೆ. ಹೆಚ್ಚಾಗಿ ಸ್ಟಾರ್ ಸ್ಪೋರ್ಟ್ಸ್‌ನ ಇಂಗ್ಲಿಷ್ ಚಾನೆಲ್‌ಗಳಲ್ಲಿ ಮಾಯಾಂತಿ ಕಾಣಿಸಿಕೊಳ್ಳುತ್ತಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
source https://tv9kannada.com/sports/cricket-news/bcci-president-roger-binny-receives-conflict-of-interest-notice-case-related-to-mayanti-langer-psr-au14-478405.html
Comments
Post a Comment